ಶುಕ್ರವಾರ, ಅಕ್ಟೋಬರ್ 18, 2019
20 °C
ಸರ್ಕಾರದ ನಿರ್ಧಾರಕ್ಕೆ ಕಾಶ್ಮೀರಿಗರ ಅತೃಪ್ತಿ l ಮೊಬೈಲ್‌, ಇಂಟರ್‌ನೆಟ್‌ ನಿಷೇಧ ಮುಂದುವರಿಕೆ

ಕಾಶ್ಮೀರ: ನಿರ್ಬಂಧ ರದ್ದಾದರೆ ಪ್ರವಾಸಿಗರು ಬರುವರೇ?

Published:
Updated:
Prajavani

ಶ್ರೀನಗರ: ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಬೇಡಿ ಎಂದು ಆ.3ರಂದು ಪ್ರವಾಸಿಗರಿಗೆ ನೀಡಿದ್ದ ಸೂಚನೆಯನ್ನು ಅಲ್ಲಿನ ಸರ್ಕಾರ ಹಿಂದಕ್ಕೆ ಪಡೆದಿದೆ. ಪ್ರವಾಸಿಗರ ಭೇಟಿಗೆ ಗುರುವಾರದಿಂದ ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಇದು ಭಾರಿ ಸಂತಸವನ್ನೇನೂ ತಂದಿಲ್ಲ. ಸಂವಹನದ ಮೇಲೆ ಹೇರಿರುವ ನಿಷೇಧವನ್ನೂ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಶ್ಮೀರದಲ್ಲಿರುವ ಎಲ್ಲ ಪ್ರವಾಸಿಗರು ಮತ್ತು ಅಮರನಾಥ ಯಾತ್ರಿಕರು ತಕ್ಷಣವೇ ರಾಜ್ಯ ಬಿಟ್ಟು ತೆರಳಬೇಕು ಎಂದು ವಿಶೇಷಾಧಿಕಾರ ರದ್ದತಿಗೆ ಎರಡು ದಿನ ಮೊದಲು ರಾಜ್ಯಪಾಲ ಸತ್ಯಪಾಲ ಮಲಿಕ್‌ ಆದೇಶ ನೀಡಿದ್ದರು. ಈ ಆದೇಶವು ಕಾಶ್ಮೀರದಲ್ಲಿ ಭಾರಿ ಇಕ್ಕಟ್ಟಿಗೆ ಕಾರಣವಾಗಿತ್ತು. ಸಾವಿರಾರು ಪ್ರವಾಸಿಗರು ಮತ್ತು ತೀರ್ಥಯಾತ್ರಿಕರು ಕೆಲವೇ ದಿನಗಳಲ್ಲಿ ಕಾಶ್ಮೀರ ತೊರೆದಿದ್ದರು.

10ರಿಂದ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಬಹುದು ಎಂದು ಇದೇ 7ರಂದು ಹೇಳಲಾಗಿತ್ತು. ಪ್ರವಾಸಿಗರ ಮೇಲಿನ ನಿರ್ಬಂಧ ವಾಪಸ್‌ ತೆಗೆದುಕೊಂಡಿರುವುದು ಒಳ್ಳೆಯ ನಿರ್ಧಾರ. ಆದರೆ, ಪ್ರವಾಸಿ ಋತು ಮುಗಿದ ಮೇಲೆ ನಿರ್ಬಂಧ ರದ್ದು ಮಾಡುವುದರಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದ್ದಾರೆ. 

‘ಸಂವಹನ ನಿರ್ಬಂಧ ರದ್ದು ಮಾಡದಿದ್ದರೆ ಕಾಶ್ಮೀರಕ್ಕೆ ಪ್ರವಾಸಿಗರು ಬರುವುದು ಸಾಧ್ಯವಿಲ್ಲ. ಇಂಟರ್‌ನೆಟ್‌ ಮತ್ತು ಮೊಬೈಲ್‌ ಫೋನ್‌ ಸಂಪರ್ಕ ಇಲ್ಲದಿರುವಾಗ ಪ್ರವಾಸಿಗರು ಬರುವುದಾದರೂ ಹೇಗೆ? ಈಗ ಇರುವ ಅನಿಶ್ಚಿತ ಸ್ಥಿತಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಇಲ್ಲಿಗೆ ಪ್ರವಾಸಿಗರು ಬರುವಂತೆ ಮಾಡಲು ಸರ್ಕಾರ ಗಟ್ಟಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಥರ್‌ ಅಹ್ಮದ್‌ ಹೇಳಿದ್ದಾರೆ. 

ಪ್ರವಾಸೋದ್ಯಮ ಋತು ಪೂರ್ಣಗೊಂಡ ಬಳಿಕ ನಿರ್ಬಂಧ ಹಿಂದಕ್ಕೆ ತೆಗೆಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಆ. 3ರಂದು ಹೇರಿದ ನಿರ್ಬಂಧವು ಪ್ರವಾಸೋದ್ಯಮ ಕ್ಷೇತ್ರವನ್ನು ದಂಗುಬಡಿಸಿದೆ ಎಂದು ಹೋಟೆಲ್ ಮಾಲೀಕ ಲತೀಫ್‌ ಲೋನ್‌ ಹೇಳಿದ್ದಾರೆ. 

‘ಸಂವಹನ ನಿರ್ಬಂಧ ಮುಂದುವರಿದಿರುವಾಗಲೇ ಪ್ರವಾಸಿಗರಿಗೆ ಅವಕಾಶ ನೀಡಿರುವುದು ಅರೆ ಮನಸ್ಸಿನ ನಿರ್ಧಾರ’ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಹೇಳಿದೆ.

ಮೂವರು ಮುಖಂಡರ ಬಿಡುಗಡೆ

ಆ. 5ರಿಂದ ಬಂಧನದಲ್ಲಿರುವ ಜಮ್ಮು–ಕಾಶ್ಮೀರದ ಮುಖಂಡರ ಪೈಕಿ ಮೂವರು ರಾಜಕಾರಣಿಗಳನ್ನು ಸರ್ಕಾರವು ಗುರುವಾರ ಬಿಡುಗಡೆ ಮಾಡಿದೆ. 

ರಫಿಯಾಬಾದ್‌ನ ಮಾಜಿ ಶಾಸಕ ಯಾವರ್‌ ಮೀರ್‌, ಕಾಂಗ್ರೆಸ್‌ ಮುಖಂಡ ಶೋಯಬ್‌ ಲೋನ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಕಾರ್ಯಕರ್ತ ನೂರ್‌ ಮೊಹಮ್ಮದ್ ಅವರನ್ನು ಬಿಡುಗಡೆ ಮಾಡಲಾಗಿದೆ. 

ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿರುವ ಶ್ರೀನಗರದ ಬಟಮಾಲೂ ಪ್ರದೇಶದಲ್ಲಿ ಪಕ್ಷ ಸಂಘಟನೆಯ ಹೊಣೆಯನ್ನು ನೂರ್‌ ಅವರಿಗೆ ವಹಿಸಲಾಗಿತ್ತು. ‘ಶಾಂತಿ ಕಾಪಾಡುತ್ತೇನೆ ಮತ್ತು ಉತ್ತಮ ನಡವಳಿಕೆ ತೋರುತ್ತೇನೆ’ ಎಂದು ನೂರ್‌ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಬುಧವಾರವೇ ಹೇಳಿದ್ದರು. 

ವಿಶೇಷಾಧಿಕಾರ ರದ್ದತಿಯ ಬಳಿಕ ಕಾಶ್ಮೀರದ ನೂರಾರು ಮುಖಂಡರನ್ನು ಬಂಧನದಲ್ಲಿ ಇರಿಸಲಾಗಿದೆ. ಅವರನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಇತ್ತೀಚೆಗೆ ಹೇಳಿತ್ತು.

***

ವಿಶೇಷಾಧಿಕಾರ ರದ್ದು ಮಾಡಲು ಸರ್ಕಾರ ಬಯಸಿತ್ತು. ಹಾಗಿದ್ದ ಮೇಲೆ ಪ್ರವಾಸಿಗರ ಮೇಲೆ ಬಹುದೊಡ್ಡ ಭಯೋತ್ಪಾದನಾ ದಾಳಿ ನಡೆಯಲಿದೆ ಎಂದು ಸುಳ್ಳು ಹೇಳಿ ಭೀತಿ ಹುಟ್ಟಿಸಿದ್ದು ಯಾಕೆ?

-ಲತೀಫ್‌ ಲೋನ್‌, ಕಾಶ್ಮೀರದ ಹೋಟೆಲ್ ಮಾಲೀಕ

ಮೊಬೈಲ್‌ ಮತ್ತು ಇಂಟರ್‌ನೆಟ್‌ ಇಲ್ಲದ ಕಾರಣಕ್ಕೆ ತಮ್ಮ ಕುಟುಂಬ ಮತ್ತು ಹೊರಜಗತ್ತಿನ ಜತೆಗೆ ಸಂಪರ್ಕ ಕಡಿದುಕೊಂಡು ಕಾಶ್ಮೀರಕ್ಕೆ ಯಾರಾದರೂ ಬರಲು ಸಾಧ್ಯವೇ

-ನ್ಯಾಷನಲ್‌ ಕಾನ್ಫರೆನ್ಸ್‌

Post Comments (+)