ಶನಿವಾರ, ಜೂನ್ 19, 2021
26 °C

ಪ್ರಧಾನಿಗೆ 'ಜೈ ಬಾಂಗ್ಲಾ' ಎಂದು ಬರೆದ 10,000 ಪೋಸ್ಟ್‌ಕಾರ್ಡ್ ಕಳಿಸಿದ ಟಿಎಂಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಪೋಸ್ಟ್ ಕಾರ್ಡ್‌ಗಳನ್ನು ಕಳುಹಿಸುತ್ತೇವೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ  ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು ವಂದೇ ಮಾತರಂ, ಜೈ ಹಿಂದ್, ಜೈ ಬಾಂಗ್ಲಾ ಎಂದು ಬರೆದ 10,000 ಪೋಸ್ಟ್‌ಕಾರ್ಡ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದ್ದಾರೆ.

ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರು ಹೊರಗಿನವರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದು, ಈ ಬಗ್ಗೆ ಬಿಜೆಪಿ ಮತ್ತು ಮಮತಾ ನಡುವೆ ವಾಗ್ವಾದಗಳು ನಡೆಯುತ್ತಿವೆ.

ಇದನ್ನೂ ಓದಿ: ಜೈ ಶ್ರೀರಾಂ ಎಂದು ಕೂಗಿ ಮಮತಾ ಬ್ಯಾನರ್ಜಿಗೆ ಸ್ವಾಗತ?;ಎಡಿಟ್ ಮಾಡಿದ ವಿಡಿಯೊ ವೈರಲ್

ಜನರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ನಾವು ತೋರಿಸಿಕೊಡುತ್ತಿದ್ದೇವೆ. ಅವರ (ಪ್ರಧಾನಿಯವರ) ವಾಹನದ ಮುಂದೆ  ಹೋಗಿ ಘೋಷಣೆ ಕೂಗಲು ನಾವು ಬಯಸುವುದಿಲ್ಲ ಎಂದು ದಕ್ಷಿಣ ಡಂಡಂ ಮುನ್ಸಿಪಾಲಿಟಿ ಅಧ್ಯಕ್ಷ ಡಿ. ಬ್ಯಾನರ್ಜಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನಾರ್ಥ್ 234 ಪರ್ಗನಾಸ್ ಜಿಲ್ಲೆಯ ಭಟ್ಪರಾದಲ್ಲಿ  ಮಮತಾ ಅವರ ವಾಹನ ಹಾದು ಹೋಗುತ್ತಿದ್ದ ಜನರ ಗುಂಪೊಂದು ಜೈ ಶ್ರೀರಾಂ ಎಂದು ಘೋಷಣೆ ಕೂಗಿತ್ತು. ಹೀಗೆ ಘೋಷಣೆ ಕೂಗಿದವರಲ್ಲಿ 10  ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಆದಾಗ್ಯೂ ಧರ್ಮ ಮತ್ತು ರಾಜಕಾರಣವನ್ನು ಬೆರೆಸುವುದಕ್ಕಾಗಿ ಬಿಜೆಪಿ ಜೈ ಶ್ರೀರಾಮ್ ಘೋಷಣೆ ಬಳಸುತ್ತಿದೆ ಎಂದು ಮಮತಾ ದೂರಿದ್ದಾರೆ.

ಇದನ್ನೂ ಓದಿಜೈ ಶ್ರೀರಾಂ ಘೋಷಣೆಗಾಗಿ ನನ್ನ ಬಂಧಿಸಿ’

ಗಲಭೆ ಮತ್ತು ಹಿಂಸಾಚಾರದ ಮೂಲಕ ಬಿಜೆಪಿ ದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಮಮತಾ, ಜೈ ಸಿಯಾ ರಾಮ್, ಜೈ ರಾಮ್ ಜೀ ಕೀ, ರಾಮ್ ನಾಮ್ ಸತ್ಯ್ ಹೇ ಮೊದಲಾದವುಗಳು ಧಾರ್ಮಿಕ ಮತ್ತು ಸಾಮಾಜಿಕ ಒಳಾರ್ಥದ ಘೋಷಣೆಗಳಾಗಿವೆ. ನಾವು ಈ ಭಾವನೆಗಳನ್ನು ಗೌರವಿಸುತ್ತೇವೆ. ಆದರೆ ಬಿಜೆಪಿ ಧಾರ್ಮಿಕ ಘೋಷಣೆಯನ್ನು ತಮ್ಮ ಪಕ್ಷದ ಘೋಷಣೆಯಂತೆ ಬಳಸಿ ಧರ್ಮ ಮತ್ತು ರಾಜಕೀಯವನ್ನು ಬೆರೆಸುವ ಹುನ್ನಾರ ಮಾಡುತ್ತಿದೆ.  ಈ ರೀತಿಯ ರಾಜಕೀಯ ಘೋಷಣೆಯನ್ನು ಇನ್ನೊಬ್ಬರ ಮೇಲೆ ಆರ್‌ಎಸ್‌ಎಸ್ ಬಲವಂತವಾಗಿ ಹೇರುತ್ತಿದ್ದು ಇದನ್ನು ಬಂಗಾಳ ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು