ಆರೋಗ್ಯ ಚೇತರಿಕೆ ಬಳಿಕ ರಾಜ್ಯಸಭೆ ಕಲಾಪಕ್ಕೆ ಜೇಟ್ಲಿ ಹಾಜರ್‌

7

ಆರೋಗ್ಯ ಚೇತರಿಕೆ ಬಳಿಕ ರಾಜ್ಯಸಭೆ ಕಲಾಪಕ್ಕೆ ಜೇಟ್ಲಿ ಹಾಜರ್‌

Published:
Updated:

ನವದೆಹಲಿ : ಕೇಂದ್ರ ಸಚಿವ ಅರುಣ್‌ ಜೇಟ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆ ಮಾಡಿಸಿಕೊಂಡ ನಂತರ ಇದೇ ಮೊದಲ ಬಾರಿ ರಾಜ್ಯಸಭೆ ಕಲಾಪದಲ್ಲಿ ಗುರುವಾರ ಕಾಣಿಸಿಕೊಂಡರು. ನಾಲ್ಕು ತಿಂಗಳಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಶಸ್ತ್ರ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿರುವ ಜೇಟ್ಲಿ, ರಾಜ್ಯಸಭೆ ಉಪಸಭಾಪತಿ ಹುದ್ದೆಗೆ ಸ್ಪರ್ಧಿಸಿದ್ದ ಜೆಡಿಯು ಸದಸ್ಯ ಹಾಗೂ ಎನ್‌ಡಿಎ ಅಭ್ಯರ್ಥಿ ಹರಿವಂಶ್‌ ನಾರಾಯಣ್‌ ಸಿಂಗ್‌ ಅವರಿಗೆ ಮತ ಚಲಾಯಿಸಲು ಕಲಾಪಕ್ಕೆ ಹಾಜರಾಗಿದ್ದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಸೇರಿದಂತೆ ರಾಜ್ಯಸಭೆಯ ಸದಸ್ಯರು, ಜೇಟ್ಲಿ ಅವರನ್ನು ಆತ್ಮೀಯವಾಗಿ ಸದನಕ್ಕೆ ಬರಮಾಡಿಕೊಂಡರು. ಇನ್ನಷ್ಟು ದಿನಗಳು ವಿಶ್ರಾಂತಿ ಪಡೆಯುವಂತೆಯೂ ಸಭಾನಾಯಕನಿಗೆ ಸಲಹೆ ನೀಡಿದರು.

ಮತದಾನ ಪ್ರಕ್ರಿಯೆ ಮುಗಿದ ನಂತರ ರಾಜ್ಯಸಭೆಗೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಜೇಟ್ಲಿ ಅವರ ಉಪಸ್ಥಿತಿ ಕಂಡು ಸಂತಸ ವ್ಯಕ್ತಪಡಿಸಿದರು. ‘ಸಭಾ ನಾಯಕರು ಚೇತರಿಸಿಕೊಂಡು, ಇಂದು ಸದನಕ್ಕೆ ಹಾಜರಾಗಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ’ ಎಂದರು.

ಸಭಾಪತಿ ಎಂ.ವೆಂಕಯ್ಯನಾಯ್ಡು ಅವರು, ಸೋಂಕು ಹರಡುವ ಅಪಾಯದಿಂದ ಜೇಟ್ಲಿ ಅವರನ್ನು ರಕ್ಷಿಸಬೇಕಾಗಿದ್ದು, ಸದನದ ಸದಸ್ಯರು ಜೇಟ್ಲಿ ಅವರ ಹತ್ತಿರ ಹೋಗಿ ಅವರನ್ನು ಮುಟ್ಟಿ ಮಾತನಾಡಿಸಬಾರದು ಎಂದು ಮನವಿ ಮಾಡಿದರು.

ಜೇಟ್ಲಿ ಅವರು ನಿಭಾಯಿಸುತ್ತಿದ್ದ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರ ಖಾತೆಗಳನ್ನು ಸಚಿವ ಪೀಯೂಷ್‌ ಗೋಯಲ್‌ ಅವರು ತಾತ್ಕಾಲಿಕವಾಗಿ ನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !