ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸೆಯಲ್ಲಿ ಗೂಢಚಾರಿ | ಪತ್ರಕರ್ತರು, ಚಳವಳಿಗಾರರ ಮೊಬೈಲ್‌ಗಳಲ್ಲಿ ಸ್ಪೈವೇರ್

Last Updated 31 ಅಕ್ಟೋಬರ್ 2019, 8:16 IST
ಅಕ್ಷರ ಗಾತ್ರ

ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿ ನಡೆದ ಪತ್ರಕರ್ತನ ಹತ್ಯೆ ನಿಮಗೆ ನೆನಪಿರಬಹುದು. ಸೌದಿ ಅರೇಬಿಯಾ ಆಡಳಿತ ತೆಗೆದುಕೊಳ್ಳುತ್ತಿದ್ದ ಕೆಲ ನಿರ್ಧಾರಗಳನ್ನು ಟೀಕಿಸಿದ್ದ ‘ವಾಷಿಂಗ್ಟನ್ ಪೋಸ್ಟ್‌’ನ ಪತ್ರಕರ್ತ ಜಮಾಲ್ ಖಶೋಗ್ಗಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದರು.

ಸೌದಿ ಅರೇಬಿಯಾ ರಾಜತಾಂತ್ರಿಕ ಕಚೇರಿಯ ಒಳಗೆ ಹೋದ ಅವರು ಜೀವಂತವಾಗಿಹೊರಬರಲೇ ಇಲ್ಲ. ಸೌದಿ ಗುಪ್ತಚರ ಏಜೆಂಟರು ತಮ್ಮ ಕಾನ್ಸೂಲ್ ಕಚೇರಿಯಲ್ಲಿಯೇ ಖಶೋಗ್ಗಿ ಅವರನ್ನು ಕೊಂದು, ಅವರ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ಗಳಲ್ಲಿ ತುಂಬಿಸಿ ಹೊರಗೆ ಸಾಗಿಸಿದ್ದರು. ಈ ವಿಚಾರವಾಗಿ ಅಮೆರಿಕ–ಟರ್ಕಿ–ಸೌದಿ ಅರೇಬಿಯಾ ನಡುವೆ ಕೆಲ ದಿನಗಳು ರಾಜತಾಂತ್ರಿಕ ತಿಕ್ಕಾಟಗಳೂ ನಡೆದಿದ್ದವು.

ಈಗ ಈ ಘಟನೆ ನೆನಪಾಗಲು ಕಾರಣವಿದೆ. ಖಶೋಗ್ಗಿ ಹತ್ಯೆಗೆ ಮುನ್ನ ಅವರ ಚಲನಲನದ ಮೇಲೆ ಸೌದಿ ಆಡಳಿತ ನಿಗಾ ಇಡಲು ನೆರವಾಗಿತ್ತು ಎನ್ನುವ ಆರೋಪ ಎದುರಿಸುತ್ತಿದ್ದಇಸ್ರೇಲಿ ಸ್ಪೈವೇರ್ (ಗೂಢಚಾರಿ ತಂತ್ರಾಂಶ) ಪೆಗಾಸಸ್ (Pegasus) ಇದೀಗ ಭಾರತದಲ್ಲೂ ಹಲವು ಪತ್ರಕರ್ತರ ಮೊಬೈಲ್‌ಗಳಿಗೆ ಪ್ರವೇಶ ಪಡೆದಿದೆ. ಈ ವಿಚಾರವನ್ನುಸ್ವತಃ ವಾಟ್ಸ್ಯಾಪ್‌ ಬಹಿರಂಗಪಡಿಸಿದೆ.

‘ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಮಾನವಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರ ಮೊಬೈಲ್‌ಗಳಲ್ಲೂ ಈ ಗೂಢಚಾರಿ ತಂತ್ರಾಂಶ ಮೇ 2019ರವರೆಗೆ ಎರಡು ವಾರಗಳ ಕಾಲ ಕಾರ್ಯನಿರತವಾಗಿತ್ತು’ ಎನ್ನುವ ಮಾಹಿತಿಯನ್ನು ವಾಟ್ಸ್ಯಾಪ್‌ ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್‌ ಎಕ್ಸ್‌ಪ್ರೆಸ್’ ಜಾಲತಾಣ ವರದಿ ಮಾಡಿದೆ.

ಏನಿದು ಪೆಗಾಸಸ್? ಏನೆಲ್ಲಾ ಮಾಡುತ್ತೆ?

ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಆಗಿರುವ ವಾಟ್ಸ್ಯಾಪ್‌ ಸಂಖ್ಯೆಗೆ ಒಂದು ಮಿಸ್ಡ್‌ ವಿಡಿಯೊ ಕಾಲ್ ಕೊಡುವ ಮೂಲಕ ಪೆಗಾಸಸ್‌ ಕೆಲಸ ಶುರು ಮಾಡುತ್ತೆ. ಫೋನ್ ಅನ್‌ಲಾಕ್ ಆದ ತಕ್ಷಣ ತನ್ನಿಂತಾನೆ ಇನ್‌ಸ್ಟಾಲ್ ಆಗುವ ಆ್ಯಪ್, ಮೊಬೈಲ್‌ನ ರಕ್ಷಣಾ ತಂತ್ರಾಂಶಗಳನ್ನು (ಸೆಕ್ಯುರಿಟಿ ಆ್ಯಪ್‌ಗಳು)ತನಗೆ ಬೇಕಾದಂತೆ ಬದಲಿಸಿಕೊಂಡು ಎಲ್ಲೋ ದೂರದಲ್ಲಿರುವ ತನ್ನ ಒಡೆಯನ ಸರ್ವರ್‌ಗೆಮಾಹಿತಿ ರವಾನಿಸಲು ಆರಂಭಿಸುತ್ತೆ.

ಮೊಬೈಲ್‌ನಲ್ಲಿರುವ ಖಾಸಗಿ ದತ್ತಾಂಶಗಳು, ಪಾಸ್‌ವರ್ಡ್‌, ಕಾಂಟಾಕ್ಟ್‌ ಲಿಸ್ಟ್, ಕ್ಯಾಲೆಂಡರ್ ಈವೆಂಟ್, ನೋಟ್ಸ್‌, ಟೆಕ್ಸ್ಟ್‌ ಮೆಸೇಜ್‌, ಕ್ಲೌಡ್‌ನಲ್ಲಿರುವ ದತ್ತಾಂಶಗಳು (ಗೂಗಲ್‌ ಡ್ರೈವ್‌, ಒನ್‌ಡ್ರೈ ಇತ್ಯಾದಿ), ಮೊಬೈಲ್ ಮೆಸೆಂಜಿಂಗ್‌ ಆ್ಯಪ್‌ಗಳ ಮೂಲಕ ಮಾಡುವ–ಸ್ವೀಕರಿಸುವ ಕಾಲ್‌ಗಳ ವಿವರಗಳೂ ಸಹ ದೂರದೆಲ್ಲೆಲ್ಲೋ ಇರುವ ಸರ್ವರ್‌ನಲ್ಲಿ ಸತತವಾಗಿ ದಾಖಲಾಗುತ್ತಲೇ ಇರುತ್ತವೆ.

ನೀವು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರದೇಶದಲ್ಲಿದ್ದೀರಿಎಂದು ಅರಿವಾದರೆ ಅಥವಾ ತನಗೆ ಬೇಕೆಂದಾಗ ಅಲ್ಲೆಲ್ಲೋ ದೂರದಲ್ಲಿರುವ ಅದರ ನಿಯಂತ್ರಕ ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಮೊಬೈಲ್‌ನ ಕ್ಯಾಮೆರಾ–ಮೈಕ್ರೋಫೋನ್‌ ಆನ್ ಮಾಡಿ ಅದನ್ನೇ ಕಣ್ಣು–ಕಿವಿಯಾಗಿಸಿಕೊಂಡು ನಿಮ್ಮನ್ನೇ ದಾಳವಾಗಿಸಿಕೊಂಡು ಗೂಢಚಾರಿಕೆ ನಡೆಸಬಲ್ಲ. ತನಗೆ ಬೇಕಾದ ಮಾಹಿತಿ–ದತ್ತಾಂಶಗಳನ್ನು ಸಂಗ್ರಹಿಸಬಲ್ಲ.

ಆ್ಯಪ್‌ ಜಗತ್ತಿನಲ್ಲಿ ಇಂಥ ಸಾವಿರಾರು ಸ್ಪೈವೇರ್‌ಗಳಿವೆ. ತಿಳಿದೋ–ತಿಳಿಯದೆಯೋ ಬಳಕೆದಾರರು ಇನ್‌ಸ್ಟಾಲ್ ಬಟನ್ ಕ್ಲಿಕ್ ಮಾಡದಿದ್ದರೆ ಬಹುತೇಕ ಸಂದರ್ಭಗಳಲ್ಲಿ ಅವು ಕಾರ್ಯನಿರ್ವಹಿಸಲು ಆಗುವುದಿಲ್ಲ. ಆದರೆ ಪೆಗಾಸಸ್ ವಿಚಾರದಲ್ಲಿ ಹಾಗಲ್ಲ. ನಿಮ್ಮ ಮೊಬೈಲ್‌ಗೆ ಒಂದು ಮಿಸ್ಡ್‌ಕಾಲ್‌ ಕೊಟ್ಟು, ತನ್ನಿಂತಾನೆ ಇನ್‌ಸ್ಟಾಲ್‌ ಆಗಿ, ತನಗೆ ಬೇಕಾದಂತೆ ನಿಮ್ಮ ಡಿವೈಸ್ ಮಾರ್ಪಡಿಸಿಕೊಂಡು, ನಿಮ್ಮಲ್ಲಿರುವ ಮಾಹಿತಿಯನ್ನೆಲ್ಲಾ ಕದ್ದು ರವಾನಿಸಿ, ಸದಾ ನಿಮ್ಮ ಮೇಲೆ ಕಣ್ಣಿಡುವ ಅಸಾಧಾರಣ ಸಾಮರ್ಥ್ಯ ಅದಕ್ಕಿದೆ.

ಹೀಗಾಗಿಯೇ ಸ್ವತಃ ವಾಟ್ಸ್ಯಾಪ್‌ನಂಥ ದೊಡ್ಡ ಕಂಪನಿ ಇದೀಗ ಪೆಗಾಸಸ್ ವಿರುದ್ಧ ಅಮೆರಿಕದ ಕಾನೂನು ಪ್ರಾಧಿಕಾರಕ್ಕೆ ದೂರು ನೀಡಿದೆ.

Image Credit:citizenlab
Image Credit:citizenlab

ಬೆಳಕಿಗೆ ಬಂದಿದ್ದು ಹೇಗೆ?

ಕಳೆದ ಮಂಗಳವಾರ (ಅ.29) ಅಮೆರಿಕದ ಕ್ಯಾಲಿಫೋರ್ನಿಯಾ ಫೆಡರಲ್ ನ್ಯಾಯಾಲಯದಲ್ಲಿ ಫೇಸ್‌ಬುಕ್ ಮಾಲೀಕತ್ವದಲ್ಲಿರುವ ಪರ್ಸನಲ್ ಮೆಸೇಜಿಂಗ್‌ ಆ್ಯಪ್‌ ವಾಟ್ಸ್ಯಾಪ್‌ನ ಪ್ರತಿನಿಧಿಗಳು ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಮೇಲೆ ದಾವೆ ಹೂಡಿದರು.

‘ವಾಟ್ಸ್ಯಾಪ್‌ ಆ್ಯಪ್ ಮೂಲಕಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಮತ್ತು ಚಳವಳಿಗಾರರ ಮೇಲೆ ಗೂಢಚರ್ಯೆ ನಡೆಸಲು ಎನ್‌ಎಸ್‌ಒ ಗ್ರೂಪ್‌ ಹಲವರಿಗೆ ಅನುವು ಮಾಡಿಕೊಟ್ಟಿದೆ’ ಎನ್ನುವುದು ಅವರ ಆರೋಪವಾಗಿತ್ತು. ಈ ವಿಷಯವನ್ನು ‘ಎನ್‌ಡಿಟಿವಿ’ ಜಾಲತಾಣ ಬುಧವಾರ ವರದಿ ಮಾಡಿತ್ತು.

ಪೆಗಾಸಸ್ ಹೆಸರಿನ ಸ್ಪೈವೇರ್‌ ಮೂಲಕ ವಿಶ್ವದ ವಿವಿಧೆಡೆ ಒಟ್ಟು 1400 ಮಂದಿಯ ಮೇಲೆ ಗೂಢಚರ್ಯೆ ಪ್ರಯತ್ನ ನಡೆದಿದೆ ಎಂದು ವಾಟ್ಸ್ಯಾಪ್ ಹೇಳಿತ್ತು. ಇದರಲ್ಲಿ ಭಾರತೀಯರೂ ಇದ್ದಾರೆ ಎಂಬುದನ್ನು ವಾಟ್ಸ್ಯಾಪ್‌ನ ನಿರ್ದೇಶಕ (ಸಂವಹನ) ಕಾರ್ಲ್‌ ವುಡ್‌ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ನೀಡಿದ ಸಂದರ್ಶನದಲ್ಲಿ ದೃಢಪಡಿಸಿದ್ದರು.

‘ಯಾರದೆಲ್ಲಾ ಮೊಬೈಲ್‌ಗಳಲ್ಲಿ ಸ್ಪೈವೇರ್‌ ಅಡಗಿ ಕುಳಿತಿದೆ ಎಂಬುದು ನಮಗೆ ಗೊತ್ತಾಗಿದೆ. ಅವರೆಲ್ಲರನ್ನೂ ಪ್ರತ್ಯೇಕವಾಗಿ ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ. ನಿರ್ದಿಷ್ಟವಾಗಿ ಇಷ್ಟೇ ಸಂಖ್ಯೆಯ ಭಾರತೀಯರ ಮೇಲೆ ಗೂಢಚರ್ಯೆ ನಡೆಯುತ್ತಿದೆ ಎಂಬುದನ್ನಾಗಲೀ ಅಥವಾ ಕಣ್ಗಾವಲಿಗೆ ಗುರಿಯಾದವರ ವಿವರಗಳನ್ನಾಗಲೀ ಕೊಡಲು ಸಾಧ್ಯವಿಲ್ಲ. ಪತ್ರಕರ್ತರು ಮತ್ತು ಚಳಿವಳಿಗಾರರನ್ನು ಗೂಢಚರ್ಯೆಗೆ ಗುರಿಯಾಗಿಸಲಾಗಿತ್ತು ಎಂಬುದು ನಿಜ’ ಎಂದು ವಾಟ್ಸ್ಯಾಪ್‌ ‘ಸಿಎನ್‌ಬಿಸಿ’ ಜಾಲತಾಣಕ್ಕೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಈವರೆಗೆ ಭಾರತದಲ್ಲಿ ಕನಿಷ್ಠ 24 ಪತ್ರಕರ್ತರು, ಶಿಕ್ಷಣ ತಜ್ಞರು, ವಕೀಲರು ಮತ್ತು ದಲಿತ ಹೋರಾಟಗಾರರಿಗೆ ‘ನಿಮ್ಮ ಮೇಲೆ ಮೇ ತಿಂಗಳಲ್ಲಿ ಗೂಢಚರ್ಯೆ ನಡೆದಿತ್ತು’ ಎನ್ನುವ ಮಾಹಿತಿಯನ್ನು ವಾಟ್ಸ್ಯಾಪ್‌ ರವಾನಿಸಿದೆ ಎಂದು ಹಲವು ಜಾಲತಾಣಗಳು ವರದಿ ಮಾಡಿವೆ.

Image Credit:citizenlab
Image Credit:citizenlab

ರಾಜಕೀಯ ಮತ್ತು ಕಣ್ಗಾವಲು

ತಮ್ಮ ಮೇಲೆ ಡಿಜಿಟಲ್ ಗೂಢಚರ್ಯೆ ನಡೆಯುತ್ತಿದೆ ಎಂದು ಅನುಮಾನಗೊಂಡಿದ್ದ ಒಂದಿಷ್ಟು ಅರಬ್ಮಾನವ ಹಕ್ಕು ಹೋರಾಟಗಾರರು ಕೆನಡಾ ಮೂಲಕ ಸೈಬರ್ ಸೆಕ್ಯುರಿಟಿ ಗ್ರೂಪ್ ‘ಸಿಟಿಜನ್ ಲ್ಯಾಬ್‌’ ಸಂಪರ್ಕಿಸಿದ್ದರು. ಅವರ ಕೋರಿಕೆ ಮೇಲೆ ಕಾರ್ಯಪ್ರವೃತ್ತರಾದ ಸಿಟಿಜನ್ ಲ್ಯಾಬ್ ತಂತ್ರಜ್ಞರು ಭಾರತವೂ ಸೇರಿದಂತೆ ವಿಶ್ವದ 45 ದೇಶಗಳಲ್ಲಿ 33 ಪೆಗಾಸಸ್‌ (ಸ್ಪೈವೇರ್) ಆಪರೇಟರ್‌ಗಳು ಸಕ್ರಿಯವಾಗಿರುವುದನ್ನು ಪತ್ತೆ ಮಾಡಿದ್ದರು. ಈ ಪೈಕಿ ಗ್ಯಾಂಜಸ್ (Ganges) ಹೆಸರಿನ ಆಪರೇಟರ್‌ ರಾಜಕೀಯ ಪ್ರೇರಿತ ಡೊಮೈನ್‌ನೊಂದಿಗೆ ಭಾರತದಲ್ಲಿ ಸಕ್ರಿಯವಾಗಿತ್ತು ಎಂದು ಸಿಟಿಜನ್ ಲ್ಯಾಬ್ ಹೇಳಿತ್ತು.

ಸೌದಿ ಅರೇಬಿಯಾದ ಗುಪ್ತಚರ ಏಜೆಂಟರು ಅಲ್ಲಿನ ಸರ್ಕಾರದ ಸೂಚನೆ ಮೇರೆಗೆ ಪತ್ರಕರ್ತ ಜಮಾಲ್ ಖಶೋಗ್ಗಿ ಅವರನ್ನುಟರ್ಕಿರಾಜಧಾನಿ ಇಸ್ತಾಂಬುಲ್‌ನ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಕೊಲೆ ಮಾಡಿದ್ದರು. ಈ ಪ್ರಕರಣದನಂತರ ಸೌದಿ ಅರೇಬಿಯಾಗೆ ನೀಡಿದ್ದ ಲೈಸೆನ್ಸ್‌ ಅನ್ನು ಎನ್‌ಎಸ್‌ಒ ಗ್ರೂಪ್‌ ರದ್ದುಪಡಿಸಿತ್ತು. ಈ ಕ್ರಮವೂ ಅಲ್ಲಿನವರ ಅನುಮಾನಗಳಿಗೆ ಪುಷ್ಟಿ ನೀಡಿತ್ತು.

ವಾಟ್ಸ್ಯಾಪ್‌ ಏನೋ ತನ್ನ ಆ್ಯಪ್‌ ಮೂಲಕ ಕಳಿಸುವ ಎಲ್ಲ ಮೆಸೇಜ್, ಫೋಟೊ, ವಿಡಿಯೊಗಳನ್ನು ಗೂಢಲಿಪಿ (encryption) ಮೂಲಕ ಸುರಕ್ಷಿತವಾಗಿ ಇರಿಸಲಾಗುವುದು ಎಂದು ಬಳಕೆದಾರರಿಗೆ ಭರವಸೆ ನೀಡಿದೆ. ಆದರೆ ವಾಟ್ಸ್ಯಾಪ್‌ ಅನ್ನು ಒಂದು ಕೊಕ್ಕೆಯಾಗಿಸಿ,ಆದರ ಮೂಲಕಫೋನ್‌ನೊಳಗೇ ಇಳಿದುಬಿಡುವ ಎನ್‌ಎಸ್‌ಒ ಪೆಗಾಸಸ್‌ ಗೂಢಚಾರಿ ತಂತ್ರಾಂಶ ವಾಟ್ಸ್ಯಾಪ್‌ನ ಗೂಢಲಿಪಿ ಗೋಡೆಯನ್ನು ಲೆಕ್ಕಕ್ಕೇ ಇರಿಸಿಕೊಂಡಿಲ್ಲ. ಮೊಬೈಲ್‌ನಲ್ಲಿ ಸೇವ್ ಮಾಡುವ ಯಾವುದೂ ಸುರಕ್ಷಿತವಲ್ಲ ಎಂದು ಸಾಬೀತುಪಡಿಸಿರುವ ಪೆಗಾಸಸ್ ತಂತ್ರಜ್ಞಾನ ಜಗತ್ತಿನ ಹೊಸ ಆತಂಕವಾಗಿ ಹೊರಮೊಮ್ಮಿದೆ.

ಆರೋಪ ತಳ್ಳಿಹಾಕಿದ ಎನ್‌ಎಸ್‌ಒ ಗ್ರೂಪ್

ಪೆಗಾಸಸ್‌ ಅಭಿವೃದ್ಧಿಪಡಿಸಿ, ಅದನ್ನು ಲೈಸೆನ್ಸಿಂಗ್ ಕೊಡುವ ಮೂಲಕ ಸರ್ಕಾರಗಳಿಗೆ ಮಾರಾಟ ಮಾಡುವುದು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಒಡೆತನದಲ್ಲಿರುವಸೈಬರ್ ಟೆಕ್ನಾಲಜಿಸ್‌ನ ಕೆಲಸ. ಈ ಕಂಪೆನಿಯ ಮೇಲೆ ವಾಟ್ಸ್ಯಾಪ್ ಹೂಡಿರುವ ದಾವೆಯಲ್ಲಿ, ‘ಇದು ವಾಟ್ಸ್ಯಾಪ್‌ನ ನಿಯಮಗಳು ಮತ್ತು ಕ್ಯಾಲಿಫೋರ್ನಿಯಾದಲ್ಲಿ ಜಾರಿಯಲ್ಲಿರುವ ಕಾನೂನುಗಳ ಉಲ್ಲಂಘನೆ’ ಎಂದು ನಮೂದಿಸಲಾಗಿದೆ.

ತನ್ನ ಮೇಲೆ ಹೊರಿಸಿದ ಆರೋಪಗಳನ್ನು ಎನ್‌ಎಸ್‌ಒ ಗ್ರೂಪ್ ಸಾರಾಸಗಟಾಗಿ ತಳ್ಳಿಹಾಕಿದೆ. ‘ಈ ಆರೋಪಗಳನ್ನು ನಾವು ಕಟು ಶಬ್ದಗಳಲ್ಲಿ ನಿರಾಕರಿಸುತ್ತೇವೆ. ನ್ಯಾಯಾಲಯಗಳಲ್ಲಿ ಹೋರಾಡುತ್ತೇವೆ.ಸ್ಮಾರ್ಟ್‌ಫೋನ್‌ಗಳ ಗೂಢಚಾರಿಕೆ ಮಾಡುವ ಪೆಗಾಸಸ್ ತಂತ್ರಾಂಶವನ್ನು ಕೇವಲ ಸರ್ಕಾರಿ ಸಂಸ್ಥೆಗಳಿಗೆ ನಾವು ಮಾರುತ್ತೇವೆ. ನಾವು ರೂಪಿಸಿದ ತಂತ್ರಜ್ಞಾನವನ್ನು ಪತ್ರಕರ್ತರು ಅಥವಾ ಮಾನವ ಹಕ್ಕು ಹೋರಾಟಗಾರರ ವಿರುದ್ಧ ಬಳಸಲು ಎಂದಿಗೂ ಅನುಮತಿ (ಲೈಸೆನ್ಸ್) ಕೊಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಗೃಹ ಕಾರ್ಯದರ್ಶಿ ಎ.ಕೆ.ಭಲ್ಲಾ, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎ.ಪಿ.ಸಹಾನಿ ಅವರ ಪ್ರತಿಕ್ರಿಯೆ ಪಡೆಯಲು ಹಲವು ಭಾರತೀಯ ಪತ್ರಕರ್ತರು ಯತ್ನಿಸಿದ್ದಾರೆ. ಆದರೆ ಸರ್ಕಾರ ಈವರೆಗೆ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT