ಸೇನೆಯ ಕಣ್ಗಾವಲಿಗೆ ‘ಬೇಹುಗಾರಿಕೆ’ ಉಪಗ್ರಹ

ಬುಧವಾರ, ಜೂನ್ 19, 2019
25 °C
ಉಗ್ರರ ಶಿಬಿರದ ಮೇಲೆ ನಿಗಾವಹಿಸಲು ಬಳಕೆ

ಸೇನೆಯ ಕಣ್ಗಾವಲಿಗೆ ‘ಬೇಹುಗಾರಿಕೆ’ ಉಪಗ್ರಹ

Published:
Updated:
Prajavani

ಶ್ರೀಹರಿಕೋಟ: ‘ಬೇಹುಗಾರಿಕೆ’ ಉಪಗ್ರಹ ಎಂದೇ ಕರೆಯಲಾಗುವ ‘ರಿಸ್ಯಾಟ್‌–2ಬಿ’ ಅನ್ನು ಇಸ್ರೊ ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಬಾಹ್ಯಾಕಾಶದಿಂದ ಭೂಮಿ ಮೇಲೆ ನಿಗಾವಹಿಸುವ ಭೂ ಪರಿವೀಕ್ಷಣೆ ಉಪಗ್ರಹ ಇದಾಗಿದೆ. ಈ ಮೂಲಕ ಇಸ್ರೊ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ದಟ್ಟವಾದ ಮೋಡಗಳ ವಾತಾವರಣ ಛೇದಿಸಿ ನಿಗಾವಹಿಸುವ ಸಾಮರ್ಥ್ಯ ಹೊಂದಿರುವ ರಿಸ್ಯಾಟ್‌–2ಬಿ(ರೇಡಾರ್‌ ಇಮೇಜಿಂಗ್‌ ಸ್ಯಾಟಲೈಟ್‌–2ಬಿ), ಸೇನೆಯ ಕಣ್ಗಾವಲಿಗೆ ಮತ್ತು ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ನಿಗಾವಹಿಸಲು ಮಹತ್ವದ ಪಾತ್ರವಹಿಸಲಿದೆ. ಹೀಗಾಗಿ, ಈ ಉಪಗ್ರಹ ಉಡಾವಣೆ ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸುವಲ್ಲಿ ಮಹತ್ವದ್ದಾಗಿದೆ.

ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 5.30ಕ್ಕೆ 615 ಕಿಲೋ ಗ್ರಾಂ ತೂಕದ ಉಪಗ್ರಹ ಹೊತ್ತ ’ಪಿಎಸ್‌ಎಲ್‌ವಿ–ಸಿ46’ ಉಡಾವಣಾ ವಾಹಕ ಬಾನಂಗಳಕ್ಕೆ ನೆಗೆಯಿತು. ಉಡಾವಣೆಯಾದ 15 ನಿಮಿಷ 30 ಸೆಕೆಂಡ್‌ಗಳ ಬಳಿಕ 556 ಕಿಲೋ ಮೀಟರ್‌ ಅಂತರದಲ್ಲಿ ನಿಗದಿತ ಕಕ್ಷೆಗೆ ಉಪಗ್ರಹವನ್ನು ಸೇರಿಸಲಾಯಿತು.

 ರಿಸ್ಯಾಟ್ ಸರಣಿಯ ಮೂರನೆಯ ಉಪಗ್ರಹ ಇದಾಗಿದೆ. ಈ ಮೊದಲು ‘ರಿಸ್ಯಾಟ್ 1’ ಮತ್ತು ‘ರಿಸ್ಯಾಟ್ 2’ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. 2009ರಲ್ಲಿ ‘ರಿಸ್ಯಾಟ್‌–2’ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಈಗ ಅದರ ಬದಲು ’ರಿಸ್ಯಾಟ್‌–2ಬಿ’ ಕಾರ್ಯನಿರ್ವಹಿಸಲಿದೆ. 2012ರ ಏಪ್ರಿಲ್‌ 26ರಂದು ‘ರಿಸ್ಯಾಟ್‌–1’ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.

ಉಗ್ರರ ಚಟುವಟಿಕೆ ಮೇಲೆ ನಿಗಾವಹಿಸಿದ್ದ ‘ರಿಸ್ಯಾಟ್‌–2’

ಗಡಿಯಾಚೆಗಿನ ಪಾಕಿಸ್ತಾನದಲ್ಲಿರುವ ಶಿಬಿರಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸಲು ‘ರಿಸ್ಯಾಟ್‌–2’ ಉಪಗ್ರಹವನ್ನು ಪರಿಣಾಮಕಾರಿಯಾಗಿ ಬಳಸಲಾಗಿತ್ತು. ಉಗ್ರರು ನುಸುಳದಂತೆ ತಡೆಯಲು ಈ ಉಪಗ್ರಹದಿಂದ ಪಡೆಯಲಾದ ಚಿತ್ರಗಳನ್ನು ಪಡೆದುಕೊಳ್ಳಲಾಗುತ್ತಿತ್ತು.

‘ಚಂದ್ರಯಾನ–2’ ಮುಂದಿನ ಯೋಜನೆ

‘ಇಸ್ರೊ ಕೈಗೊಂಡಿರುವ ’ಚಂದ್ರಯಾನ–2’ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇಸ್ರೊ ಇದುವರೆಗೆ ಕೈಗೊಂಡಿರುವ ಯೋಜನೆಗಳಲ್ಲೇ ಇದು ಅತ್ಯಂತ ಸಂಕೀರ್ಣ. ಇದೇ ವರ್ಷದ ಜುಲೈ 9 ಮತ್ತು ಜುಲೈ 16ರ ನಡುವೆ ‘ಚಂದ್ರಯಾನ–2’ ಕೈಗೊಳ್ಳಲಾಗುವುದು’ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್‌ ತಿಳಿಸಿದ್ದಾರೆ.

'ಇದುವರೆಗೂ ಯಾರೂ ಹೋಗದ ಜಾಗದಲ್ಲಿ ಚಂದ್ರಯಾನ–2 ನೆಲೆಯೂರಲಿದೆ. ಸೆಪ್ಟೆಂಬರ್‌ 6ರಂದು ಚಂದ್ರನಲ್ಲಿ ಹೆಜ್ಜೆ ಇಡುವ ನಿರೀಕ್ಷೆ ಇದೆ. ಚಂದ್ರಯಾನ–2 ಬಳಿಕ ಇಸ್ರೊ ‘ಕ್ಯಾರ‍್ಟೊಸ್ಯಾಟ್‌ 3’ ಉಪಗ್ರಹವನ್ನು ಉಡಾವಣೆ ಮಾಡಲಿದೆ’ ಎಂದು ಶಿವನ್‌ ತಿಳಿಸಿದ್ದಾರೆ.

ಅತ್ಯಾಧುನಿಕ ಉಪಗ್ರಹ: ಶಿವನ್‌

‘ರಿಸ್ಯಾಟ್‌–2ಬಿ ಅತ್ಯಾಧುನಿಕ ಭೂಪರಿವೀಕ್ಷಣೆ ಉಪಗ್ರಹವಾಗಿದೆ. ಇದರಲ್ಲಿ ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 3.6 ಮೀಟರ್‌ ರೇಡಿಯಲ್‌ ಅಂಟೆನಾ ಈ ಉಪಗ್ರಹದಲ್ಲಿನ ವಿಶೇಷವಾಗಿದೆ. ಇದು ಭವಿಷ್ಯದ ತಂತ್ರಜ್ಞಾನವಾಗಿದೆ’ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್‌ ತಿಳಿಸಿದ್ದಾರೆ.

‘ಪಿಎಸ್‌ಎಲ್‌ವಿಗೆ ಇದು ಅತ್ಯಂತ ಮಹತ್ವದ ಕಾರ್ಯಾಚರಣೆಯಾಗಿತ್ತು. ಇದರಿಂದಾಗಿ ರಾಷ್ಟ್ರೀಯ, ವಿದ್ಯಾರ್ಥಿಗಳ ಮತ್ತು ವಿದೇಶಿ ಉಪಗ್ರಹಗಳು ಸೇರಿದಂತೆ 354 ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಉಡಾವಣಾ ವಾಹಕ ಮೂಲಕ ಉಡಾವಣೆ ಮಾಡಿದಂತಾಗಿದೆ. ಭವಿಷ್ಯದಲ್ಲಿ ನಮ್ಮ ಉಡಾವಣಾ ವಾಹಕ ಕಾರ್ಯಾಚರಣೆಯಲ್ಲಿ ಕ್ರಾಂತಿ ಮಾಡಲಿದೆ’ ಎಂದು ಅವರು ತಿಳಿಸಿದ್ದಾರೆ.

**

ಉಪಯೋಗ

* ಕೃಷಿ
* ಅರಣ್ಯ
* ವಿಪತ್ತು ನಿರ್ವಹಣೆ

**

ರಿಸ್ಯಾಟ್‌–2ಬಿ ವಿಶೇಷಗಳು

* ಸಿಂಥೆಟಿಕ್‌ ಅಪರ್ಚರ್‌ ಅಳವಡಿಕೆ
* ದಟ್ಟವಾದ ಮೋಡಗಳು ಕವಿದಿದ್ದರೂ ಚಿತ್ರ ತೆಗೆಯುವ ಸಾಮರ್ಥ್ಯ
* ರಾತ್ರಿ ಮತ್ತು ಬೆಳಕಿನಲ್ಲಿ ಸಹ ಚಿತ್ರ ಸೆರೆಹಿಡಿಯುವುದು
* ಐದು ವರ್ಷಗಳ ಜೀವಿತಾವಧಿ
* ರಿಸ್ಯಾಟ್‌ ಸರಣಿಯ ಮೂರನೇ ಉಪಗ್ರಹ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !