ಶನಿವಾರ, ಅಕ್ಟೋಬರ್ 19, 2019
27 °C
ಜಮ್ಮು ಮತ್ತು ಕಾಶ್ಮೀರ: ನಾಯಕರ ಬಿಡುಗಡೆಗೆ ಕ್ರಮ

ಜಮ್ಮು ಕಾಶ್ಮೀರ| ‘ ಜನರ ಚಲನವಲನಗಳ ಮೇಲಿನ ಬಹುಪಾಲು ನಿರ್ಬಂಧ ತೆರವು’

Published:
Updated:
Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಚಲನವಲನದ ಮೇಲೆ ವಿಧಿಸಲಾಗಿದ್ದ ನಿರ್ಬಂಧದಲ್ಲಿ ಶೇ 99 ರಷ್ಟನ್ನು ತೆರವುಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರ ರೋಹಿತ್‌ ಕನ್ಸಾಲ್‌ ಶನಿವಾರ ತಿಳಿಸಿದ್ದಾರೆ.

‘ಬಾಹ್ಯ ನೆರವು ಪಡೆಯುವ ಉಗ್ರರು ಇಲ್ಲಿನ ಶಾಂತಿಗೆ ಭಂಗವುಂಟು ಮಾಡುವುದನ್ನು ತಡೆಯಲು ನಿರ್ಬಂಧ ವಿಧಿಸಲಾಗಿತ್ತು.   ರಾಜಕೀಯ ಮುಖಂಡರು ಸೇರಿದಂತೆ ಯಾರನ್ನೆಲ್ಲ ವಶಕ್ಕೆ ಪಡೆಯಲಾಗಿದೆಯೊ ಅವರ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ’ ಎಂದು ಕನ್ಸಾಲ್‌ ತಿಳಿಸಿದ್ದಾರೆ. 

ಆ.16 ರಿಂದ ಕ್ರಮೇಣ ನಿರ್ಬಂಧ ತೆರವು ಮಾಡಲಾಗುತ್ತಿದೆ. ಹೆಚ್ಚಿನ ಸ್ಥಳಗಳಲ್ಲಿ ಸೆಪ್ಟೆಂಬರ್‌ನಿಂದಲೇ ತೆರವು ಮಾಡಲಾಗಿದೆ ಎಂದು ಹೇಳಿದರು.

ಪ್ರವಾಸಿಗರಿಗೆ ರಾಜ್ಯಕ್ಕೆ ಸ್ವಾಗತ. ಅವರಿಗೆ ಸರ್ಕಾರ ಅಗತ್ಯ ಅನುಕೂಲಗಳನ್ನು ಮಾಡಿಕೊಡಲಿದೆ ಎಂದು ತಿಳಿಸಿದರು.

ಗ್ರೆನೇಡ್‌ ದಾಳಿ: ಐವರಿಗೆ ಗಾಯ

ಶ್ರೀನಗರ (ಪಿಟಿಐ): ಇಲ್ಲಿನ ಮಾರುಕಟ್ಟೆಯಲ್ಲಿ ಶಂಕಿತ ಉಗ್ರರು ಶನಿವಾರ ನಡೆಸಿದ ಗ್ರೆನೇಡ್‌ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. 

ಹರಿಸಿಂಗ್‌ ಹೈ ಸ್ಟ್ರೀಟ್‌ ಮಾರ್ಕೆಟ್‌ನಲ್ಲಿ ಗ್ರೆನೇಡ್‌ ಅನ್ನು ಉಗ್ರರು ಎಸೆದಿದ್ದರು. ಇದು ಲಾಲ್‌ ಚೌಕ್‌ಗೆ ಸಮೀಪದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಗಾಜುಗಳಿಗೂ ಹಾನಿಯಾಗಿದೆ. ಸ್ಫೋಟವಾಗುತ್ತಿದ್ದಂತೆ ಸಮೀಪದ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿದ್ದರು.

ಕಾಶ್ಮೀರ ಭಯೋತ್ಪಾದನೆಯ ನರಕವಾಗಿತ್ತು

ಮುಂಬೈ (ಪಿಟಿಐ): ‘370 ನೇ ವಿಧಿ ಬಳಸಿಕೊಂಡು ಕಾಶ್ಮೀರವನ್ನು ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರು ‘ಭಯೋತ್ಪಾದನೆಯ ನರಕ’ ವಾಗಿ ಮಾಡಿದ್ದರು. ಆದರೆ ವಿಶೇಷಾಧಿಕಾರ ರದ್ದುಪಡಿಸಿದ ನಂತರ ರಾಜ್ಯದಲ್ಲಿ ಅಭಿವೃದ್ಧಿಗೆ ಹೊಸ ದಾರಿ ದೊರೆತಂತಾಗಿದೆ’ ಎಂದು ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್ ನಖ್ವಿ ಶನಿವಾರ ಹೇಳಿದರು.

ಮೋದಿ ಸರ್ಕಾರವನ್ನು ಹೊಗಳಿದ ಸಚಿವರು, ಭಯೋತ್ಪಾದನೆಯ ಬೆನ್ನನ್ನು ಸರ್ಕಾರ ಬಗ್ಗುಬಡಿದಿದೆ ಎಂದು ಹೇಳಿದರು.

ಪೋಸ್ಟ್ ಪೇಯ್ಡ್‌ ಮೊಬೈಲ್‌ ಸೇವೆ ನಾಳೆಯಿಂದ ಆರಂಭ

ಜಮ್ಮು ಮತ್ತು ಕಾಶ್ಮೀರದಲ್ಲಿ ಪೋಸ್ಟ್ ಪೇಯ್ಡ್‌ ಮೊಬೈಲ್‌ ಫೋನ್‌ ಸೇವೆಗಳು ಸೋಮವಾರದಿಂದ ಆರಂಭವಾಗಲಿವೆ. 69 ದಿನಗಳಿಂದ ವಿಧಿಸಲಾಗಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವು ಮಾಡಿದ್ದು, ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. 40 ಲಕ್ಷ ಪೋಸ್ಟ್‌ ಪೇಯ್ಡ್‌ ಮೊಬೈಲ್‌ಗಳು ಸೋಮವಾರ ಮಧ್ಯಾಹ್ನದ ನಂತರ ರಿಂಗಣಿಸಲಿವೆ.

ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ರೋಹಿತ್ ಕನ್ಸಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ಶನಿವಾರ ನೀಡಿದರು.

ಆದರೆ 20 ಲಕ್ಷ ಪ್ರಿ ಪೇಯ್ಡ್‌ ಮೊಬೈಲ್‌ ಫೋನ್‌ ಮತ್ತು ಇಂಟರ್‌ನೆಟ್‌ ಸೇವೆಗಳು ಸದ್ಯಕ್ಕೆ ಲಭ್ಯವಾಗುವುದಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮೊಬೈಲ್‌ ಫೋನ್‌ಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು. 

ರಾಜ್ಯದ 10 ಜಿಲ್ಲೆಗಳ ಗ್ರಾಹಕರಿಗೆ ಸರ್ಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದೆ.

 

Post Comments (+)