ಶುಕ್ರವಾರ, ಜೂನ್ 18, 2021
24 °C
ರಾಜ್ಯಪಾಲ ಇ.ಎಸ್‌.ಎಲ್‌.ನರಸಿಂಹನ್‌ ಅವರಿಂದ ಪ್ರತಿಜ್ಞಾವಿಧಿ ಬೋಧನೆ

ಆಂಧ್ರ ಪ್ರದೇಶ: ಜಗನ್‌ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮರಾವತಿ: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖಂಡ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ಇಲ್ಲಿನ ಇಂದಿರಾಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಇ.ಎಸ್‌.ಎಲ್‌.ನರಸಿಂಹನ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ವೈಎಸ್‌ಆರ್‌ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರ, ಮುಗಿಲುಮುಟ್ಟಿದ ಕರತಾಡನದ ನಡುವೆ ಅವರು ತೆಲುಗಿನಲ್ಲಿ ಪ್ರಮಾಣ ಸ್ವೀಕರಿಸಿದರು. ನಂತರ ಅವರು ತೆರೆದ ಜೀಪಿನಲ್ಲಿ ಮೈದಾನದಲ್ಲಿ ಸಂಚರಿಸಿ, ಕಾರ್ಯಕ್ರಮ ವೀಕ್ಷಿಸುವ ಸಲುವಾಗಿ ನೆರೆದಿದ್ದ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌, ಉಪಮುಖ್ಯಮಂತ್ರಿ ಮಹಮೂದ್‌ ಅಲಿ, ಸ್ಪೀಕರ್ ಪೋಚರಂ ಶ್ರೀನಿವಾಸ ರೆಡ್ಡಿ, ಸಚಿವ ತಲಸಾನಿ ಶ್ರೀನಿವಾಸ ಯಾದವ್‌, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌, ಪುದುಚೇರಿ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣರಾವ್‌, ಜಗನ್‌ಮೋಹನ್‌ ರೆಡ್ಡಿ ತಾಯಿ ವಿಜಯಮ್ಮ, ಪತ್ನಿ ಭಾರತಿ ರೆಡ್ಡಿ ಹಾಗೂ ಸಹೋದರಿ ಶರ್ಮಿಳಾ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಜಗನ್‌ ಅವರ ತಂದೆ ದಿ. ವೈ.ಎಸ್‌. ರಾಜಶೇಖರ ರೆಡ್ಡಿ ಅವರನ್ನು ಸಮಾರಂಭದಲ್ಲಿ ನಾಯಕರು ಸ್ಮರಿಸಿದರು.

ತಮ್ಮ ಭಾಷಣದ ಬಳಿಕ ಜಗನ್‌ ಅವರು ತಾಯಿ ವೈ.ಎಸ್‌. ವಿಜಯಮ್ಮ ಅವರತ್ತ ತೆರಳಿ ಆಶೀರ್ವಾದ ಪಡೆದರು. ವಿಜಯಮ್ಮ ಅವರು ಮಗನನ್ನು ಅಪ್ಪಿಕೊಂಡು ಭಾವುಕರಾದರು.

ಭರ್ಜರಿ ಗೆಲುವು: ತಂದೆ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಅಕಾಲಿಕ ಮರಣದ ನಂತರ, ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂತು. ಇದರ ಪರಿಣಾಮ ಅವರು 18 ತಿಂಗಳ ಕಾಲ ಜೈಲಿನಲ್ಲಿರಬೇಕಾಯಿತು. ನಂತರ, 2013ರಲ್ಲಿ ಜಾಮೀನಿನ ಮೇಲೆ ಹೊರಗಡೆ ಬಂದ ಅವರು, ಕಾಂಗ್ರೆಸ್‌ ತೊರೆದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದರು.

ಆಂಧ್ರಪ್ರದೇಶದಾದ್ಯಂತ ಪಾದಯಾತ್ರೆ ನಡೆಸಿ, ಪಕ್ಷ ಕಟ್ಟುವ ಜೊತೆಗೆ ಜನರೊಂದಿಗೆ ಮುಖಾಮುಖಿಯಾದರು. ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ 175ರಲ್ಲಿ 151 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದರು.

ವೃದ್ಧಾಪ್ಯ ವೇತನ ಹೆಚ್ಚಳ
’ಗ್ರಾಮ ಸ್ವಯಂ ಸೇವಕರ‘ ನೇಮಕ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ’ಕಾಲ್‌ ಸೆಂಟರ್‌‘ ಸ್ಥಾಪನೆಯಂತಹ ಜನಪರ ಯೋಜನೆಗಳನ್ನು ನೂತನ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಘೋಷಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ವೃದ್ಧಾಪ್ಯ ವೇತನವನ್ನು ₹2,000ದಿಂದ ₹ 2,250ಕ್ಕೆ ಹೆಚ್ಚಿಸಿರುವುದಾಗಿ ಘೋಷಿಸಿದರು. ಪ್ರತಿ ವರ್ಷ ಹೆಚ್ಚಳ ಮಾಡುವ ಮೂಲಕ ಈ ಮೊತ್ತವನ್ನು ₹ 3,000ಕ್ಕೆ ತಲುಪಿಸುವುದಾಗಿಯೂ ಭರವಸೆ ನೀಡಿದರು.

ಜೂನ್‌ ತಿಂಗಳಿನಿಂದಲೇ ಈ ವೃದ್ಧಾಪ್ಯವೇತನದಲ್ಲಿ ಈ ಹೆಚ್ಚಳ ಜಾರಿಯಾಗುವಂತೆ ಅವರು ಸ್ಥಳದಲ್ಲಿಯೇ ದಾಖಲೆಗಳಿಗೆ ಸಹಿ ಹಾಕಿ ಗಮನ ಸೆಳೆದರು.

‘4 ಲಕ್ಷ ಯುವಕ–ಯುವತಿಯರನ್ನು ಗ್ರಾಮ ಸ್ವಯಂಸೇವಕರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು. ಮಾಸಿಕ ₹ 5,000 ವೇತನ ನಿಗದಿ ಮಾಡಲಾಗಿದ್ದು, ತಾವು ಇಚ್ಛಿಸುವಷ್ಟು ದಿನ ಈ ಉದ್ಯೋಗದಲ್ಲಿ ಇರಬಹುದು‘ ಎಂದರು. ’ಪ್ರತಿ 50 ಮನೆಗಳಿಗೆ ಒಬ್ಬರಂತೆ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗುತ್ತದೆ. ಜನರು ಹಾಗೂ ಗ್ರಾಮ ಪಂಚಾಯಿತಿಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುವ ಇವರು, ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವರು‘ ಎಂದೂ ವಿವರಿಸಿದರು.

’ಯಾವುದೇ ಸರ್ಕಾರಿ ಸೇವೆಯನ್ನು 72 ಗಂಟೆ ಒಳಗಾಗಿ ಪೂರ್ಣಗೊಳಿಸಿ, ಜನರಿಗೆ ತಲುಪಿಸಬೇಕು. ಲಂಚಕ್ಕಾಗಿ ಪೀಡಿಸುವುದು ಇಲ್ಲವೇ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಕುರಿತಂತೆ ಮುಖ್ಯಮಂತ್ರಿಗೆ ನೇರವಾಗಿ ಮಾಹಿತಿ ನೀಡಲು ಅನುಕೂಲವಾಗುವಂತೆ ಕಾಲ್‌ಸೆಂಟರ್‌ವೊಂದನ್ನು ಆರಂಭಿಸಲಾಗುವುದು‘ ಎಂದೂ ಭರವಸೆ ನೀಡಿದರು.

ಟೆಂಡರ್‌ ಪ್ರಕ್ರಿಯೆ ಪಾರದರ್ಶಕತೆಗೆ ಒತ್ತು

ಟೆಂಡರ್‌ ಆಹ್ವಾನ, ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲಾಗುವುದು. ಇದಕ್ಕಾಗಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ಸಲಹೆ ಪಡೆದು ನ್ಯಾಯಾಂಗ ಆಯೋಗವೊಂದನ್ನು ಸ್ಥಾಪಿಸಲಾಗುವುದು ಎಂದು ಜಗನ್‌ಮೋಹನ್‌ ರೆಡ್ಡಿ ಹೇಳಿದರು.

ವಿವಿಧ ಹಂತದಲ್ಲಿರುವ ಬೃಹತ್‌ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಗುಣಮಟ್ಟ ಕಾಪಾಡದೇ ಇರುವುದು, ವಿಳಂಬ ಕಂಡುಬಂದಲ್ಲಿ ಗುತ್ತಿಗೆಯನ್ನೇ ರದ್ದುಗೊಳಿಸಲಾಗುವುದು ಎಂದರು.

**

ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ.
-ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ, ಮುಖ್ಯಮಂತ್ರಿ, ಆಂಧ್ರಪ್ರದೇಶ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು