ಕೆಲವರು ತೊಂದರೆ ಕೊಟ್ಟು ಖುಷಿ ಪಡುತ್ತಿದ್ದಾರೆ: ಸಚಿವ ಶಿವಕುಮಾರ್‌

7
ಆದಾಯ ತೆರಿಗೆ ದಾಳಿ

ಕೆಲವರು ತೊಂದರೆ ಕೊಟ್ಟು ಖುಷಿ ಪಡುತ್ತಿದ್ದಾರೆ: ಸಚಿವ ಶಿವಕುಮಾರ್‌

Published:
Updated:

ನವದೆಹಲಿ: ‘ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿಯ ಹೆಸರಿನಲ್ಲಿ ಕೆಲವರು ನನಗೆ ತೊಂದರೆ ನೀಡಿ ಸಂತೋಷ ಪಡುತ್ತಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಮಂಗಳವಾರ ಇಲ್ಲಿ ಕೇಂದ್ರದ ಸಂಸ್ಕೃತಿ ಸಚಿವ ಮಹೇಶ ಶರ್ಮಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆದಾಯ ಇಲಾಖೆ ದಾಳಿ ರಾಜಕೀಯ ಪ್ರೇರಿತ. ಹರ್ಷಿಸುವವರು ಹರ್ಷಿಸಲಿ. ಸಂತಸಪಡುವವರಿಗೆ ಬೇಡ ಅನ್ನಲು ಆಗುವುದಿಲ್ಲ. ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇಬೇಕು. ಏನೇ ಆಗಲಿ ಅದನ್ನು ಧೈರ್ಯದಿಂದ ಎದುರಿಸುವೆ’ ಎಂದಷ್ಟೇ ಹೇಳಿದರು.

‘ನಿಗಮ, ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಾವುದೇ ತಕರಾರು ಎತ್ತಿಲ್ಲ. ಪಕ್ಷದ ಕಾರ್ಯಕರ್ತರು ಹತಾಶರಾಗಬೇಕಿಲ್ಲ’ ಎಂದು ಅವರು ತಿಳಿಸಿದರು.

ಮೀಸಲಾತಿಗೆ ಕತ್ತರಿ ಬೇಡ: ಆರ್ಥಿಕವಾಗಿ ದುರ್ಬಲರಾದ ಪ್ರಬಲ ಕೋಮುಗಳಿಗೆ ಮೀಸಲಾತಿ ನೀಡುವ ವೇಳೆ ಹಿಂದುಳಿದವರ ಮೀಸಲಾತಿ ಪ್ರಮಾಣದಲ್ಲಿ ಕತ್ತರಿ ಹಾಕಬಾರದು. ಈಗ ಇರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಆಗಬಾರದು. ಇದು ಕಾಂಗ್ರೆಸ್‌ ಪಕ್ಷದ ನಿಲುವು ಎಂದು ಅವರು ಸ್ಪಷ್ಟಪಡಿಸಿದರು.

ನಡೆಯಲಿದೆ ಉತ್ಸವ: ‘ಹಂಪಿಯಲ್ಲಿ ಈ ಬಾರಿ ಉತ್ಸವ ನಡೆಯಲಿದೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಮುಖಂಡರು ಉತ್ಸವದ ಕುರಿತು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಭಿಕ್ಷೆ ಎತ್ತಿ ಉತ್ಸವ ನಡೆಸುತ್ತೇವೆ ಎಂದು ಹೇಳುತ್ತಲೇ ಜನರಿಂದ ವಸೂಲಿ ಮಾಡಲು ನೋಡುತ್ತಿದ್ದಾರೆ’ ಎಂದು ಅವರು ದೂರಿದರು.

ಉತ್ಸವದ ಕುರಿತು ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ಮುಖಂಡರು ಸುಲಿಗೆಗೆ ಇಳಿಯುವುದಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ. ಹಂಪಿಯಲ್ಲಿ ಉತ್ಸವವನ್ನು ಹಮ್ಮಿಕೊಳ್ಳುವ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿದರು.

**

ಬಿಎಸ್‌ವೈ ಜತೆ ಬಂದಿದ್ದು ಆಕಸ್ಮಿಕ
ನವದೆಹಲಿ: ‘ನಾನು ಮತ್ತು ಬಿ.ಎಸ್‌. ಯಡಿಯೂರಪ್ಪ ಒಂದೇ ವಿಮಾನದಲ್ಲಿ ದೆಹಲಿಗೆ ಬಂದಿರುವುದು ಕಾಕತಾಳೀಯ. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ. ವಿಧಾನಸೌದಕ್ಕೆ ಒಟ್ಟಿಗೆ ಹೋದಂತೆ, ವಿಮಾನದಲ್ಲೂ ಒಟ್ಟಿಗೆ ಪ್ರಯಾಣ ಮಾಡಿದ್ದೇವೆ. ಇಲ್ಲಸಲ್ಲದ ವದಂತಿ ಹರಿಬಿಟ್ಟು, ಬಣ್ಣ ಬಳಿಯುವ ಅಗತ್ಯವಿಲ್ಲ’ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 8

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !