ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಕಿ’ಯ ವಿದೇಶಿ ಹೂಡಿಕೆ ₹100 ಕೋಟಿ

ಹವಾಲಾ ಮೂಲಕ ಹಣ ಸಾಗಾಟ: ಆದಾಯ ತೆರಿಗೆ ಇಲಾಖೆಯ ಮಾಹಿತಿ
Last Updated 21 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಅನುಯಾಯಿಗಳನ್ನು ಹೊಂದಿರುವ ಸ್ವಯಂಘೋಷಿತ ದೇವಮಾನವ ‘ಕಲ್ಕಿ ಭಗವಾನ್‌’ ಅವರು ವಿದೇಶದಲ್ಲಿ ₹100 ಕೋಟಿಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಹವಾಲಾ ಮಾರ್ಗದ ಮೂಲಕ ಹಣವನ್ನು ಆ ದೇಶಗಳಿಗೆ ಸಾಗಿಸಲಾಗಿದೆ. ಕಲ್ಕಿ ಅವರು ಸುಮಾರು ₹600 ಕೋಟಿಯಷ್ಟು ಅಘೋಷಿತ ಆದಾಯವನ್ನು ಹೊಂದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಬೇನಾಮಿ ಹೆಸರುಗಳಲ್ಲಿ ಭಾರಿ ಪ್ರಮಾಣದ ಆಸ್ತಿಯನ್ನು ಮಾಡಿಕೊಳ್ಳ ಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳು ದೊರಕಿವೆ. ಶೋಧ ಕಾರ್ಯಾಚರಣೆ ಮುಗಿದಿದೆ. ಆದರೆ, ದಾಖಲೆಗಳ ಪರಿಶೀಲನೆ ಈಗಲೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ಪ ಮತ್ತು ಮಗ ವಿದೇಶಗಳಲ್ಲಿ ಆಸ್ತಿ ಖರೀದಿಸಿದ್ದಾರೆ ಮತ್ತು ಹೂಡಿಕೆ ಮಾಡಿದ್ದಾರೆ. ಇವು ದುಬೈ, ಆಫ್ರಿಕಾ ಮತ್ತು ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ಗಳಲ್ಲಿವೆ. ಇತರ ದೇಶಗಳಲ್ಲಿಯೂ ಆಸ್ತಿ ಇವೆ ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.

ಕಲ್ಕಿ ಅವರ ಮಗ ಕೃಷ್ಣ ಅವರು ಶೋಧ ಕಾರ್ಯಾಚರಣೆಗೆ ಸಹಕರಿಸಿಲ್ಲ. ಶೋಧ ಕಾರ್ಯಾಚರಣೆ ಭಾನುವಾರ ಕೊನೆಯಾದ ಬಳಿಕೆ ಹೇಳಿಕೆಗೆ ಸಹಿ ಹಾಕಲೂ ಅವರು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯಾವುದೇ ವಿಚಾರದಲ್ಲಿ ಕಲ್ಕಿ ಅವರಿಂದಾಗಲಿ, ಅವರ ಆಶ್ರಮದಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಆದರೆ, ಆಶ್ರಮದಿಂದ ಶನಿವಾರ ಹೇಳಿಕೆಯೊಂದು ಪ್ರಕಟವಾಗಿತ್ತು. ಅದರಲ್ಲಿ ಆದಾಯ ತೆರಿಗೆ ಇಲಾಖೆಯ ಶೋಧ ನಡೆದಿದೆ ಎಂದು ಹೇಳಲಾಗಿತ್ತು. ಶೋಧದ ಬಗ್ಗೆ ಪ್ರಕಟವಾಗುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶ ಇಲ್ಲ ಎಂದು ಆರೋಪಿಸಲಾಗಿತ್ತು.

‘ಆಶ್ರಮವು ದೇಶದ ಕಾನೂನನ್ನು ಗೌರವಿಸುತ್ತದೆ. ನಮ್ಮ ಯಾವುದೇ ಚಟುವಟಿಕೆ ಕ್ರಮಬದ್ಧವಾಗಿಲ್ಲ ಎಂದಾದರೆ ನಾವು ಸರ್ಕಾರದ ನಿಯಮಗಳನ್ನು ಪಾಲಿಸಲು ಸಿದ್ಧ. ಎಲ್ಲವನ್ನೂ ನ್ಯಾಯಾಂಗದ ಮೂಲಕ ಎದುರಿಸಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಲ್ಕಿ ಅವರು ಆಶ್ರಮಗಳನ್ನು ಹೊಂದಿದ್ದಾರೆ. ಗಣನೀಯ ಸಂಖ್ಯೆಯ ಅನುಯಾಯಿಗಳನ್ನೂ ಹೊಂದಿದ್ದಾರೆ. ಕಲ್ಕಿ ಭಗವಾನ್‌ ಆಶ್ರಮಗಳ ಜತೆಗೆ ಅಮ್ಮ ಭಗವಾನ್‌ ಆಶ್ರಮಗಳೂ ಇವೆ.

ಕಲ್ಕಿ ಅವರು ಕೋಟ್ಯಂತರ ರೂ‍ಪಾಯಿ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT