ಶನಿವಾರ, ಡಿಸೆಂಬರ್ 14, 2019
24 °C
ವಿಶೇಷಾಧಿಕಾರ ರದ್ದತಿ ಬಳಿಕದ ಪರಿಸ್ಥಿತಿ: ಸುಪ್ರೀಂ ಕೋರ್ಟ್‌ಗೆ ವಿವರ ಸಲ್ಲಿಸಿದ ಸರ್ಕಾರ

ಕಾಶ್ಮೀರ: ಒಂದು ಗುಂಡೂ ಹಾರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಮ್ಮು–ಕಾಶ್ಮೀರದಲ್ಲಿ ನಡೆದಿರುವುದು ಇತಿಹಾಸದಲ್ಲಿಯೇ ಅಭೂತಪೂರ್ವವಾದುದು. ಆಗಸ್ಟ್‌ 5ರಂದು ಇಲ್ಲಿನ ವಿಶೇಷಾಧಿಕಾರ ರದ್ದತಿಯ ಬಳಿಕ ಒಂದೇ ಒಂದು ಗುಂಡು ಹಾರಿಲ್ಲ. ಪೊಲೀಸ್‌ ಗುಂಡಿಗೆ ನಾಗರಿಕರು ಬಲಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಜಮ್ಮು–ಕಾಶ್ಮೀರ ಆಡಳಿತವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಇಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಕ್ರಮೇಣ ತೆಗೆದು ಹಾಕಲಾಗುತ್ತಿದೆ. ಜನರಿಗೆ ಇನ್ನೂ ಹೆಚ್ಚಿನ ಹಕ್ಕುಗಳನ್ನು ನೀಡಲಾಗಿದೆ. ಶಾಂತಿಪ್ರೇಮಿ ಜನರಿಗೆ ಇನ್ನಷ್ಟು ಸುರಕ್ಷಿತವಾದ ವಾತಾವರಣ ನಿರ್ಮಿಸಲಾಗಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹೇಳಿದ್ದಾರೆ. 

ಪಂಚಾಯಿತಿರಾಜ್‌ ಸಂಸ್ಥೆಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ತಳಮಟ್ಟದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲಾಗಿದೆ. ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಶಾಸನ ಸಭೆಯಲ್ಲಿ ಮೀಸಲು ದೊರೆಯಲಿದೆ ಎಂದೂ ಅವರು ತಿಳಿಸಿದ್ದಾರೆ.

ಜನಸ್ನೇಹಿಯಾಗಿರುವ 106 ಕೇಂದ್ರೀಯ ಕಾನೂನುಗಳು ಇನ್ನು ಮುಂದೆ ಜಮ್ಮು–ಕಾಶ್ಮೀರದಲ್ಲಿ ಅನ್ವಯವಾಗಲಿವೆ. ಬಾಲ್ಯವಿವಾಹ ನಿಷೇಧ ಕಾಯ್ದೆ, ಬಾಲನ್ಯಾಯ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆಗಳು ಇದರಲ್ಲಿ ಸೇರಿವೆ. ರಾಜ್ಯದ ಹೊರಗಿನವರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪೂರ್ಣ ಹಕ್ಕು ದೊರೆಯಲಿದೆ ಎಂದು ಅವರು ವಿವರಿಸಿದ್ದಾರೆ. 

‘22 ಸಾವಿರ ಉಗ್ರರನ್ನು ಹತ್ಯೆ ಮಾಡಲಾಗಿರುವ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಅದು ಮೂರ್ಖತನ. ಪ್ರತ್ಯೇಕತಾವಾದವನ್ನು ಹರಡುವ ಹಲವರು ಇನ್ನೂ ಅಲ್ಲಿ ಇದ್ದಾರೆ. ಕೆಲ ವರ್ಷಗಳ ಹಿಂದೆ ಉಗ್ರನೊಬ್ಬನ ಹತ್ಯೆಯ ಬಳಿಕ ಅಂತರ್ಜಾಲವನ್ನು ಮೂರು ತಿಂಗಳು ಸ್ಥಗಿತಗೊಳಿಸಲಾಗಿತ್ತು. ಆಗ ಒಂದು ದೂರೂ ದಾಖಲಾಗಿರಲಿಲ್ಲ. ಆದರೆ, ಈಗ 20 ಪ್ರಕರಣಗಳು ದಾಖಲಾಗಿವೆ’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು. 

ಸಂವಹನ ಮತ್ತು ಪ್ರಯಾಣ ನಿರ್ಬಂಧ ಪ್ರಶ್ನಿಸಿ ಕಾಶ್ಮೀರ್‌ ಟೈಮ್ಸ್‌ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್‌, ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಸಲ್ಲಿಸಿದ್ದ ಅರ್ಜಿಗಳಿಗೆ ಈ ಪ್ರತಿಕ್ರಿಯೆ ನೀಡಲಾಗಿದೆ.

ಸರ್ಕಾರ ಕೊಟ್ಟ ಮಾಹಿತಿ

* 202 ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ 144ನೇ ಸೆಕ್ಷನ್‌ ಅಡಿಯಲ್ಲಿನ ನಿಷೇಧಾಜ್ಞೆ ರದ್ದು ಮಾಡಲಾಗಿದೆ

* ಕೆಲವು ಸ್ಥಳಗಳಲ್ಲಿ ರಾತ್ರಿಗಳಲ್ಲಿ ಮಾತ್ರ ನಿಷೇಧಾಜ್ಞೆ ಇದೆ

* 20,411 ಶಾಲೆಗಳು ತೆರೆದಿವೆ. ಪರೀಕ್ಷೆಗಳು ನಡೆಯುತ್ತಿವೆ

* ಎಲ್ಲ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳು ತೆರೆದಿವೆ,

* ಸ್ಥಿರ ದೂರವಾಣಿಗಳು, ಪೋಸ್ಟ್‌ ಪೇಯ್ಡ್‌ ಮೊಬೈಲ್‌ಗಳು ಕಾರ್ಯನಿರ್ವಹಿಸುತ್ತಿವೆ

* ಕಾಶ್ಮೀರದಲ್ಲಿ ನಡೆದ 11ನೇ ತರಗತಿಯ ಶೇ 99.48ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು