ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ನಾಯಕರ ಬಿಡುಗಡೆಗೆ ಕಾಲಮಿತಿ ಇಲ್ಲ

ಸಂಸದೀಯ ಸಮಿತಿಗೆ ಗೃಹ ಸಚಿವಾಲಯ ಹೇಳಿಕೆ
Last Updated 15 ನವೆಂಬರ್ 2019, 22:10 IST
ಅಕ್ಷರ ಗಾತ್ರ

ನವದೆಹಲಿ: ‘ಜಮ್ಮು ಕಾಶ್ಮೀರದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಹಿತ ಬಂಧಿತ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗುವುದು. ಆದರೆ, ಅದಕ್ಕೆ ಯಾವುದೇ ಕಾಲಮಿತಿ ಹಾಕಿಕೊಂಡಿಲ್ಲ’ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸಂಸದೀಯ ಸಮಿತಿಗೆ ಹೇಳಿದ್ದಾರೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗ್ಯಾನೇಶ್‌ ಕುಮಾರ್‌ ಮತ್ತು ಸಚಿವಾಲಯದ ಇತರ ಅಧಿಕಾರಿಗಳುಹಿರಿಯ ಕಾಂಗ್ರೆಸ್‌ ನಾಯಕ ಆನಂದ ಶರ್ಮ ನೇತೃತ್ವದ ಸಂಸತ್‌ನ ಸ್ಥಾಯಿ ಸಮಿತಿಗೆ ಅಲ್ಲಿನ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿದರು.

ವಿವಾದಿತ ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನ್ವಯ ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರು, ಮುಖ್ಯವಾಗಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶ್ರೀನಗರದ ಸಂಸದ ಫಾರೂಕ್‌ ಅಬ್ದುಲ್ಲಾ ಅವರನ್ನು ಸೆ. 17ರಂದು ಬಂಧಿಸಿರುವ ನಡೆಯ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನ್ವಯ ಬಂಧಿತ ನಾಯಕರು ಈ ಕ್ರಮವನ್ನು ಪ್ರಶ್ನಿಸಿ ಅದಕ್ಕಾಗಿ ನಿಗದಿಪಡಿಸಿದ ನ್ಯಾಯಮಂಡಳಿಯ ಮೊರೆ ಹೋಗಬಹುದು. ಅಲ್ಲಿನ ಆದೇಶವು ಅವರಿಗೆ ಸಮಾಧಾನ ತರದಿದ್ದರೆ ಅವರು ಹೈಕೋರ್ಟ್‌ ಮೊರೆ ಹೋಗಬಹುದು’ ಎಂದು ಅಧಿಕಾರಿಗಳು ಸಮಿತಿಗೆ ತಿಳಿಸಿದರು.

ರಾಜಕೀಯ ನಾಯಕರ ಬಿಡುಗಡೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಬಂಧಿತರಲ್ಲಿ ಕೆಲವರನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಉಳಿದವರನ್ನು ಕ್ರಮೇಣ ಬಿಡುಗಡೆ ಮಾಡಲಾಗುವುದು. ಹಾಗೆಂದು ಯಾವುದೇ ಸಮಯ ಮಿತಿ ಹೇಳಲು ನಿರಾಕರಿಸಿದರು’ ಎಂದು ಮೂಲಗಳು ಹೇಳಿವೆ.

‘ಎಲ್ಲ ಸ್ಥಿರ ದೂರವಾಣಿಗಳು, ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಕರೆ ಸೇವೆಗಳು ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುನರಾರಂಭಗೊಂಡಿವೆ. ಸೆಕ್ಷನ್‌ 144ನ್ನು ಕಣಿವೆ ಪ್ರದೇಶದಲ್ಲಿ ಹಿಂದಕ್ಕೆ ಪಡೆಯಲಾಗುವುದು ಅಥವಾ ಸಡಿಲಗೊಳಿಸಲಾಗುವುದು. ಆದರೆ, ರಾತ್ರಿ ವೇಳೆ ನಿರ್ಬಂಧ ಮುಂದುವರಿಯಲಿದೆ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT