ಶುಕ್ರವಾರ, ನವೆಂಬರ್ 22, 2019
20 °C
ವಿಜ್ಞಾನಿಯಾದ ರೈತನ ಮಗನ ಜೀವನಗಾಥೆ

'ಬಯಸಿದ್ದು ಸಿಗಲಿಲ್ಲ, ಸಿಕ್ಕಿದ್ದು ಕಡೆಗಣಿಸಲಿಲ್ಲ'; ಇಸ್ರೊ ಅಧ್ಯಕ್ಷ ಕೆ.ಶಿವನ್‌

Published:
Updated:

ಬೆಂಗಳೂರು: ರೈತನ ಮಗನಾಗಿ ಕೃಷಿ ಚಟುವಟಿಕೆಗಳಲ್ಲಿ ಅಪ್ಪನಿಗೆ ಹೆಗಲು ಕೊಡುತ್ತಿದ್ದ ಹುಡುಗ ಎಂಐಟಿಗೆ ಸೇರುವವರೆಗೆ ಯಾವತ್ತಿಗೂ ಕಾಲಿಗೆ ಚಪ್ಪಲಿ ತೊಟ್ಟಿರಲಿಲ್ಲ. ಸೂಟು, ಪ್ಯಾಂಟು ಕಾಣದ ದಿನಗಳಲ್ಲಿ ಪಂಚೆಯಲ್ಲೇ ಸಾಗುತ್ತಿದ್ದ ಬದುಕಿನ ಕ್ಷಣಗಳನ್ನು ಇಸ್ರೊ ಅಧ್ಯಕ್ಷ ಕೆ.ಶಿವನ್‌ ನೆನಪಿಸಿಕೊಂಡಿದ್ದಾರೆ.

ವಿಕ್ರಂ ಲ್ಯಾಂಡರ್‌ ಚಂದ್ರನ ಅಂಗಳದಿಂದ 2.1 ಕಿ.ಮೀ. ದೂರದಲ್ಲಿದ್ದಾಗ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆ ವಿಜ್ಞಾನಿಗಳಲ್ಲಿನ ಸಂತಸ ಇಂಗಿ ಹೋಯಿತು. ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳನ್ನು ಹುರಿದುಂಬಿಸುವ ಪ್ರಯತ್ನ ನಡೆಸಿದರು. ಚಂದ್ರಯಾನ 2 ಯೋಜನೆಯ ನೇತೃತ್ವ ವಹಿಸಿರುವ ಕೆ.ಶಿವನ್‌ ಅವರು ಭಾವುಕರಾದ ಸಮಯದಲ್ಲಿ ಮೋದಿ ಅಪ್ಪಿ ಸಂತೈಸಿದ ದೃಶ್ಯ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದೆ. 

ಇದನ್ನೂ ಓದಿ: ಭಾವುಕರಾದ ಇಸ್ರೊ ಅಧ್ಯಕ್ಷ ಶಿವನ್‌, ಸಮಾಧಾನಪಡಿಸಿದ ಪ್ರಧಾನಿ ಮೋದಿ

ಆರ್ಬಿಟರ್‌ ಚಂದ್ರನನ್ನು ಸುತ್ತುವುದು ಮುಂದುವರಿದಿದ್ದು, ಚಂದ್ರಯಾನ 2 ಯೋಜನೆ ಶೇ 95ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೊ ಹೇಳಿದೆ. ಯೋಜನೆ ಮುನ್ನಡೆಸುತ್ತಿರುವ ಶಿವನ್‌ ನಡೆದು ಬಂದ ಹಾದಿಯು ಈಗ ಮುನ್ನೆಲೆಗೆ ಬಂದಿದೆ. ಅವರು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಶಿಕ್ಷಣ, ವೃತ್ತಿ ಬದುಕು, ಬಾಲ್ಯದ ಕುರಿತು ಹೇಳಿಕೊಂಡಿದ್ದಾರೆ. 

ಶಿವನ್‌ ಅವರು ಹೇಳುವಂತೆ, ಇಡೀ ವೃತ್ತಿ ಜೀವನದಲ್ಲಿ ಅವರು ಬಯಸ್ಸಿದ್ದು ಯಾವತ್ತಿಗೂ ಸಿಗಲೇ ಇಲ್ಲ. ಆದರೆ, ಅವರಿಗೆ ದೊರೆತ ಯಾವ ಕಾರ್ಯವನ್ನೂ ಕಡೆಗಣಿಸದೆ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದರು. 

ಒಲಿದು ಬಂದ ಪಿಎಸ್‌ಎಲ್‌ವಿ ಯೋಜನೆ

‘ಉಪಗ್ರಹ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಬಯಸಿದ್ದೆ. ಆದರೆ, ವಿಕ್ರಂ ಸಾರಾಭಾಯಿ ಕೇಂದ್ರದಲ್ಲಿ ಅವಕಾಶ ದೊರೆಯಿತು. ಅಲ್ಲಿ ಏರೋಡೈನಾಮಿಕ್ಸ್‌ ತಂಡವನ್ನು ಸೇರಲು ಕಾತುರನಾಗಿದ್ದೆ. ಆದರೆ, ಪಿಎಸ್‌ಎಲ್‌ವಿ ಯೋಜನೆಯೊಂದಿಗೆ ನನ್ನ ಕಾರ್ಯ ಸಾಗಿತು. ಎಲ್ಲ ಕಡೆಯೂ ನನಗೆ ಬೇಕಾಗಿದ್ದು ಸಿಗಲೇ ಇಲ್ಲ‘ ಎಂದು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಚಂದ್ರನ ನೆಲ ಸ್ಪರ್ಶದ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್‌ ವಿಕ್ರಮ್

ಡಾ.ಶಿವನ್‌ ಅವರು ತಮ್ಮ ವಿದ್ಯಾರ್ಥಿ ಜೀವನದ ಬಹುತೇಕ ದಿನಗಳಲ್ಲಿ ಪಂಚೆ ಧರಿಸಿ ಓಡಾಡಿದ್ದರು. ಆಗ ಪ್ಯಾಂಟ್‌ ಧರಿಸಿ ಓಡಾಡುವಷ್ಟು ಆರ್ಥಿಕ ಸ್ಥಿತಿಯಲ್ಲಿ ಅವರಿರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಎದುರಾದ ಕಷ್ಟಗಳು ಅವರನ್ನು ಉನ್ನತ ವಿದ್ಯಾಭ್ಯಾಸದ ಗುರಿಯಿಂದ ಹಿಮ್ಮೆಟ್ಟಿಸಲಾಗಲಿಲ್ಲ. ಸಿಗದ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಬದುಕಿನ ಹಾದಿಯಲ್ಲಿ ದೊರೆತದ್ದರಲ್ಲಿಯೇ ಪರಿಣಿತರಾಗುತ್ತ ಸಾಗಿದರು. 

ಶಾಲೆ ಮುಗಿಯುತ್ತಿದ್ದಂತೆ ತೋಟದ ಕೆಲಸ

ಹಳ್ಳಿಯ ಪರಿಸರದಲ್ಲಿ ಬೆಳೆದ ಶಿವನ್‌ ಅವರು ಶಾಲೆಯಲ್ಲಿದ್ದಾಗ, ತರಗತಿ ಮುಗಿಯುತ್ತಿದ್ದಂತೆ ಜಮೀನಿನಲ್ಲಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು. ಕೃಷಿಕರಾಗಿದ್ದ ಅವರ ತಂದೆ ಮಾವಿನ ಹಣ್ಣಿನ ವ್ಯಾಪರವನ್ನೂ ಮಾಡುತ್ತಿದ್ದರು. ರಜೆ ದಿನಗಳಲ್ಲಿ ಮಾವಿನ ತೋಟಕ್ಕೆ ಹೋಗಿ ತಂದೆಯ ಕಾರ್ಯಗಳಲ್ಲಿ ಕೈಜೋಡಿಸುವುದು ಸಹಜವಾಗಿತ್ತು. ಶಿವನ್‌ ತೋಟದ ಕೆಲಸದಲ್ಲಿದ್ದರೆ, ಅವರ ತಂದೆ ಕೆಲಸಗಳಿಗೆ ಮತ್ತೊಬ್ಬರನ್ನು ಕರೆಸುತ್ತಿರಲಿಲ್ಲ. ಕಾಲೇಜು ದಿನಗಳಲ್ಲಿಯೂ ಸಹ ಕೃಷಿ ಕಾರ್ಯಗಳಲ್ಲಿ ಸಹಕರಿಸುತ್ತಿದ್ದರು. 

ಇದನ್ನೂ ಓದಿ: ಧೈರ್ಯದಿಂದ ಮುನ್ನುಗ್ಗೋಣ: ಇಸ್ರೊ ವಿಜ್ಞಾನಿಗಳಿಗೆ ವಿಶ್ವಾಸ ತುಂಬಿದ ಮೋದಿ

‘ವಿದ್ಯಾಭ್ಯಾಸಕ್ಕಾಗಿ ಕಾಲೇಜಿನ ಆಯ್ಕೆಯಲ್ಲಿ ಅವರದ್ದೇ ಆದ ಮಾನದಂಡಗಳಿರುತ್ತವೆ. ಮನೆಯ ಸಮೀಪವೇ ನಾನು ಕಲಿಯುವ ಕಾಲೇಜು ಇರಬೇಕು ಎಂಬುದಷ್ಟೇ ನನ್ನ ತಂದೆ ಹೊಂದಿದ್ದ ಮಾನದಂಡವಾಗಿತ್ತು. ಕಾಲೇಜು ಮುಗಿದ ನಂತರ ತೋಟದ ಕೆಲಸಗಳಲ್ಲಿ ಭಾಗಿಯಾಗಿ ತಂದೆಗೆ ಸಹಕಾರ ನೀಡಬಹುದೆಂಬ ಆಲೋಚನೆ...‘ ಎಂದು ಶಿವನ್‌ ಹೇಳಿದ್ದಾರೆ. 

‘ಮದ್ರಾಸ್‌ ಇನ್‌ಸ್ಟಿಟ್ಯೂಷನ್‌ ಆಫ್‌ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಸಮಯದಲ್ಲಿ ಕಾಲಿಗೆ ಚಪ್ಪಲಿ ಹಾಕುವುದನ್ನು ಪ್ರಾರಂಭಿಸಿದೆ. ಆವರೆಗೂ ಬರಿಯ ಕಾಲಿನಲ್ಲಿಯೇ ಓಡಾಟ ಸಾಗಿತ್ತು. ಒಂದಷ್ಟು ಕಷ್ಟಗಳ ನಡುವೆಯೂ ನನ್ನ ಪಾಲಕರು ಹೊಟ್ಟೆ ಭರ್ತಿ ಮೂರು ಹೊತ್ತಿನ ಊಟ ಒದಗಿಸುತ್ತಿದ್ದರು‘ ಎಂದು ನೆನಪಿಸಿಕೊಂಡಿದ್ದಾರೆ. 

ಎಂಜಿನಿಯರಿಂಗ್‌ ಸೇರಲು ವಾರ ಉಪವಾಸ!

ಎಂಜಿನಿಯರಿಂಗ್‌ ಸೇರಲು ಬಯಸಿದ್ದ ಶಿವನ್‌ ಅವರಿಗೆ ತಂದೆಯಿಂದ ವಿರೋಧ ವ್ಯಕ್ತವಾಯಿತು. ಹೆಚ್ಚು ಖರ್ಚಿನ ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಒಪ್ಪದೆ, ಬಿಎಸ್ಸಿ ಪದವಿಗೆ ಸೇರುವಂತೆ ಹೇಳಿದರು. ಅದಕ್ಕೆ ಒಪ್ಪದ ಶಿವನ್‌ ಹಠ ಹಿಡಿದರು. ವಾರದವರೆಗೂ ಉಪವಾಸ ಮಾಡಿ ತಂದೆಯ ಮನಸ್ಸು ಬದಲಿಸಲು ಒತ್ತಡ ಹಾಕಿದರು. ಅಂತಿಮವಾಗಿ ಶಿವನ್‌ ಅವರೇ ತನ್ನ ಮನಸ್ಸು ಬದಲಿಸಿಕೊಂಡರು. 

ಇದನ್ನೂ ಓದಿ: ಇಸ್ರೊ ಕೇಂದ್ರದಲ್ಲಿ ಸಂತಸದ ವಾತಾವರಣ ಕ್ಷಣದಲ್ಲಿ ಮಾಯ

ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪೂರೈಸಿದರು. ಪದವಿ ಪೂರ್ಣಗೊಳ್ಳುವ ಹೊತ್ತಿಗೆ ತಂದೆಯ ಮನಸ್ಸು ಬದಲಾಗಿತ್ತು. ಎಂಜಿನಿಯರಿಂಗ್‌ ಶಿಕ್ಷಣಕ್ಕಾಗಿ ಜಮೀನು ಮಾರಾಟ ಮಾಡಿ ಹಣ ಹೊಂದಿಸಿಕೊಡುವುದಾಗಿ ತಂದೆ ಹೇಳಿದರು. ಬಿಟೆಕ್‌ ಸೇರಿ ಎಂಜಿನಿಯರಿಂಗ್‌ ಶಿಕ್ಷಣ ಪೂರೈಸಿದ ನಂತರದಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಯಿತು. ಆ ಸಮಯದಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಮಾಡಿದ್ದವರಿಗೆ ದೇಶದಲ್ಲಿ ಅತ್ಯಂತ ಸೀಮಿತ ಅವಕಾಶಗಳಿದ್ದವು. ಎಚ್‌ಎಎಲ್‌ ಮತ್ತು ಎನ್‌ಎಎಲ್‌ ಎರಡೇ ಸಂಸ್ಥೆಗಳಲ್ಲಿ ಅವಕಾಶವಿತ್ತು. ಎರಡರಲ್ಲೂ ಕೆಲಸ ಸಿಗದ ಕಾರಣ ಉನ್ನತ ವ್ಯಾಸಂಗವನ್ನು ಐಐಎಸ್‌ಸಿಯಲ್ಲಿ ಮುಂದುವರಿಸಿದರು.  

ಇದನ್ನೂ ಓದಿ: ಚಂದ್ರಾನ್ವೇಷಣೆಯ ಜಾಡು ಹಿಡಿದು...

ಸಂಕ್ಷಿಪ್ತ ಪರಿಚಯ 

ಕನ್ಯಾಕುಮಾರಿ ಜಿಲ್ಲೆಯ ಮೂಲದವರಾದ ಕೆ.ಶಿವನ್‌ (62) ತಿರುವನಂತಪುರದಲ್ಲಿರುವ ‘ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಎ.ಎಸ್‌.ಕಿರಣ್‌ ಕುಮಾರ್‌ ಅವರ ಬಳಿಕ ಇಸ್ರೊ ಅಧ್ಯಕ್ಷರಾಗಿ ನೇಮಕಗೊಂಡರು. 

ಶಿವನ್‌ ಅವರು ಏರೋನಾಟಿಕಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ’ಮದ್ರಾಸ್‌ ತಾಂತ್ರಿಕ ಸಂಸ್ಥೆ’ಯಿಂದ ಪದವಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂಬೈನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಪಿಎಚ್‌.ಡಿ ಹೊಂದಿದ್ದಾರೆ.

ಪ್ರತಿಕ್ರಿಯಿಸಿ (+)