ಕೊಹ್ಲಿ, ಮೋದಿ ಮತ್ತು ಸಿಕ್ಸ್‌ ಪ್ಯಾಕ್

7
ಕ್ರಿಕೆಟ್ ದೇವರುಗಳ ಬಗ್ಗೆ ಬಿಸಿ ಬಿಸಿ ಚರ್ಚೆ

ಕೊಹ್ಲಿ, ಮೋದಿ ಮತ್ತು ಸಿಕ್ಸ್‌ ಪ್ಯಾಕ್

Published:
Updated:

ಜೈಪುರ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ನಡುವೆ ಇರುವ ಹೋಲಿಕೆಗಳೇನು ಎಂಬ ಕುರಿತು ಸಾರಸ್ಯಕರವಾದ ಚರ್ಚೆಗೆ ಶುಕ್ರವಾರ ಇಲ್ಲಿನ ಸಾಹಿತ್ಯೋತ್ಸವ ಸಾಕ್ಷಿಯಾಯಿತು. 

ಕ್ರಿಕೆಟ್ ವಿಶ್ಲೇಷಕ ಬೋರಿಯಾ ಮಜುಮ್ದಾರ್ ಬರೆದಿರುವ ‘ಇಲೆವೆನ್ ಗಾಡ್‌ ಆ್ಯಂಡ್‌ ಬಿಲಿಯನ್ ಇಂಡಿಯನ್ಸ್’ ಪುಸ್ತಕವನ್ನು ನೆಪವಾಗಿಟ್ಟುಕೊಂಡು ಆರಂಭವಾದ ಚರ್ಚೆಯಲ್ಲಿ ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರದೇಸಾಯಿ, ‘ವಿರಾಟ್‌ ಮತ್ತು ಮೋದಿ ಇಬ್ಬರಲ್ಲಿಯೂ ಒಂದು ಸಾಮಾನ್ಯ ಗುಣವಿದೆ. ಅದು ಸ್ವರತಿ ಮತ್ತು ಸ್ವಯಂ ವೈಭವೀಕರಣದ ಗುಣ’ ಎಂದು ಹೇಳಿದ್ದು ಚರ್ಚೆ ಕಾವೇರಲು ಕಾರಣವಾಯಿತು. ಗೋಷ್ಠಿಯಲ್ಲಿ ಭಾಗವಹಿಸಿದ್ದ ಶಶಿ ತರೂರ್, ‘ಅವರಿಬ್ಬರ ಮಧ್ಯ ಯಾವ ಹೋಲಿಕೆಯೂ ಇಲ್ಲ. ವಿರಾಟ್‌ ಜನರಿಗೆ ಹುಸಿ ಭರವಸೆಗಳನ್ನು ನೀಡಿ ಹುದ್ದೆ ಗಿಟ್ಟಿಸಿಕೊಂಡಿಲ್ಲ’ ಎಂದಾಗ ಸಭೆಯಲ್ಲಿ ನಗೆಯುಕ್ಕಿತು. 

ವಿನಯ ಕಲಿಯಬೇಕು: ‘ವಿರಾಟ್ ಕೊಹ್ಲಿ ದೇಶ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಕ್ರಿಕೆಟ್‌ ದೇವರುಗಳು ಕ್ರಿಡಾಂಗಣದಲ್ಲಿಯಷ್ಟೇ ದೇವರಾಗಿದ್ದರೆ ಸಾಲದು. ಕ್ರಿಡಾಂಗಣದ ಆಚೆಗೂ ಅವರು ರೂಢಿಸಿಕೊಳ್ಳಬೇಕಾದ ಗುಣಗಳು ಸಾಕಷ್ಟಿವೆ. ಹಿಂದಿನ ಆಟಗಾರರಲ್ಲಿ ಕಾಣಿಸುತ್ತಿದ್ದ ವಿನಯ ಈಗಿನವರಲ್ಲಿ ಇಲ್ಲ’ ಎಂದ ರಾಜ್‌ದೀಪ್‌, ಬಾಕ್ಸಿಂಗ್ ದಂತಕತೆ ಮಹಮ್ಮದ್ ಅಲಿ ಅವರ ಉದಾಹರಣೆಯನ್ನೂ ನೀಡಿದರು. ವ್ಯಕ್ತಿತ್ವ ಮತ್ತು ಸಾಮಾಜಿಕ ಜವಾಬ್ದಾರಿಯ ವಿಷಯದಲ್ಲಿ ಅಲಿ ಅವರಂಥ ಉದಾಹರಣೆ ಕ್ರಿಕೆಟ್‌ ಲೋಕದಲ್ಲಿ ಕಾಣುವುದು ಸಾಧ್ಯವಾಗಿಲ್ಲ ಎಂದು ಹೇಳಿದ್ದು ಪುನಃ ಬೋರಿಯಾ ಅವರನ್ನು ಕೆರಳಿಸಿತು. 

’ಹಿಂದಿನ ಆಟಗಾರಿಗೆ ಮಾತ್ರ ವಿನಯ ಇತ್ತು. ಈಗಿನವರಿಗೆ ಇಲ್ಲ ಎಂದು ಸಾರಾಸಗಟಾಗಿ ಹೇಳುವುದು ಸರಿಯಲ್ಲ. ಹಾಗಾದರೆ 2002ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದಾಗ ನಾಯಕ ಸೌರವ್ ಗಂಗೂಲಿ ಶರ್ಟ್‌ ಬಿಚ್ಚಿ ಅನುಚಿತ ವರ್ತನೆ ತೋರಿದ್ದನ್ನು ಹೇಗೆ ಅರ್ಥೈಸುತ್ತೀರಿ’ ಎಂದು ಪ್ರಶ್ನಿಸಿದರು. ಆ ಘಟನೆ ಸಭ್ಯರ ಆಟವಾಗಿದ್ದ ಕ್ರಿಕೆಟ್‌ಗೆ ಬಳಿದ ಕಪ್ಪುಚುಕ್ಕೆ ಎನ್ನುವುದನ್ನು ರಾಜ್‌ದೀಪ್ ಕೂಡ ಒಪ್ಪಿಕೊಂಡರು.

ಪ್ರತಿಭೆಯೊಂದೇ ಮಾನದಂಡ: ‘ರಾಜಕಾರಣ, ಸಿನಿಮಾ ಕ್ಷೇತ್ರಗಳಲ್ಲಿ ವಂಶಪಾರಂಪರ್ಯವಾಗಿ ಅವಕಾಶ ಗಿಟ್ಟಿಸಿಕೊಳ್ಳಲು ಸಾಧ್ಯ. ಆದರೆ ಕ್ರಿಕೆಟ್ ಹಾಗಲ್ಲ. ಇಲ್ಲಿ ಮತಗಳನ್ನು, ಧರ್ಮವನ್ನು ಆಧರಿಸಿ ಅವಕಾಶ ಕೊಡುವುದಿಲ್ಲ. ಇದು ಪ್ರತಿಭೆ ಮತ್ತು ಶ್ರಮದಿಂದಲೇ ಅವಕಾಶ ಗಿಟ್ಟಿಸಿಕೊಳ್ಳಬೇಕಾದ ಕ್ಷೇತ್ರ. ರಾಂಚಿಯಲ್ಲಿ ರೈಲ್ವೆ ಟಿಕೆಟ್ ಮಾರುತ್ತಿದ್ದ ಎಂ.ಎಸ್‌. ಧೋನಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಯಶಸ್ವಿಯಾಗಿದ್ದು ಇದಕ್ಕೆ ಉದಾಹರಣೆ’ ಎಂದ ರಾಜ್‌ದೀಪ್ ಸರದೇಸಾಯಿ, ’ನನ್ನ ಮನಸ್ಸಿನಲ್ಲಿ ಧೋನಿಗೆ ವಿಶೇಷ ಸ್ಥಾನವಿದೆ’ ಎಂದೂ ಹೇಳಿದರು. 

ಕ್ರಿಕೆಟಿಗರ ವೈಯಕ್ತಿಕ ಬದುಕಿಗೆ ಅನಗತ್ಯ ಪ್ರಚಾರ ದೊರಕುತ್ತಿರುವ ಕುರಿತೂ ಬೇಸರ ವ್ಯಕ್ತಪಡಿಸಿದ ಅವರು, ಸೆಲೆಬ್ರಿಟಿಗಳ ಖಾಸಗೀತನಕ್ಕೆ ಬೆಲೆ ಕೊಡಬೇಕಾದ ಅಗತ್ಯದ ಕುರಿತೂ ಹೇಳಿದರು. 

‘ಈಗ ಕ್ರಿಕೆಟಿಗರು ವೈಯಕ್ತಿಕ ವರ್ಚಸ್ಸನ್ನು ಬೆಳೆಸಿಕೊಳ್ಳಲು ಸಾಕಷ್ಟು ಗಮನ ನೀಡುತ್ತಿದ್ದಾರೆ. ವಿರಾಟ್ ಡಯಟ್ ಮಾಡಿ, ಸಿಕ್ಸ್‌ ಪ್ಯಾಕ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಂದು ಅವರು ಕ್ರಿಡಾಂಗಣದಲ್ಲಿ ಶರ್ಟ್‌ ಬಿಚ್ಚಿದರೆ ಅವರ ಮೈಕಟ್ಟನ್ನು ನೋಡಿ ಖುಷಿಪಡುವ ಜನರೂ ಸಾಕಷ್ಟಿದ್ದಾರೆ’ ಎಂದು ರಾಜ್‌ದೀಪ್‌ ತಮಾಷೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸುತ್ತಾ ಬೋರಿಯಾ, ‘ತನ್ನ ಮೈಕಟ್ಟು ಆಕರ್ಷಕವಾಗಿ ಇಲ್ಲ ಎಂದು ಗೊತ್ತಿದ್ದೂ ಕ್ರಿಡಾಂಗಣದಲ್ಲಿ ಶರ್ಟ್‌ ಬಿಚ್ಚಿ ತೋರಿಸುವುದು ಕೋಲ್ಕತ್ತದ ಜನರ ವಿಶೇಷ ಗುಣ’ ಎಂದು ಪ್ರತಿಕ್ರಿಯಿಸಿದಾಗ ವೀಕ್ಷಕವಲಯದಲ್ಲಿ ನಗೆಬುಗ್ಗೆ ಎದ್ದಿತು. ‘ಗಂಗೂಲಿ ಅವರ ಈ ಗುಣಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಹೋಲಿಕೆಯಾಗುತ್ತದೆ’ ಎಂದು ಮೋದಿ ಉಲ್ಲೇಖದ ಮೂಲಕವೇ ಚರ್ಚೆಯನ್ನು ಮುಗಿಸಿದರು ಶಶಿ ತರೂರ್‌. ಪ್ರಯಾಗ್ ಅಕ್ಬರ್ ಈ ಗೋಷ್ಠಿಯನ್ನು ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 2

  Frustrated
 • 1

  Angry

Comments:

0 comments

Write the first review for this !