ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: 70 ದಿನದ ಬಳಿಕ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸೇವೆ ಶುರು

ಇಂಟರ್ನೆಟ್‌ ಇಲ್ಲ
Last Updated 14 ಅಕ್ಟೋಬರ್ 2019, 9:55 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸುವ ಜತೆಗೆ ಮೊಬೈಲ್‌ ಮತ್ತು ಇಂಟರ್ನೆಟ್‌ ಸಂಪರ್ಕ ಸೇವೆಯನ್ನೂ ಸರ್ಕಾರ ಸ್ಥಗಿತಗೊಳಿಸಿತ್ತು. 70 ದಿನಗಳ ನಂತರ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸೇವೆಗಳು ಆರಂಭಗೊಂಡಿವೆ.

ಬಿಎಸ್ಎನ್‌ಎಲ್‌ ಸೇರಿದಂತೆ ಎಲ್ಲ ನೆಟ್‌ವರ್ಕ್‌ಗಳ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸೇವೆಗಳು ಮಧ್ಯಾಹ್ನದಿಂದ ಕಾರ್ಯಾರಂಭಿಸಿವೆ. ಸುಮಾರು 40 ಲಕ್ಷ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಫೋನ್‌ಗಳು ಮರುಸಂಪರ್ಕ ಸಾಧಿಸಿದ್ದು, ಸುಮಾರು 30 ಲಕ್ಷ ಪ್ರೀ–ಪೇಯ್ಡ್‌ ಮೊಬೈಲ್‌ ಫೋನ್‌ಗಳ ಸಂಪರ್ಕ ಇನ್ನಷ್ಟೇ ಸಾಧ್ಯವಾಗಬೇಕಿದೆ. ಪ್ರಸ್ತತ ಯಾವುದೇ ನೆಟ್‌ವರ್ಕ್ ಮೂಲಕವೂ ಇಂಟರ್ನೆಟ್‌ ಸೇವೆ ಪೂರೈಕೆಯಾಗುತ್ತಿಲ್ಲ.

ಜಮ್ಮು ಮತ್ತು ಕಾಶ್ಮೀರದ ಎಲ್ಲ ಪ್ರದೇಶಗಳಲ್ಲೂ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸೇವೆ ಸೋಮವಾರದಿಂದ ಆರಂಭವಾಗಿದ್ದರೂ ಬಹಳಷ್ಟು ಜನ ಮೊಬೈಲ್‌ ಬಳಕೆಯಿಂದಲೇ ದೂರ ಉಳಿದಿದ್ದಾರೆ. ಅನೇಕರಿಗೆ ಸರ್ಕಾರ ಮೊಬೈಲ್‌ ಸಂಪರ್ಕ ಸೇವೆಗೆ ನಿರ್ಬಂಧ ಸಡಿಸಿಲಿರುವ ಕುರಿತು ಮಾಹಿತಿಯೇ ಇಲ್ಲ.

ಕೇಂದ್ರ ಸರ್ಕಾರ ಆಗಸ್ಟ್‌ 5ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು. ಭದ್ರತಾ ಕಾರಣಗಳನ್ನು ನೀಡಿ ಹಲವು ನಿರ್ಬಂಧಗಳನ್ನು ವಿಧಿಸುವ ಜತೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ಥಳೀಯ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇರಿಸುವ ಜತೆಗೆ ಜಮ್ಮು–ಕಾಶ್ಮೀರದ ಹೊರಗಿನ ಯಾವುದೇ ಮುಖಂಡರಿಗೂ ಪ್ರವೇಶ ನಿರಾಕರಿಸಲಾಯಿತು. ಸರ್ಕಾರ 370ನೇ ವಿಧಿ ರದ್ದತಿ ನಿರ್ಧಾರ ಪ್ರಕಟಿಸುವ ಮುನ್ನವೇ ಪ್ರವಾಸಿಗರನ್ನು ಕಣಿವೆ ಪ್ರದೇಶದಿಂದ ಹೊರಡುವಂತೆ ಆದೇಶಿಸಿತ್ತು.

ಕಳೆದ ಗುರುವಾರದಿಂದ ಪ್ರವಾಸಿಗರ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧ ಸಡಿಸಲಾಗಿದೆ. ಕಳೆದ ತಿಂಗಳು ಸರ್ಕಾರ ಲ್ಯಾಂಡ್‌ಲೈನ್‌ ಸಂಪರ್ಕ ಸೇವೆಗಳನ್ನು ಮರುಸ್ಥಾಪಿಸಿತು. ಆಗಸ್ಟ್‌ 18ರಿಂದ ಇಂಟರ್ನೆಟ್‌ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT