ಗುರುವಾರ , ಏಪ್ರಿಲ್ 2, 2020
19 °C

ಕೋವಿಡ್-19 ತಡೆಗೆ ಸಾಮಾಜಿಕ ಅಂತರ ಮುಖ್ಯ, ಆದೇಶ ಉಲ್ಲಂಘನೆ ಬೇಡ: ಒಮರ್ ಅಬ್ದುಲ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶ್ರೀನಗರ: ಕಾಶ್ಮೀರಿಗಳು ಜೀವನ ಹಾಗೂ ಸಾವಿನ ವಿರುದ್ಧ ಹೋರಾಡುತ್ತಿದ್ದಾರೆ. ಸಂವಿಧಾನದ 370 ಹಾಗೂ 35ಎ ವಿಧಿ ರದ್ದು ಕುರಿತು ಈಗ ಮಾತನಾಡುವುದಿಲ್ಲ ಎಂದು ಕಳೆದ 8 ತಿಂಗಳಿಂದಲೂ ಗೃಹ ಬಂಧನದಲ್ಲಿದ್ದ ನ್ಯಾಷನಲ್‌ ಕಾನ್ಪರೆನ್ಸ್‌  ಪಕ್ಷದ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಿಳಿಸಿದ್ದಾರೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಒಮರ್ ಅವರ ಗೃಹ ಬಂಧನದ ಅವಧಿಯನ್ನು ಕಳೆದ ಫೆಬ್ರುವರಿಯಲ್ಲಿ ವಿಸ್ತರಿಸಲಾಗಿತ್ತು. ಇದೀಗ ಗೃಹ ಬಂಧನದ ಆದೇಶವನ್ನು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರದ್ದುಪಡಿಸಿದೆ. ಆದೇಶ ರದ್ದುಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕಾಶ್ಮೀರಿಗಳು ಜೀವನ ಹಾಗೂ ಸಾವಿನ ವಿರುದ್ಧ ಹೋರಾಡುತ್ತಿದ್ದಾರೆ. ಸಂವಿಧಾನದ 370 ಹಾಗೂ 35ಎ ವಿಧಿ ರದ್ದು ಕುರಿತು ಈಗ ಮಾತನಾಡುವುದಿಲ್ಲ. ಸದ್ಯ ನಾವು ಮಾರಣಾಂತಿಕ ಕೋವಿಡ್‌–19 ವಿರುದ್ಧ ಬೃಹತ್‌ ಹೋರಾಟ ನಡೆಸಬೇಕಿದೆ. ಅದಕ್ಕಾಗಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ. ಆದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಅವಧಿಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದರು. ಕಣಿವೆಯಲ್ಲಿ ಉದ್ಯಮ ವಲಯ ನೆಲಕಚ್ಚಿದ್ದು, ಅಂಗಡಿ ಹಾಗೂ ಹೋಟೆಲ್‌ ಮಾಲೀಕರು, ಇತರ ಸಂಸ್ಥೆಗಳು ನಷ್ಟ ಅನುಭವಿಸಿದವು. ನನ್ನನ್ನು ಒಂದು ಕಡೆ ಬಂಧನದಲ್ಲಿ ಇಡಲಾಗಿತ್ತು. ಆದರೆ ಕಾಶ್ಮೀರ ಕಣಿವೆಯಾದ್ಯಂತ ಜನರು ತುಂಬಾ ನಷ್ಟ ಅನುಭವಿಸಿದ್ದು, ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈಗ ಗೃಹ ಬಂಧನದಲ್ಲಿರುವ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿದಂತೆ ಇತರ ಎಲ್ಲ ರಾಜಕೀಯ ನಾಯಕರನ್ನು ಬಡುಗಡೆ ಮಾಡಬೇಕು. ಸಂವಹನದ ಅಂತರವನ್ನು ಸರ್ಕಾರ ಕೊನೆಗಾಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯಾಷನಲ್‌ ಕಾನ್ಪರೆನ್ಸ್‌ನ ಅಧ್ಯಕ್ಷ ಹಾಗೂ ಸಂಸದ ಫಾರೂಕ್‌ ಅಬ್ದುಲ್ಲಾ ಅವರನ್ನು ಮಾರ್ಚ್‌ 13ರಂದು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರ‌ದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಗೃಹಬಂಧನವು ಮುಂದುವರಿದಿದೆ.

ಒಮರ್‌ ಅವರ ಗೃಹಬಂಧನದ ಕುರಿತು ವಾರದ ಒಳಗಾಗಿ ಮಾಹಿತಿ ನೀಡುವಂತೆ ಕಳೆದ ವಾರ ಸುಪ್ರೀಂಕೋರ್ಟ್‌ ಸೂಚಿಸಿದ ಬೆನ್ನಲ್ಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಒಮರ್‌ ಅವರನ್ನು  ಬಿಡುಗಡೆ ಮಾಡಿದೆ.

ಒಮರ್‌ ಅವರ ಬಿಡುಗಡೆಯನ್ನು ಜಮ್ಮು ಮತ್ತು ಕಾಶ್ಮೀರದ  ಹಲವು ನಾಯಕರು ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು