ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಒಲವು; ಕಲೆಯ ಕವಲು

ಜೈಪುರ ಸಾಹಿತ್ಯೋತ್ಸವಕ್ಕೆ ಚಾಲನೆ
Last Updated 24 ಜನವರಿ 2019, 20:15 IST
ಅಕ್ಷರ ಗಾತ್ರ

ಜೈಪುರ:‘ಕಲೆ, ಸಾಹಿತ್ಯ ಮತ್ತು ವಿಜ್ಞಾನ ಜಗತ್ತಿನ ಶಾಶ್ವತ ಸತ್ಯಗಳನ್ನು ಹುಡುಕಲು ಇರುವಂಥ ಭಿನ್ನ ದಾರಿಗಳು. ಆದರೆ ನಮ್ಮ ಸಮಾಜದಲ್ಲಿ ಕಲೆ, ಸಾಹಿತ್ಯಗಳಿಗೆ ಇರುವ ಜನಪ್ರಿಯತೆ ವಿಜ್ಞಾನಕ್ಕಿಲ್ಲ. ವಿಜ್ಞಾನ ಎಂದರೆ ಅದು ಜನಸಾಮಾನ್ಯರಿಗೆ ಅರ್ಥವಾಗುವಂಥದ್ದಲ್ಲ ಎಂಬ ಭಾವನೆ ಇದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣ ಹೇಳಿದರು.

ಗುರುವಾರ ಜೈಪುರ ಸಾಹಿತ್ಯ ಉತ್ಸವದ ಆಶಯ ಭಾಷಣ ಮಾಡಿದ ಅವರು ವಿಜ್ಞಾನಕ್ಕೂ ಸಾಹಿತ್ಯ ಮತ್ತು ಕಲೆಗೆ ದೊರೆತಷ್ಟೇ ಮಹತ್ವ ದೊರೆಯಬೇಕು ಎಂದು ಪ್ರತಿಪಾದಿಸಿದರು.

‘ವಿಜ್ಞಾನಿಗಳು ತಮ್ಮ ಸಂಶೋಧನೆಗಳಿಗಿರುವ ಸಾಮಾಜಿಕ ಮತ್ತು ಮಾನವೀಯ ಆಯಾಮಗಳನ್ನು ಮರೆಯಬಾರದು. ಜಗತ್ತನ್ನು ನೋಡಲು, ಅರ್ಥ ಮಾಡಿಕೊಳ್ಳಲು ವಿಜ್ಞಾನವನ್ನು ಹೊರತುಪಡಿಸಿ ಬೇರೆ ದಾರಿಗಳೂ ಇವೆ. ವಿಜ್ಞಾನಿಗಳು ಇತಿಹಾಸ ಮತ್ತು ಅದು ಕಲಿಸಿದ ಪಾಠಗಳ ಕುರಿತು ಅರಿವು ಹೊಂದಿರಬೇಕು. ಕಲೆ ಮತ್ತು ಸಂಗೀತ ನಮ್ಮೊಳಗೆ ಗಹನವಾದ ಮತ್ತು ಅನೂಹ್ಯವಾದ ದಾರಿಗಳನ್ನು ತೆರೆಯುವ ಶಕ್ತಿಯನ್ನು ಹೊಂದಿವೆ. ಹೀಗಾಗಿ ಮಾನವಶಾಸ್ತ್ರ ಮತ್ತು ಕಲೆಯಿಂದ ವಿಜ್ಞಾನಿಗಳು ಕಲಿಯುವಂಥದ್ದು ಸಾಕಷ್ಟಿದೆ’ ಎಂದೂ ಅವರು ಹೇಳಿದರು.

ರಾಜಸ್ತಾನದ ಸಾಂಪ್ರದಾಯಿಕ ವಾದ್ಯಸಂಗೀತದೊಂದಿಗೆ ದೇಶದ ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವಕ್ಕೆ ಚಾಲನೆ ದೊರೆಯಿತು.

ಸಂಘಟಕರಲ್ಲಿ ಒಬ್ಬರಾದ ಸಂಜಯ್ ರಾಯ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಾವಿಂದು ಹಣ ಮಾಡುವ ಅವಸರದಲ್ಲಿ, ದೈನಂದಿನ ಜಂಜಡದಲ್ಲಿ ಕಲೆ–ಸಾಹಿತ್ಯದ ಮಹತ್ವವನ್ನು ಮರೆಯುತ್ತಿದ್ದೇವೆ. ಧರ್ಮ, ದೇಶ, ಭಾಷೆಗಳ ಗಡಿಯಿಲ್ಲದೆ ಎಲ್ಲರನ್ನೂ ಒಂದುಗೂಡಿಸಿ ನಾವೆಲ್ಲರೂ ಮಾನವರು ಎಂಬ ಅರಿವುನ್ನು ಮೂಡಿಸುವ ಪ್ರಯತ್ನವನ್ನು ಜೈಪುರ ಸಾಹಿತ್ಯೋತ್ಸವ ಮಾಡುತ್ತಿದೆ’ ಎಂದರು.

ಇದೇ ಸಂದರ್ಭದಲ್ಲಿ, ಮುಂಬೈ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ ಬಲಿಯಾದವರ ಕುಟುಂಬದವರ ಕಥೆಯನ್ನು ಹೇಳುವ ’26/11 ಸ್ಟೋರೀಸ್ ಆಫ್‌ ಸ್ಟ್ರೆಂಥ್‌’ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು.

ಜ. 28ರವರೆಗೆ ನಡೆಯಲಿರುವ ಈ ಸಾಹಿತ್ಯೋತ್ಸವದಲ್ಲಿ ಐದು ವೇದಿಕೆಗಳಲ್ಲಿ ಸುಮಾರು ಐನೂರಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ವಿಚಾರಮಂಡನೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT