ಶುಕ್ರವಾರ, ನವೆಂಬರ್ 22, 2019
27 °C

ಪ್ರಶಸ್ತಿ ಹೆಸರು ಬದಲು: ಟೀಕೆಗೆ ಮಣಿದು ಆದೇಶ ಹಿಂಪಡೆದ ಆಂಧ್ರ ಸರ್ಕಾರ

Published:
Updated:
Prajavani

ಅಮರಾವತಿ: ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಹೆಸರಿನ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಹೆಸರನ್ನು ‘ವೈಎಸ್‌ಆರ್ ವಿದ್ಯಾ ಪುರಸ್ಕಾರ್’ ಎಂದು ಬದಲಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಆಂಧ್ರಪ್ರದೇಶ ಸರ್ಕಾರ ಆದೇಶವನ್ನು ವಾಪಸ್‌ ಪಡೆದಿದೆ.

ವಿರೋಧ ಪಕ್ಷಗಳ ಮುಖಂಡರು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆದೇಶ ವಾಪಸಿಗೆ ಸೂಚಿಸಿದ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್‌ ರೆಡ್ಡಿ, ‘ನನ್ನ ಗಮನಕ್ಕೆ ಬಾರದೇ ಆದೇಶ ಹೊರಬಿದ್ದಿದೆ’ ಎಂದು ಹೇಳಿದ್ದಾರೆ.

‘ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಹಾತ್ಮಗಾಂಧಿ, ಅಂಬೇಡ್ಕರ್, ಜಗಜೀವನ್‌ ರಾಂ ಅಂಥಹ ಮಹನೀಯರ ಹೆಸರಿನಲ್ಲೇ ಪ್ರಶಸ್ತಿ ನೀಡಬೇಕು’ ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಮಾಜಿ ರಾಷ್ಟ್ರಪತಿ ದಿ.ಡಾ.ಅಬ್ದುಲ್‌ ಕಲಾಂ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು, ‘ಸರ್ಕಾರ ಧೀಮಂತ ನಾಯಕನ ಹೆಸರಿನ ಪ್ರಶಸ್ತಿ ಬದಲಿಸಿದೆ‘ ಎಂದು ಟೀಕಿಸಿದ್ದರು.

ಕಳೆದ ವರ್ಷದವರೆಗೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗಿತ್ತು. 

 
 
ಪ್ರತಿಕ್ರಿಯಿಸಿ (+)