ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ ಸಾಹಿತ್ಯ ಹಬ್ಬಕ್ಕೆ ವಿದಾಯ

Last Updated 27 ಜನವರಿ 2020, 19:40 IST
ಅಕ್ಷರ ಗಾತ್ರ

ಜೈಪುರ: ಅತ್ತ ನಗರದ ಹೊರವಲಯದ ಅಂಬರ್‌ ಬೆಟ್ಟಗಳ ಸಾಲಿನ ನಡುವೆ ಸೋಮವಾರ ಸಂಜೆ ಸೂರ್ಯ ಕೆಂಪಾಗಿ ಕರಗುವ ಹೊತ್ತಿನಲ್ಲಿಯೇ ಇತ್ತ ಡಿಗ್ಗಿ ಪ್ಯಾಲೇಸ್‌ನಲ್ಲಿ ‘ಭೂಮಿಯ ಮೇಲಿನ ಅತಿದೊಡ್ಡ ಸಾಹಿತ್ಯ ಜಾತ್ರೆ’ಗೂ ತೆರೆಬಿತ್ತು.

ಜೈಪುರ ಸಾಹಿತ್ಯ ಸಮ್ಮೇಳನಕ್ಕೆ ಭಾರತವೂ ಸೇರಿದಂತೆ ಸುಮಾರು 30 ದೇಶಗಳಿಂದ ಬಂದಿದ್ದ ಲೇಖಕರು ಹಾಗೂ ಪ್ರತಿನಿಧಿಗಳ ದಂಡು, ತನ್ನ ಜ್ಞಾನದ ಜೋಳಿಗೆಯಲ್ಲಿ ಹೊಸತನ್ನು ತುಂಬಿಕೊಂಡ ಖುಷಿಯಲ್ಲಿ ‘ಟಾಟಾ’ ಹೇಳಿತು.

ಐದು ದಿನಗಳ ಈ ಹಬ್ಬದಲ್ಲಿ ಯುವಕ–ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಎದ್ದು ಕಂಡಿತು. ಭಾರತದ ಮೂಲೆ, ಮೂಲೆಗಳಿಂದ ಬಂದಿದ್ದ ಈ ಯುವಪಡೆ, ಗೋಷ್ಠಿಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ, ಅಷ್ಟೇ ಗಂಭೀರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದುದು ಗಮನಸೆಳೆಯಿತು.

ದೇಶದ ತುಂಬಾ ಚರ್ಚೆಯಲ್ಲಿರುವ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ಜೆಎನ್‌ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಹಾಗೂ ಕಾಶ್ಮೀರ ವಿವಾದದಂತಹ ವಿಷಯಗಳ ಭಿನ್ನ ಆಯಾಮಗಳನ್ನು ಸಮ್ಮೇಳನ ನಿಕಷೆಗೆ ಒಳಪಡಿಸಿತು.

ಎಡ ಹಾಗೂ ಬಲ ಪಂಥಗಳ ವಾದಗಳು ಸಮ್ಮೇಳನದ ಆರೂ ವೇದಿಕೆಗಳ ಮೇಲೆ ಮುಖಾಮುಖಿಯಾಗಿ ನಿಂತು, ಪರಸ್ಪರ ಸಂವಾದ ನಡೆಸಿದವು. ಎರಡೂ ವಾದಗಳು ತಮ್ಮ ನಿಲುವಿಗೆ ಅಂಟಿಕೊಂಡು ನಿಂತರೂ ಎದುರಿನ ತಂಡ ಎತ್ತಿದ ಪ್ರಶ್ನೆಗಳಿಗೆ ತಾಳ್ಮೆಯಿಂದ ಕಿವಿಗೊಟ್ಟಿದ್ದು ವಿಶೇಷವಾಗಿತ್ತು.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರ ಉಪಸ್ಥಿತಿ ‘ಬಡತನದ ಅರ್ಥಶಾಸ್ತ್ರ’ ಕುರಿತ ಚರ್ಚೆಗೆ ಬಲ ತುಂಬಿತ್ತು. ‘ಕಳೆದ 30 ವರ್ಷಗಳಲ್ಲಿ ಬಡತನದ ಪ್ರಮಾಣ ಶೇ 40ರಿಂದ ಶೇ 20ಕ್ಕೆ ಇಳಿದಿದೆ. ಭಾರತದಲ್ಲಿ ಸದ್ದಿಲ್ಲದೆ ನಡೆದ ಕ್ರಾಂತಿ ಇದು’ ಎಂಬ ಅಭಿಜಿತ್‌ ಅವರ ಮಾಹಿತಿ ಸಭಿಕರಲ್ಲಿ ಸೋಜಿಗ ಉಂಟು ಮಾಡಿತು. ಕುಬೇರರ ಪಟ್ಟಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಬಡತನದ ಪ್ರಮಾಣವೂ ಹೆಚ್ಚುತ್ತಿದೆ ಎನ್ನುವುದು ಸಭಿಕರ ಗ್ರಹಿಕೆಯಾಗಿತ್ತು.

‘ಸೆಕ್ಸ್‌ ಹಾಗೂ ಅಕ್ಷರ ಜತೆಯಾಗಿ ಸಾಗುವುದಿಲ್ಲ’, ‘ನಾಚಿಕೆಯನ್ನು ಅನುಭವಿಸಬೇಕು, ಅದೇ ನಿಮ್ಮನ್ನು ಲೇಖಕರನ್ನಾಗಿ ರೂಪಿಸುವುದು’, ‘ಹೊಗಳಿಕೆ ಎನ್ನುವುದು ಹೊಸ ಸಾಮ್ರಾಜ್ಯಶಾಹಿ’ – ಇಂತಹ ಕಚಗುಳಿ ಇಡುವ ಸಾಲುಗಳ ಮೂಲಕ ಸಮ್ಮೇಳನಕ್ಕೆ ರಂಗು ತುಂಬಿದವರು ಮ್ಯಾನ್‌ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕ ಹೋವಾರ್ಡ್‌ ಜಾಕೋಬ್ಸನ್‌.

ತುಂಟತನದಿಂದ ಮಿಕ್ಕ ಲೇಖಕರ ಕಾಲು ಎಳೆಯುತ್ತಿದ್ದ ಈ ಅಜ್ಜ, ಸಾಹಿತ್ಯಪ್ರಿಯರ ಕಣ್ಮಣಿ ಆಗಿಬಿಟ್ಟಿದ್ದರು. ಕಥೆ ಹುಟ್ಟುವ ಹಿಂದಿನ ಕ್ಷಣಗಳ ಗುಟ್ಟುಗಳನ್ನೂ ಅವರು ತಮಾಷೆಯ ಮಾತುಗಳಲ್ಲೇ ಬಿಟ್ಟುಕೊಡುತ್ತಿದ್ದರು.

ಜಗತ್ತನ್ನೇ ಕಾಡುತ್ತಿರುವ ಹವಾಮಾನ ತುರ್ತು ಪರಿಸ್ಥಿತಿ ಈ ಸಮ್ಮೇಳನವನ್ನೂ ಹುಡುಕಿಕೊಂಡು ಬಂದಿತ್ತು. ವಿಶ್ವಸಂಸ್ಥೆಯ ಪರಿಸರ ರಾಯಭಾರಿಯೂ ಆಗಿರುವ ನಟಿ ದಿಯಾ ಮಿರ್ಜಾ, ‘ಭೂಮಿ ಅಳುತ್ತಿದೆ. ಅದರ ನೋವಿಗೆ ಕಿವಿಗೊಡಿ’ ಎಂದು ಕಣ್ಣೀರು ಸುರಿಸುತ್ತಲೇ ಮನವಿ ಮಾಡಿದ್ದು, ನೆರೆದಿದ್ದ ಮಕ್ಕಳ ಮನಸ್ಸನ್ನು ನಾಟುವಂತೆ ಮಾಡಿತು. ಪರಿಸರ ರಕ್ಷಣೆಗೆ ಬದ್ಧತೆ ಪ್ರದರ್ಶಿಸುವ ಕೆಲಸಗಳೂ ನಡೆದವು. ದಲಿತ ಸಂವೇದನೆಗಳಿಗೂ ಸಮ್ಮೇಳನ ‘ತಾವು’ ಒದಗಿಸಿತು.

ಮಂಟೊ ಸಿನಿಮಾ ಹುಟ್ಟಿದ ಬಗೆಯ ಕುರಿತು ನಂದಿತಾ ದಾಸ್‌ ನಡೆಸಿಕೊಟ್ಟ ಗೋಷ್ಠಿ ಬಹುಕಾಲ ಕಾಡುವಂತಿತ್ತು. ಮಹಿಳೆಯರ ಭಿನ್ನ ಧ್ವನಿಗಳಿಗೂ ಸಮ್ಮೇಳನ ವೇದಿಕೆಯಾಯಿತು. ಹಲವು ಕೃತಿಗಳು ಸಹ ಬಿಡುಗಡೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT