ಶುಕ್ರವಾರ, ಫೆಬ್ರವರಿ 26, 2021
28 °C

ಕಾಶ್ಮೀರ370 Live | ಜಮ್ಮು ಕಾಶ್ಮೀರ ಪುನಾರಚನೆ ಮಸೂದೆಗೆ ರಾಜ್ಯಸಭೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆ–2019’ ಇಂದು ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು.

ಸಂವಿಧಾನದ ವಿಧಿ 370ರ ಸಂಬಂಧದ ಪ್ರಸ್ತಾವಕ್ಕೆ ರಾಜ್ಯಸಭೆ ಅನುಮೋದನೆ ನೀಡಿತು. ವಿದೇಯಕದ ಪರವಾಗಿ 125 ಮತಗಳು ಮತ್ತು ವಿರೋಧವಾಗಿ 61 ಮತಗಳು ಬಂದವು.

ಬೆಳಿಗ್ಗೆ 11ಕ್ಕೆ ಸದನಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ವಿಷಯ ಮಂಡಿಸಿದರು. ಇದಾಗುತ್ತಿದ್ದಂತೆ, ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ದಿನದ ಕಲಾಪದ ಅಂತ್ಯದ ವರೆಗೆ ನಡೆದ ಸುದೀರ್ಘ ಚರ್ಚೆ ಮತ್ತು ವಿರೋಧಗಳ ಮಧ್ಯೆಯೇ ವಿದೇಯಕವನ್ನು ಮತಕ್ಕೆ ಹಾಕಲಾಯಿತು. ಪರವಾಗಿ 125 ಮತ, ವಿರೋಧವಾಗಿ 61 ಮತ ಬಿದ್ದವು. 

ಕಲಾಪವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಮುಂದೂಡಲಾಯಿತು.

ಸರ್ಕಾರ ಮಂಡಿಸಿದ ವಿದೇಯಕಕ್ಕೆ ಬಿಎಸ್‌ಪಿ, ಎಐಎಡಿಎಂಕೆ, ಬಿಜೆಡಿ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬೆಂಬಲಿಸಿದವು. ಕಾಂಗ್ರೆಸ್, ಸಿಪಿಎಂ, ಎನ್‌ಸಿಪಿ ಪಕ್ಷಗಳು ವಿರೋಧಿಸಿದವು. ಸಂಜೆಯ ವೇಳೆಗೆ ಟಿಎಂಸಿ ಕಲಾಪವನ್ನು ಬಹಿಷ್ಕರಿಸಿ ಸದನದಿಂದ ಹೊರ ನಡೆಯಿತು.

 

5.00- ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಹೊರ ನಡೆದ ಟಿಎಂಸಿ

ರಾಜ್ಯಸಭೆ 370 ರದ್ದುಗೊಳಿಸುವ ಪ್ರಸ್ತಾವದ ಮೇಲಿನ ಚರ್ಚೆಯ ಕಲಾಪವನ್ನು ಬಹಿಷ್ಕರಿಸಿರುವ ಟಿಎಂಸಿ ಸದನದಿಂದ ಹೊರ ನಡೆಯಿತು.

ಈ ವೇಳೆ ಮಾತನಾಡಿದ ಸಂಸದ ಡೆರೆಕ್‌ ಒಬ್ರಿಯೆನ್‌, ಇಂದು ಬೆಳಿಗ್ಗೆ 11ರಿಂದ ಸಂವಿಧಾನದ ಕಗ್ಗೊಲೆ ಮಾಡುತ್ತಿರುವುದನ್ನು ನೋಡಿದ್ದೇವೆ. ಇನ್ನು ಮುಂದೆ ನಮ್ಮಿಂದ ನೋಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

5.00- ಲೇಹ್‌ನಲ್ಲಿ ಬಿಜೆಪಿ ಸಂಭ್ರಮ

ಜಮ್ಮು ಮತ್ತು ಕಾಶ್ಮಿರಕ್ಕೆ ವಿಶೇಷ ಸ್ಥಾನ ನೀಡಿದ್ದ ಆರ್ಟಿಕಲ್‌ 370 ರದ್ದುಪಡಿಸಿ, ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲು ಕೈಗೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಕಾಶ್ಮೀರದ ಲೇಹ್‌ನಲ್ಲಿ ಬಿಜೆಪಿ ಕಾರ್ಯರ್ತರು ಸಂಭ್ರಮ ವ್ಯಕ್ತಪಡಿಸಿದರು.

4.48- ಇದು ಸಾಕಷ್ಟು ಯೋಚಿಸಿ ತೆಗೆದುಕೊಂಡ ನಿರ್ಧಾರ: ನಿರ್ಮಲಾ ಸೀತಾರಾಮನ್

ಜನಸಂಘದ ಕಾಲದಿಂದಲೂ ಬಿಜೆಪಿ ಏಕರೂಪ ನಾಗರಿಕ ಸಂಹಿತೆಗೆ ಬದ್ಧವಾಗಿದೆ. ಇದು ಹತ್ತಾರು ವರ್ಷಗಳಿಂದ ಚರ್ಚೆಯಲ್ಲಿರುವ ವಿಚಾರ. ಶ್ಯಾಮ ಪ್ರಸಾದ್ ಮುಖರ್ಜಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಅನುಮಾನಾಸ್ಪದವಾಗಿ ಅವರು ನಿಧನರಾದರು. ಸತತ ಚರ್ಚೆ, ಸಮಾಲೋಚನೆಯಿಂದಲೇ ಬಿಜೆಪಿ ಈ ವಿಚಾರವನ್ನು ಮುನ್ನೆಲೆಗೆ ತಂದಿದೆ. ಈ ವಿಚಾರದಲ್ಲಿ ಚರ್ಚೆ ನಡೆಸಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪ ನಿರಾಧಾರ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ರಾಜ್ಯಸಭೆಯಲ್ಲಿ ಇಂದು ನಡೆಯುತ್ತಿರುವ ಈ ಚರ್ಚೆ ಐತಿಹಾಸಿಕವಾದುದು. ಹಲವು ವರ್ಷಗಳಿಂದ ದೇಶ ಈ ದಿನಕ್ಕಾಗಿ ಕಾಯುತ್ತಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅಂಗವಾಗಿಸುವ ಈ ಕ್ಷಣಕ್ಕಾಗಿ ದೇಶ ಕಾಯುತ್ತಿತ್ತು ಎಂದು ಅವರು ನುಡಿದರು.

4.44– ಚರ್ಚೆಯ ಮೇಲೆ ಕೇಂದ್ರ ಸರ್ಕಾರಕ್ಕೆ ವಿಶ್ವಾಸವಿಲ್ಲ: ಕಪಿಲ್ ಸಿಬಲ್

ನೀವು ಇದನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದೀರಿ. ಇದು ಎಂಥ ದಿನ ಎನ್ನುವುದನ್ನು ಇತಿಹಾಸವೇ ನಿರ್ಧರಿಸುತ್ತೆ. ನೀವು ಇಂಥ ಕೆಲಸಕ್ಕೆ ಏಕೆ ಮುಂದಾದಿರಿ? ನಿಮಗೆ ಬೇಕಾದಂತೆ ಬಹುಮತವನ್ನು ನಿರ್ಮಿಸಿಕೊಂಡಿದ್ದೀರಿ (ಮ್ಯಾನುಫೇಕ್ಚರ್ಡ್‌). ನಿಮಗೆ ಚರ್ಚೆ ಬೇಕಿಲ್ಲ. ಬಹುಮತವಿರುವ ಕಾರಣ ಈ ಮಸೂದೆಯನ್ನು ಜಾರಿ ಮಾಡಿಯೇ ತೀರುತ್ತೀರಿ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆಕ್ಷೇಪಿಸಿದರು.

ನಿಮಗೆ ನಮ್ಮ ಮೇಲೆ ವಿಶ್ವಾಸವಿಲ್ಲ. ಯಾವುದೇ ರಾಜ್ಯದ ಗಡಿಯನ್ನು ನೀವು ಬದಲಿಸಬಹುದು. ಯಾವುದೇ ಸರ್ಕಾರವನ್ನು ವಜಾ ಮಾಡಬಹುದು. ಚರ್ಚೆಯ ಮೇಲೆ ವಿಶ್ವಾಸವಿಲ್ಲದ ನಿಮ್ಮ ಎದುರು ಚರ್ಚೆ ಮಾಡಿ ಏನು ಪ್ರಯೋಜನ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದರು.

ಇದನ್ನು ನೀವು ಐತಿಹಾಸಿಕ ದಿನ ಎಂದು ಬಣ್ಣಿಸುವುದಾದರೆ ಇಂಥ ಹಲವು ಐತಿಹಾಸಿಕ ದಿನಗಳು ಮುಂದೆಯೂ ಬರಲಿವೆ ಎಂದು ಹೇಳಲು ನಾನು ಇಚ್ಛಿಸುತ್ತೇನೆ. ನೀವು ಇಡುತ್ತಿರುವ ಈ ಹೆಜ್ಜೆಯು ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ. ನಾವು ಇಲ್ಲಿಯೇ ನಿಂತು ಸಂವಿಧಾನದ ರಕ್ಷಣೆಗೆ ಪ್ರಯತ್ನಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

4.40–ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ದಿಟ್ಟ ಹೆಜ್ಜೆ: ಅಡ್ವಾಣಿ

ಆರ್ಟಿಕಲ್‌ 370 ರದ್ದುಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವತ್ತ ಇಟ್ಟ ದಿಟ್ಟ ಹೆಜ್ಜೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಬಣ್ಣಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಡ್ವಾಣಿ, ಕೇಂದ್ರ ಸರ್ಕಾರದ ಈ ನಿರ್ಧಾರ ಸಂತಸ ತಂದಿದೆ. ಬಿಜೆಪಿಯ ಈ ಸಿದ್ಧಾಂತ, ಜನ ಸಂಘದ ಸಿದ್ಧಾಂತವು ಆಗಿತ್ತು ಎಂದು ಅವರು ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

4.15– ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಚಿದಂಬರಂ

ನೀವು ಜಮ್ಮು ಮತ್ತು ಕಾಶ್ಮೀರಕ್ಕೆ ಮಾಡುತ್ತಿರುವ ಅನ್ಯಾಯವನ್ನು ದೇಶದ ಇತರ ರಾಜ್ಯಗಳಿಗೂ ಮಾಡಬಹುದು. ಅಲ್ಲಿನ ಜನರು ಪ್ರಜಾಪ್ರಭುತ್ವದ ಪರವಾಗಿ ಇದ್ದಾರೆ. ನೀವೇಕೆ ಅದನ್ನು ನಿರಾಕರಿಸುತ್ತೀರಿ ಎಂದು ಸಂಸದ ಪಿ.ಚಿದಂಬರಂ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಚಿದಂಬರಂ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರದ ಆಡಳಿತ ಹೇರುವ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿದ ಪ್ರಾದೇಶಿಕ ಪಕ್ಷಗಳನ್ನೂ ತರಾಟೆಗೆ ತೆಗೆದುಕೊಂಡರು. ‘ಕೇಂದ್ರ ಸರ್ಕಾರವನ್ನು ಇಂದು ಬೆಂಬಲಿಸಿರುವ ಎಐಎಡಿಎಂಕೆ ಅಥವಾ ಬಿಜೆಡಿಗೆ ಮುಂದೊಂದು ದಿನ ಪಶ್ಚಿಮ ಬಂಗಾಳ ಅಥವಾ ಒಡಿಶಾವನ್ನು ಭವಿಷ್ಯದ ಸರ್ಕಾರಗಳು ವಿಭಜಿಸಿ ಕೇಂದ್ರಾಡಳಿತ ಪ್ರದೇಶ ನಿರ್ಮಿಸುವುದಿಲ್ಲ ಎಂದು ಹೇಗೆ ನಂಬುವುದು? ಈ ಸರ್ಕಾರ ಬೆಂಬಲಿಸುವ ಮೊದಲು ನೀವು ಯೋಚಿಸಬೇಕಿತ್ತು’ ಎಂದು ಚಿದಂಬರಂ ಹೇಳಿದರು.

ಭಾರತ ಎನ್ನುವುದು ಹಲವು ರಾಜ್ಯಗಳ ಒಕ್ಕೂಟ. ನಿಮಗೆ ಏನು ಮಾಡುತ್ತಿದ್ದೀರಿ ಎನ್ನುವ ಅರಿವಿದೆಯೇ? ಇದರ ಪರಿಣಾಮಗಳಿಗೆ ನೀವು ಹೊಣೆಯಾಗುತ್ತೀರಿ. ಕಾಶ್ಮೀರ ವಿಭಜಿಸುವ ಈ ಪ್ರಸ್ತಾವವನ್ನು ನಾವು ವಿರೋಧಿಸುತ್ತೇವೆ ಎಂದು ಚಿದಂಬರಂ ಖಾರವಾಗಿ ಹೇಳಿದರು.

3.55–ಕೇಂದ್ರದ ನಿರ್ಧಾರಕ್ಕೆ ಬೆಂಬಲಿಸಿದ ಟಿಡಿಪಿ

ಆರ್ಟಿಕಲ್‌ 370 ರದ್ದುಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮವನ್ನು ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸ್ವಾಗತಿಸುತ್ತದೆ ಎಂದು ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಶಾಂತಿ ನೆಲೆಸುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

 

 

3.45– ಕಣಿವೆ ನಾಡಿನ ಭದ್ರತೆ ಪರಿಶೀಲನೆಗೆ ಅಜಿತ್‌ ಡೊಭಾಲ್‌ ಭೇಟಿ ಸಾಧ್ಯತೆ

ಆರ್ಟಿಕಲ್ 370 ರದ್ದುಗೊಳಿಸುವ ಪ್ರಸ್ತಾಪವನ್ನು ಸಂಸತ್‌ನಲ್ಲಿ ಮಂಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮಿರದಲ್ಲಿನ ಭದ್ರತಾ ವ್ಯವಸ್ಥೆಯ ಪರಿಶೀಲನೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಅಜಿತ್‌ ಡೊಭಾಲ್‌ ಅವರು ಇಂದು ಹಿರಿಯ ಕಾರ್ಯದರ್ಶಿಗಳೊಂದಿಗೆ ಅಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. 

370 ರದ್ದುಗೊಳಿಸುವ ಪ್ರಸ್ತಾಪವನ್ನು ಮಂಡಿಸುವ ಮುನ್ನ ಕಳೆದ ವಾರ(ಜುಲೈನಲ್ಲಿ) ಅಜಿತ್‌ ಡೊಭಾಲ್‌ ಅವರು ಅಲ್ಲಿಗೆ ಭೇಟಿ ನೀಡಿದ್ದರು.

3.20– ಕಾಶ್ಮೀರದ ಅಸ್ತಿತ್ವವೇ ಇಲ್ಲದಂತೆ ಮಾಡಿದ್ದೀರಿ: ಗುಲಾಂ ನಬಿ ಆಜಾದ್‌ ಟೀಕೆ

ಲೆಫ್ಟಿನೆಂಟ್ ಗೌರ್ನರ್‌ ನೇಮಕ ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವವೆ ಇಲ್ಲದಂತೆ ಮಾಡಿದ್ದೀರಿ. ಗೌರ್ನರ್‌ ನೇಮಕದ ಬದಲು ಒಬ್ಬ ಗುಮಾಸ್ತ/ಕ್ಲರ್ಕ್‌ ನೇಮಕ ಮಾಡಬಹುದಿತ್ತು ಎಂದು ಕಾಂಗ್ರೆಸ್‌ನ ಸಂಸದ ಗುಲಾಂ ನಬಿ ಆಜಾದ್‌ ರಾಜ್ಯಸಭೆಯಲ್ಲಿ ಟೀಕಿಸಿದರು.

ಜಮ್ಮು ಮತ್ತು ಕಾಶ್ಮೀರದ ಇತಿಹಾಸಕ್ಕೆ ತಿಲಾಂಜಲಿ ಇಡಲಾಗಿದೆ. ಅಲ್ಲಿನ ಜನರಲ್ಲಿ ಯಾವ ಭಯ ಇತ್ತೋ ಅದನ್ನೇ ಮಾಡಲಾಗಿದೆ ಎಂದು ದೂರಿದರು.

3.05– ರಾಜ್ಯಗಳಲ್ಲಿ ಕಾನೂನು ಸುವ್ಯಸ್ಥೆ, ವಿದ್ಯಾರ್ಥಿಗಳ ಸುರಕ್ಷತೆಗೆ ಕಟ್ಟೆಚ್ಚರಕ್ಕೆ ಆದೇಶ

ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕಾನೂನು ಸುವ್ಯಸ್ಥೆ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಈ ಸಂಬಂಧ ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿ ಮತ್ತು ರಾಜ್ಯ ಪೊಲೀಸ್‌ ಕಮಿಷನರ್‌ಗಳಿಗೆ ಆದೇಶ ರವಾನಿಸಿದ್ದು, ತಕ್ಷಣ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಅದರಲ್ಲೂ ಜಮ್ಮು ಮತ್ತು ಕಾಶ್ಮಿರದ ಜನರ ಸುರಕ್ಷತೆಗಾಗಿ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ, ಶಾಲಾ ಮಕ್ಕಳ ಸುರಕ್ಷತೆಗಾಗಿ ಕಟ್ಟೆಚ್ಚರ ವಹಿಸಬೇಕು ಎಂದು ಗೃಹ ಸಚಿವಾಲಯ ಆದೇಶಿಸಿದೆ.

ಆರ್ಟಿಕಲ್‌ 370 ರದ್ದುಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿರುವ ಶಿವ ಸೇನೆ ಮುಂಬೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದೆ.

2.40– ಸರ್ಕಾರದ ಧೈರ್ಯಶಾಲಿ ಹೆಜ್ಜೆ ಸ್ವಾಗತಾರ್ಹ: ಆರ್‌ಎಸ್‌ಎಸ್‌

ಜಮ್ಮು ಕಾಶ್ಮೀರ ವಿಷಯಕ್ಕೆ ಸಂಬಧಿಸಿದಂತೆ ಸಂಸತ್‌ನಲ್ಲಿ ನಿರ್ಧಾರ ತೆಗೆದುಕೊಂಡ ಸರ್ಕಾರದ ಧೈರ್ಯಶಾಲಿ ಹೆಜ್ಜೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಆರ್‌ಎಸ್‌ಎಸ್‌ ಹೇಳಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಇಡೀ ದೇಶದ ಹಿತಾಸಕ್ತಿಗೆ ಇದು ಅತ್ಯಂತ ಪ್ರಮುಖವಾಗಿತ್ತು ಎಂದಿರುವ ಸಂಘ, ದೇಶದ ಜನ ವೈಯಕ್ತಿಕ ಹಿತಾಸಕ್ತಿ ಹಾಗೂ ಪಕ್ಷಪಾತ ಮಾಡದೆ ಪಕ್ಷಾತೀತವಾಗಿ ಸ್ವಾಗತಿಸಬೇಕು ಹಾಗೂ ಬೆಂಬಲಿಸಬೇಕು ಎಂದು ಮನವಿ ಮಾಡಿದೆ.

2.29– ಮತ್ತೊಂದು ಪ್ಯಾಲಸ್ಟೀನ್ ಹುಟ್ಟುಹಾಕುತ್ತಿದ್ದೀರಿ: ಸಿಪಿಎಂ ಎಚ್ಚರಿಕೆ

ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸಿಪಿಎಐ ನಾಯಕ ಟಿ.ಕೆ.ರಂಗರಾಜನ್, ‘ಇದು ನಮ್ಮ ದೇಶದ ಕರಾಳ ದಿನ. ದೇಶದ ಸಂವಿಧಾನಕ್ಕೆ ಬಿಜೆಪಿ ಅಗೌರವ ತೋರಿದೆ. ನೀವು ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಜನರ ಅಭಿಪ್ರಾಯ ಕೇಳಲಿಲ್ಲ. ಅಲ್ಲಿನ ವಿಧಾನಸಭೆ ವಿಸರ್ಜಿಸಿದಿರಿ. ಚುನಾವಣೆ ನಡೆಸಲು ಸಿದ್ಧರಿಲ್ಲ. ಹೆಚ್ಚುವರಿಯಾಗಿ 35 ಸಾವಿರ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದ್ದೀರಿ. ಮತ್ತೊಂದು ಪ್ಯಾಲಸ್ಟೀನ್ ಹುಟ್ಟುಹಾಕುತ್ತಿದ್ದೀರಿ’ ಎಂದು ಆಕ್ಷೇಪಿಸಿದರು.

02:24– ನಾಳೆ ಲೋಕಸಭೆಯಲ್ಲಿ ಕಾಶ್ಮೀರ ಮರುವಿಂಗಡನೆ ಮಸೂದೆ ಮಂಡನೆ?

ಜಮ್ಮು ಮತ್ತು ಕಾಶ್ಮೀರ ಮರುವಿಂಗಡನೆ ಮಸೂದೆಯು ಲೋಕಸಭೆಯಲ್ಲಿ ನಾಳೆ ಮುಂಜಾನೆ ಮಂಡನೆಯಾಗುವ ನಿರೀಕ್ಷೆ ಇದೆ. ಇಂದು ರಾಜ್ಯಸಭೆಯಲ್ಲಿ ಮಸೂದೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

02.16– ಅಧಿಕಾರದ ಅಮಲಿನಲ್ಲಿ ದೇಶದ ತಲೆ ತೆಗೆದಿರಿ: ಗುಲಾಂ ನಬಿ ಆಜಾದ್ ಟೀಕೆ

ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕವಾಗಿರುವ ಗಡಿ ರಾಜ್ಯವನ್ನು ಸಂವಿಧಾನದ 370ನೇ ಪರಿಚ್ಛೇದವು ಒಂದಾಗಿ ಬೆಸೆದಿತ್ತು. ಅಧಿಕಾರದ ಅಮಲೇರಿಸಿಕೊಂಡಿರುವ ಬಿಜೆಪಿ ಇದನ್ನು ತುಂಡರಿಸಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಟೀಕಿಸಿದ್ದಾರೆ.

 

02.13– ಕಾಶ್ಮೀರದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು: ಶರದ್‌ ಪವಾರ್

ಕಾಶ್ಮೀರಕ್ಕೆ ಸಂವಿಧಾನವು ಖಾತ್ರಿಪಡಿಸಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೊದಲು ಭಾರತ ಸರ್ಕಾರವು ಅಲ್ಲಿನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.

02.07– ಭಾರತದ ನಿಜಬಣ್ಣ ಈಗ ಗೊತ್ತಾಗಿದೆ: ಪಾಕ್ ಪ್ರತಿಕ್ರಿಯೆ

ಭಾರತದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ಬಣ್ಣ ಇದೀಗ ಜಗತ್ತಿಗೆ ಗೊತ್ತಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶಾ ಮೆಹ್‌ಮೂದ್‌ ಖುರೇಷಿ ಟ್ವೀಟ್ ಮಾಡಿದ್ದಾರೆ. ಭಾರತ ಸರ್ಕಾರದ ನಿರ್ಧಾರಕ್ಕೆ ಕಾಶ್ಮೀರ ಕಣಿವೆಯ ನಾಯಕತ್ವ ಸಮ್ಮತಿ ಸೂಚಿಸಿಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವ ಮೂಲಕ ಕಾಶ್ಮೀರ ಸಮಸ್ಯೆಗೆ ಭಾರತ ಮರುಜೀವ ನೀಡಿದೆ ಎಂದು ಅವರು ಹೇಳಿದ್ದಾರೆ.

 

01.34– ಕೇವಲ ರಾಜಕೀಯ ನಿರ್ಧಾರ: ಸಂವಿಧಾನ ತಜ್ಞ ಸೋಲಿ ಸೊರಾಬ್ಜಿ

ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನಮಾನ ರದ್ದುಪಡಿಸುವ ಕುರಿತು ರಾಜ್ಯಸಭೆಯಲ್ಲಿ ಮಂಡಿಸಲಾದ ಮಸೂದೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಅಟಾರ್ನಿ ಜನರಲ್, ಸಂವಿಧಾನ ತಜ್ಞ ಸೋಲಿ ಸೊರಾಬ್ಜಿ ‘ಇದು ಕೇವಲ ರಾಜಕೀಯ ನಿರ್ಧಾರ. ಬುದ್ಧಿವಂತಿಕೆಯ ನಿರ್ಧಾರ ಎಂದೂ ನನಗೆ ಅನ್ನಿಸುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

 

01.30– ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆ ನಡೆದ ದಿನ: ವೈಕೊ

ಕಾಶ್ಮೀರದ ಅನನ್ಯತೆ ಕಾಪಾಡಿಕೊಳ್ಳಲು ಅವಕಾಶ ಕೊಡುತ್ತೇವೆ ಎಂದು ಹೇಳಿ ಭಾರತ ಕಾಶ್ಮೀರವನ್ನು ತನ್ನೊಂದಿಗೆ ಸೇರಿಸಿಕೊಂಡಿತ್ತು. ಆದರೆ ಇಂದು ಆ ಮಾತಿನಿಂದ ದೂರ ಸರಿಯಿತು. ಇಂದು ಈ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆ ನಡೆದ ದಿನ. ಈ ಪ್ರಸ್ತಾವವನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದು ಎಂಡಿಎಂಕೆ ನಾಯಕ ವೈಕೊ ರಾಜ್ಯಸಭೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಡಪಡಿಸಿದರು.

 

01.04– ಸರ್ದಾರ್ ವಲ್ಲಭಬಾಯ್ ಪಟೇಲ್‌ ಬಾಕಿ ಉಳಿಸಿದ್ದ ಕೆಲಸವನ್ನು ಅಮಿತ್ ಶಾ ಪೂರ್ಣಗೊಳಿಸಿದ್ದಾರೆ: ವೈಎಸ್‌ಆರ್‌ಪಿ

ಭಾರತದೊಳಗೆ ಎರಡು ಸಂವಿಧಾನಗಳು ಹೇಗೆ ಇರಲು ಸಾಧ್ಯ? ಒಂದು ದೇಶದಲ್ಲಿ ಎರಡು ಪ್ರತ್ಯೇಕ ಬಾವುಟಗಳು ಇರಲು ಸಾಧ್ಯ? ರಾಷ್ಟ್ರಧ್ವಜ ಹರಿದು ಹಾಕುವುದು ಅಪರಾಧ ಅಲ್ಲ ಅಂದರೆ ಹೇಗೆ? ದೇಶವು ಎರಡು ಪ್ರಧಾನಿಗಳನ್ನು ಹೇಗೆ ಹೊಂದಿರಲು ಸಾಧ್ಯ? ಕಾಶ್ಮೀರಿ ಮಹಿಳೆ ಬೇರೆ ರಾಜ್ಯದ ಹುಡುಗನನ್ನು ಮದುವೆಯಾದರೆ ಏಕೆ ಆಸ್ತಿ ಹಕ್ಕು ಕಳೆದುಕೊಳ್ಳಬೇಕು? ಇದು ನಮ್ಮ ಪ್ರಶ್ನೆಗಳು. ದೇಶ ಇಂದು ನಿಜವಾದ ಅರ್ಥದಲ್ಲಿ ಏಕೀಕರಣಗೊಂಡಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್‌ ಬಾಕಿ ಉಳಿಸಿದ್ದ ಕೆಲಸವನ್ನು ಅಮಿತ್‌ ಶಾ ಪೂರ್ಣಗೊಳಿಸಿದ್ದಾರೆ. ಇದು ಐತಿಹಾಸಿಕ ನಿರ್ಧಾರ ಎಂದು ಆಂಧ್ರಪ್ರದೇಶದ ವೈಎಸ್‌ಆರ್‌ಪಿ ಪಕ್ಷದ ರಾಜ್ಯಸಭೆ ಸದಸ್ಯ ವಿ.ವಿಜಯ್‌ಸಾಯಿ ರೆಡ್ಡಿ ಹೇಳಿದರು.

01.02– ದೇಶದ ಇತರೆ ರಾಜ್ಯಗಳ ಮುಸ್ಲಿಮರಿಗೂ ಕಾಶ್ಮೀರದಲ್ಲಿ ಆಸ್ತಿ ಖರೀದಿಗೆ ಅವಕಾಶ

ಕಾಶ್ಮೀರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ದೇಶದ ಇತರ ರಾಜ್ಯಗಳಲ್ಲಿ ಮುಸ್ಲಿಮರು ಇದ್ದಾರೆ. ಅವರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಇನ್ನು ಮುಂದೆ ಆಸ್ತಿ ಖರೀದಿ ಸಾಧ್ಯವಾಗಲಿದೆ ಎಂದು ಬಿಎಸ್‌ಪಿ ನಾಯಕ ಸತೀಶ್‌ಚಂದ್ರ ಮಿಶ್ರಾ ಹೇಳಿದರು.

12.58– ಕಾಶ್ಮೀರಕ್ಕೆ ಇಂದು ನಿಜವಾದ ಸ್ವಾತಂತ್ರ್ಯ ಬಂದಿದೆ

ಕಾಶ್ಮೀರಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಗಲಿಲ್ಲ. ಇಂದು ಕಾಶ್ಮೀರ ಕಣಿವೆಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಬಂತು. ಸಂವಿಧಾನ ತಿದ್ದುಪಡಿ ವಿರೋಧಿಸುವವರು ಕಾಶ್ಮೀರದ ಲೂಟಿಕೋರರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದು ಈ ದೇಶದ ಬಹುದೊಡ್ಡ ಕನಸು ನನಸಾಗಿದೆ. ಅಖಂಡ ಹಿಂದೂಸ್ತಾನದ ಕನಸನ್ನು ಪ್ರಧಾನಿ ಮತ್ತು ಗೃಹ ಸಚಿವರು ಶೀಘ್ರ ಈಡೇರಿಸುತ್ತಾರೆ ಎಂದು ಶಿವಸೇನೆಯ ನಾಯಕ ಸಂಜಯ್ ರೌತ್ ಹೇಳಿದರು.

12.55– ನಿಜವಾದ ಸಮಾನತೆ

ಇಂದು ದೇಶದಲ್ಲಿ ನಿಜವಾದ ಅರ್ಥದ ಸಮಾನತೆ ಜಾರಿಗೆ ಬಂತು. ಇಲ್ಲಿಂದಾಚೆಗೆ ಯಾವುದೇ ಕಾಯ್ದೆ ನಿರ್ದಿಷ್ಟ ರಾಜ್ಯದಲ್ಲಿ ಜಾರಿಯಾಗುವುದಿಲ್ಲ ಎನ್ನುವ ಒಕ್ಕಣೆ ಇರುವುದಿಲ್ಲ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕನಸು ಇಂದು ನನಸಾಯಿತು ಎಂದು ಸದಸ್ಯ ಸ್ವಪನ್ ದಾಸ್ ಗುಪ್ತ ಹೇಳಿದರು.

12.53– ಗೃಹ ಸಚಿವರ ಪ್ರಸ್ತಾವಕ್ಕೆ ಎಐಎಡಿಎಂಕೆ ಮತ್ತು ಬಿಜೆಡಿ ಬೆಂಬಲ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ಪ್ರಸ್ತಾವಕ್ಕೆ ಪ್ರಾದೇಶಿಕ ಪಕ್ಷಗಳಾದ ತಮಿಳುನಾಡಿನ ಎಐಎಡಿಎಂಕೆ ಮತ್ತು ಒಡಿಶಾದ ಬಿಜೆಡಿ ಬೆಂಬಲ ಸೂಚಿಸಿದೆ.

12.43– ಕಾಶ್ಮೀರಕ್ಕೆ ಇನ್ನಷ್ಟು ಭದ್ರತಾ ಸಿಬ್ಬಂದಿ ರವಾನೆ

ಉತ್ತರ ಪ್ರದೇಶ, ಒಡಿಶಾ, ಅಸ್ಸಾಂ ಸೇರಿದಂತೆ ದೇಶದ ವಿವಿಧೆ ಭಾಗಗಳಿಂದ 8000ಕ್ಕೂ ಹೆಚ್ಚು ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ಕಾಶ್ಮೀರ ಕಣಿವೆಗೆ ಕೇಂದ್ರ ಸರ್ಕಾರ ರವಾನಿಸಿದೆ. ಇನ್ನಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಎಎನ್‌ಐ ಸುದ್ದಿಸಂಸ್ಥೆ ಹೇಳಿದೆ.

12.32– ನಿಮ್ಮೆಲ್ಲ ಪ್ರಶ್ನೆಗೆ ಉತ್ತರಿಸಲು ಸಿದ್ಧ: ಅಮಿತ್‌ ಶಾ

ಕಾಂಗ್ರೆಸ್ ಪಕ್ಷವು 1952 ಮತ್ತು 1962ರಲ್ಲಿ ಇಂಥದ್ದೇ ಪ್ರಕ್ರಿಯೆಗಳ ಮೂಲಕ ಸಂವಿಧಾನದ 370ನೇ ವಿಧಿಗೆ ತಿದ್ದುಪಡಿ ತಂದಿತ್ತು. ಪ್ರತಿಭಟಿಸುವ ಬದಲು ಚರ್ಚೆಗೆ ಬನ್ನಿ. ನನಗೆ ಮಾತನಾಡಲು ಬಿಡಿ. ನಿಮ್ಮೆಲ್ಲ ಗೊಂದಲ ಮತ್ತು ಸಂಶಯಗಳನ್ನು ಪರಿಹರಿಸುತ್ತೇನೆ ಎಂದು ಗೃಹಸಚಿವ ಅಮಿತ್‌ ಶಾ ಹೇಳಿದರು.

12.20– ಸಂವಿಧಾನದ ಪ್ರತಿ ಹರಿದ ಕಾಶ್ಮೀರದ ಸದಸ್ಯನನ್ನು ಸಭಾಧ್ಯಕ್ಷ ವೆಂಕಯ್ಯನಾಯ್ಡು ಸದನದಿಂದ ಹೊರಗೆ ಕಳಿಸಿದರು. ಪಿಡಿಪಿ ಸದಸ್ಯರಾದ ಮೀರ್ ಮೊಹಮದ್ ಫಯಾಜ್ ಸಂವಿಧಾನದ ಪ್ರತಿಯನ್ನು ರಾಜ್ಯಸಭೆಯಲ್ಲಿ ಹರಿದು ಹಾಕಿದರು. ‘ನೀವು ಸದನದಿಂದ ಹೊರಗೆ ಹೋಗಿ’ ಎಂದು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಆದೇಶಿಸಿದರು.

 

 

12.20– ಕಾಶ್ಮೀರ ಪ್ರಸ್ತಾವಕ್ಕೆ ಬಿಎಸ್‌ಪಿ ಬೆಂಬಲ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಪಡಿಸುವ ಪ್ರಸ್ತಾವಕ್ಕೆ ನಮ್ಮ ಬೆಂಬಲವಿದೆ. ಈ ಮಸೂದೆಗೆ ಸದನದ ಅಂಗೀಕಾರ ಸಿಗಬೇಕು ಎಂದು ರಾಜ್ಯಸಭೆಯಲ್ಲಿ ಬಿಎಸ್‌ಪಿ ನಾಯಕ ಸತೀಶ್‌ ಚಂದ್ರ ಮಿಶ್ರಾ ಹೇಳಿದರು.

12.08– ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯೆ

ಸಂವಿಧಾನದ 370ನೇ ವಿಧಿಯ ರಕ್ಷಣೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಹಲವು ವರ್ಷಗಳಿಂದ ಮೂರು ಕುಟುಂಬಗಳು ಲೂಟಿ ಮಾಡಿವೆ. ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು 370ನೇ ವಿಧಿಯು ಕಾಶ್ಮೀರವನ್ನು ಭಾರತದೊಡನೆ ಬೆಸೆದಿದೆ ಎಂದು ಹೇಳಿದ್ದಾರೆ. ಇದು ಸುಳ್ಳು. ಮಹಾರಾಜ ಹರಿಸಿಂಗ್ 27ನೇ ಅಕ್ಟೋಬರ್ 1947ರಲ್ಲಿ ಜಮ್ಮು ಕಾಶ್ಮೀರ ಒಪ್ಪಂದಕ್ಕೆ ಸಹಿ ಹಾಕಿದ್ದರು. 370ನೇ ವಿಧಿಯು 1954ರಲ್ಲಿ ಜಾರಿಯಾಯಿತು ಎಂದು ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯಿಸಿದರು.

 

12.08– ಬಿಜೆಪಿ ಸದಸ್ಯ ಭೂಪೇಂದ್ರ ಯಾದವ್ ಹೇಳಿಕೆ

ಪ್ರತಿಪಕ್ಷಗಳಿಗೆ ಕಾಶ್ಮೀರದ ಬಗ್ಗೆ ಚರ್ಚಿಸುವುದು ಇಷ್ಟವಿಲ್ಲ. ಕೇವಲ ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿವೆ. ಕಾಶ್ಮೀರಕ್ಕಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲ.

 

12.05– ಸದನದಲ್ಲಿ ಗುಲಾಂ ನಬಿ ಆಜಾದ್ ಹೇಳಿಕೆ

ಸಂವಿಧಾನಕ್ಕೆ ಬಿಜೆಪಿ ಇಂದು ಅಗೌರವ ತೋರಿದೆ. ನಮ್ಮ ದೇಶದ ಸಂವಿಧಾನದ ಪರವಾಗಿ ನಾವು ನಿಂತುಕೊಳ್ಳುತ್ತೇವೆ. ಸಂವಿಧಾನದ ಪ್ರತಿಯನ್ನು ಹರಿದುಹಾಕಲು ಯತ್ನಿಸಿದ ಪಿಡಿಪಿ ಸದಸ್ಯರ ಕ್ರಮವನ್ನು ಖಂಡಿಸುತ್ತೇವೆ. ಬಿಜೆಪಿ ಸಂವಿಧಾನದ ಕೊಲೆ ಮಾಡಿದೆ.

 

12.00– ಸದಾನಂದಗೌಡ ಟ್ವೀಟ್

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕು ಎನ್ನುವುದು ನನ್ನ ಜೀವಮಾನದ ಕನಸು. ಈ ಕ್ಷಣಕ್ಕಾಗಿ ನಾನು ಇಷ್ಟುದಿನ ಬದುಕಿದ್ದೆ ಎಂದು ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

 

11.57– ಮೆಹಬೂಬಾ ಮುಫ್ತಿ ಟ್ವೀಟ್

ಇದು ಸಂವಿಧಾನದ ಕತ್ತಲ ದಿನ. ಕಾಶ್ಮೀರದ ಜನರಿಗೆ ಭಾರತೀಯರು ಕೊಟ್ಟಿದ್ದ ಮಾತನ್ನು ಹಿಂಪಡೆದ ದಿನ. ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವು ಅನೈತಿಕ ಮತ್ತು ಸಂವಿಧಾನಬಾಹಿರ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತವು ಒಂದು ಆಕ್ರಮಣಕಾರಿ ಬಲವಾಗಿ ಉಳಿದುಕೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದ ಜನರಲ್ಲಿ ಭೀತಿ ಹುಟ್ಟಿಸುವ ಮೂಲಕ ಅಲ್ಲಿನ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ.

 

11.56– ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳು

11.48– ತುರ್ತುಸ್ಥಿತಿ ಹೇರುತ್ತಿದ್ದೀರಿ ಪ್ರತಿಪಕ್ಷಗಳ ಆಕ್ಷೇಪ. ‘ನೀವು ಸ್ವತಃ ತುರ್ತುಸ್ಥಿತಿಯ ಪರಿಣಾಮ ಅನುಭವಿಸಿದ್ದೀರಿ. ಆದರೂ ನಿಮ್ಮ ವರ್ತನೆ ತುರ್ತುಸ್ಥಿತಿಯ ದಿನಗಳಿಗಿಂತ ಭಿನ್ನವಾಗಿಲ್ಲ’ ಎಂದು ಎಂಡಿಎಂಕೆ ನಾಯಕ ವೈಕೊ ಆಕ್ಷೇಪ.

11.46– ಕೇಂದ್ರಾಡಳಿತ ಪ್ರದೇಶ. ಜಮ್ಮು ಮತ್ತು ಕಾಶ್ಮೀರ ಇನ್ನು ಮುಂದೆ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಡಾಕ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದು ಅಮಿತ್‌ ಶಾ ಪ್ರಸ್ತಾವ.

11.44– ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್. ಜಮ್ಮು ಮತ್ತು ಕಾಶ್ಮೀರಕ್ಕೂ ಸಾಮಾಜಿಕ ಮೀಸಲಾತಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ವಿಸ್ತರಿಸುವುದು ನಮ್ಮ ಉದ್ದೇಶ. ಹೀಗಾಗಿ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಬೇಕು. ಇದು ನನ್ನ ಜೀವನದ ಧನ್ಯಕ್ಷಣ. ನಾನೂ ಸೇರಿದಂತೆ ಹಲವರ ಕಣ್ಣುಗಳು ಮಂಜಾಗಿವೆ.

11.42– ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ. ಕಲಾಪಕ್ಕೆ ಅಡ್ಡಿ. ಯಾರ ಮಾತೂ ಸ್ಪಷ್ಟವಾಗಿ ಕೇಳದ ಸ್ಥಿತಿ.

11.40– ಸಂವಿಧಾನ ತಿದ್ದುಪಡಿ (ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ) ಅಧಿಸೂಚನೆ.

11.32– ‘ಸಂವಿಧಾನದ ಹತ್ಯೆ ಮಾಡಬೇಡಿ’ ಘೋಷಣೆ ಮೊಳಗಿಸಿದ ಪ್ರತಿಪಕ್ಷಗಳು. ಸಚಿವ ರವಿಶಂಕರ್ ಪ್ರಸಾದ್ ಅವರಿಂದ ಮಸೂದೆ ಪರ ಮಾತು.

11.26– ಸಂವಿಧಾನದ 370ನೇ ವಿಧಿ ರದ್ದು ಪಡಿಸಲು ಗೃಹ ಸಚಿವ ಅಮಿತ್ ಶಾ ಪ್ರಸ್ತಾವ. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ. ಕಲಾಪ ಮುಂದೂಡಿದ ಸಭಾಧ್ಯಕ್ಷ ವೆಂಕಯ್ಯನಾಯ್ಡು.

11.24– ಘೋಷಣೆ ಕೂಗುತ್ತಿರುವ ಪ್ರತಿಪಕ್ಷಗಳ ಸದಸ್ಯರು. ರಾಜ್ಯಸಭೆ ಕಲಾಪ ಮುಂದೂಡಿಸಿದ ಸಭಾಧ್ಯಕ್ಷ ವೆಂಕಯ್ಯನಾಯ್ಡು.

11.20– ಕಾಶ್ಮೀರದ ವಿಶೇಷಾಧಿಕಾರ ರದ್ದು ಪ್ರಸ್ತಾವ ಮಂಡನೆ. ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ.

11.20– ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಂದ ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ ಮಂಡನೆ.

11.16– ‘ಕಾಶ್ಮೀರದ ಬಗ್ಗೆ ಸರ್ಕಾರದ ಮೌನ ಜನರಲ್ಲಿ ಭೀತಿ ಬಿತ್ತುತ್ತಿದೆ’ ಪಿಡಿಪಿ ಸದಸ್ಯ ನಾಜಿರ್ ಅಹಮದ್ ಮತ್ತು ಮಿರ್‌ ಮೊಹಮದ್‌ ಆಕ್ಷೇಪ.

11.15– ಗೃಹ ಸಚಿವ ಅಮಿತ್‌ ಶಾ ಮಾತು ಹೊರತುಪಡಿಸಿ, ಉಳಿದ ಯಾರ ಮಾತನ್ನೂ ದಾಖಲಿಸದಂತೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಸೂಚನೆ.

11.13– ಅಮಿತ್‌ ಶಾಗೆ ಮಾತನಾಡಲು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಸೂಚನೆ. ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌ರಿಂದ ಆಕ್ಷೇಪ.

11.10– ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ವಿಧಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಎಕ್ಸ್‌ಪ್ಲೇನರ್ ಇಲ್ಲಿದೆ.

11.00– ರಾಜ್ಯಸಭೆಯಲ್ಲಿ ಕಲಾಪ ಆರಂಭ. ಸಂಸತ್ ಭವನಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ.

10.50– ಇದು ಎಂದಿನ ಸೋಮವಾರವಲ್ಲ. ಕಾಶ್ಮೀರದ ಬಗ್ಗೆ ಹೊರಬೀಳಲಿರುವ ಸರ್ಕಾಋದ ಘೋಷಣೆ ಬಗ್ಗೆ ಕಾತರದಿಂದ ಕಾಯುತ್ತಿದ್ದೇವೆ ಎಂದು ಆನಂದ್‌ ಮಹೀಂದ್ರ ಟ್ವೀಟ್.

10.47– ಚರ್ಚೆಯ ವೇಳೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಎಲ್ಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ವಿಪ್‌ ಜಾರಿ ಮಾಡಿದ ಬಿಜೆಪಿ.

10.47– ಕೇಂದ್ರ ಸಚಿವ ಸಂಪುಟ ಸಭೆ ಅಂತ್ಯ. 

10.40– ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಬೆಳಿಗ್ಗೆ 11ಕ್ಕೆ ಮತ್ತು ಲೋಕಸಭೆಯಲ್ಲಿ ಮಧ್ಯಾಹ್ನ 12ಕ್ಕೆ ಮಾತನಾಡಲಿದ್ದಾರೆ. ಈ ವೇಳೆ ಕಾಶ್ಮೀರ ವಿಷಯ ಪ್ರಸ್ತಾಪಿಸಬಹುದು ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ.

10.30– ದೇಶದ ಎಲ್ಲ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಟಿಪ್ಪಣಿ ಕಳಿಸಿದೆ.

 

 

 

 

ಇನ್ನಷ್ಟು... 

ಕಾಶ್ಮೀರ ಕಣಿವೆ; ಚೆಲ್ಲು ಚೆದುರಾದ ಚಿತ್ತಾರ 

ಹಾವನ್ನು ಬಿಟ್ಟು ಹುತ್ತವ ಬಡಿದಂತೆ... 

ಕಾಶ್ಮೀರ: ಉಗ್ರರ ಕುಲುಮೆ

ಸೇನಾ ಕೋಟೆಯಾದ ಶ್ರೀನಗರ: ಆತಂಕ ತೀವ್ರ​​

ಜಮ್ಮು–ಕಾಶ್ಮೀರದಲ್ಲಿ ಕಟ್ಟೆಚ್ಚರ| ಕಣಿವೆ ತೊರೆಯಲು ಪ್ರವಾಸಿ, ಯಾತ್ರಿಕರಿಗೆ ಸೂಚನೆ​

ಬಿಳಿ ಬಾವುಟ ತೋರಿಸಿ, ಶವ ತಗೊಂಡು ಹೋಗಿ: ಪಾಕಿಸ್ತಾನಕ್ಕೆ ಸೇನೆಯ ಸೂಚನೆ​ 

ಯೋಧರು, ಉಗ್ರರ ಮೃತದೇಹ ಕೊಂಡೊಯ್ಯಲು ನಿರಾಕರಿಸಿದ ಪಾಕಿಸ್ತಾನ?

ಸಂವಿಧಾನದ 370ನೇ ಕಲಂ ಪ್ರಸ್ತುತತೆ

35 ಎ ಕಲಂ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಬೇಕು

‘35-ಎ’ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಸಂವಿಧಾನದ 370ನೇ ವಿಧಿ ತಾತ್ಕಾಲಿಕವಲ್ಲ: ಸುಪ್ರೀಂ ಕೋರ್ಟ್

ಶ್ರೀನಗರದಲ್ಲಿ ನಿಷೇಧಾಜ್ಞೆ: ಮೆಹಬೂಬಾ ಮುಫ್ತಿಗೆ ಗೃಹ ಬಂಧನ​

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು