ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಯ ಸಂಭ್ರಮ; ಜ್ಞಾನದ ಸರಿಗಮ

ಜೈಪುರ ಸಾಹಿತ್ಯೋತ್ಸವಕ್ಕೆ ಅಲ್ಪವಿರಾಮ
Last Updated 28 ಜನವರಿ 2019, 20:23 IST
ಅಕ್ಷರ ಗಾತ್ರ

ಜೈಪುರ: ‘ಈ ತಿನಿಸು ಎಷ್ಟೊಂದು ರುಚಿಕರವಾಗಿದೆ. ಈ ಜಾಗದ ಹಾಗೆ; ಇಲ್ಲಿ ನಡೆಯುತ್ತಿರುವ ಸಾಹಿತ್ಯೋತ್ಸವದ ಹಾಗೆ.’

ರಾಜಸ್ಥಾನದ ವಿಶಿಷ್ಟ ತಿನಿಸೊಂದನ್ನು ಸವಿಯುತ್ತಾ ವಿದೇಶಿ ಯುವತಿ ತನ್ನ ಸಂಗಾತಿಗೆ ಹೇಳಿದ ಮಾತು ಇಡೀ ಜೈಪುರ ಸಾಹಿತ್ಯೋತ್ಸವದ ಸಾರವನ್ನು ಎರಡೇ ಸಾಲಿನಲ್ಲಿ ಹಿಡಿದಿಟ್ಟಂತಿತ್ತು.

24ರಂದು ಆರಂಭಗೊಂಡಿದ್ದ ಜೈಪುರ ಸಾಹಿತ್ಯೋತ್ಸವದ ಹನ್ನೆರಡನೇ ಆವೃತ್ತಿ ಸೋಮವಾರ ಸಂಜೆ ಸಮಾರೋಪಗೊಂಡಿತು.

ಹೆಸರಿನಲ್ಲಿ ಸಾಹಿತ್ಯೋತ್ಸವ ಎಂದಿದ್ದರೂ ಇದು ಕೇವಲ ಸಾಹಿತ್ಯ ಚರ್ಚೆಗೆ ಮಾತ್ರ ಸೀಮಿತವಾದ ಉತ್ಸವ ಅಲ್ಲ. ಗೋಷ್ಠಿಗಳಲ್ಲಿ ಚರ್ಚಿತವಾದ ವಿಷಯ ಮತ್ತು ಅಲ್ಲಿನ ವಾತಾವರಣ ಎರಡೂ ಈ ಉತ್ಸವಕ್ಕಿರುವ ಹಲವು ಭಿನ್ನ ಚಾಚುಗಳನ್ನು ಧ್ವನಿಸುವ ಹಾಗೆಯೇ ಇತ್ತು.

ಕಲೆ, ವಿಜ್ಞಾನ, ಸಂಗೀತ, ರಾಜಕಾರಣ, ಇತಿಹಾಸ, ಸಿನಿಮಾ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ವೇದಿಕೆಗಳ ಮೇಲೆ ಗೋಷ್ಠಿಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಬುಕ್‌ಮಾರ್ಕ್ ವಲಯದಲ್ಲಿ ಪುಸ್ತಕ ಪ್ರಕಾಶನ, ವ್ಯಾಪಾರ, ಭಾಷಾಂತರಗಳಿಗೆ ಸಂಬಂಧಿಸಿದಂತೆ ಮಾತುಕತೆ ಜಾರಿಯಲ್ಲಿತ್ತು. ವೇದಿಕೆಯ ಮುಂಭಾಗ ಕಿಕ್ಕಿರಿದ ಜನರು ಚರ್ಚೆಯನ್ನು ಗಂಭೀರವಾಗಿ ಆಸ್ವಾದಿಸುತ್ತಿದ್ದರೆ, ಇನ್ನೊಂದೆಡೆ ಒಂದಿಷ್ಟು ಜನ ಸೆಲ್ಫಿ ಸಂಭ್ರಮದಲ್ಲಿ ಮುಳುಗಿದ್ದರು. ಕೃತಕ ಹುಲ್ಲು ಹಾಸಿನ ಮೇಲೆ ಇಸ್ಪೀಟ್ ಆಡುತ್ತ, ಹರಟೆ ಹೊಡೆಯುತ್ತ ಕೂತವರು, ನಿದ್ದೆಗೆ ಶರಣು ಹೋದವರೂ ಸಾಕಷ್ಟಿದ್ದರು.

ನಾಸ್ಟಾಲಜಿಯ ಚೌಕಟ್ಟು: ಪ್ರತಿವರ್ಷ ಜೈಪುರ ಸಾಹಿತ್ಯೋತ್ಸವ ನಡೆಯುವುದು ಡಿಗ್ಗಿ ಪ್ಯಾಲೆಸ್‌ ಹೋಟೆಲ್‌ ಆವರಣದಲ್ಲಿ. ಹದಿನೇಳನೇ ಶತಮಾನದ ಈ ಹಳೆಯ ಕಟ್ಟಡದ ವಾತಾವರಣವೇ ಸಾಹಿತ್ಯೋತ್ಸವಕ್ಕೆ ವಿಶೇಷ ಕಳೆ ಕೊಡುವಂತಿದೆ. ರಾಜಸ್ಥಾನಿ ಕುಸುರಿ ಕಲೆಯ ದರ್ಶನ, ದರ್ಬಾರ್ ಹಾಲ್‌, ಬೈಠಕ್‌ ಹಾಲ್‌ ಸೇರಿದಂತೆ ಈ ಪ್ಯಾಲೆಸ್‌ ಸಾಹಿತ್ಯೋತ್ಸವಕ್ಕೆ ಒಂದು ‘ನಾಸ್ಟಾಲ್ಜಿಕ್‌’ ಆಯಾಮವನ್ನು ಒದಗಿಸಿದೆ.

ಪ್ರತಿದಿನ ಸಂಜೆ ನಗರದ ಬೇರೆ ಬೇರೆ ಐತಿಹಾಸಿಕ ಮಹತ್ವ ಇರುವ ಸ್ಥಳಗಳಲ್ಲಿ ನಡೆಯುತ್ತಿದ್ದ ‘ಹೆರಿಟೇಜ್ ಇವ್ನಿಂಗ್‌’ ಕಾರ್ಯಕ್ರಮ ಹಲವರಿಗೆ ಇಡೀ ದಿನ ಗೋಷ್ಠಿಗಳನ್ನು ಕೇಳಿ ಭಾರವಾಗಿದ್ದ ಮಿದುಳನ್ನು ಸಂತೈಸಿ ಹೊಸ ಚೈತನ್ಯವನ್ನು ತುಂಬಿಕೊಳ್ಳುವ ಅವಕಾಶವಾಗಿ ಕಂಡಿದ್ದರೆ ಆಚ್ಚರಿಯಿಲ್ಲ. ಈ ಸಾಂಸ್ಕೃತಿಕ ಸಂಜೆ ಪ್ರತಿದಿನವೂ ಒಂದೊಂದು ಪ್ರೇಕ್ಷಣೀಯ ಸ್ಥಳಗಳಲ್ಲಿಯೇ ನಡೆಯುತ್ತಿದ್ದ ಕಾರಣ ನಗರದರ್ಶನದ ಭಾಗ್ಯವನ್ನೂ ಒದಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT