ಬುಧವಾರ, ಆಗಸ್ಟ್ 21, 2019
28 °C

ಕಾಶ್ಮೀರ ವಿಮೋಚನೆ ಪರ–ವಿರೋಧ ಜಂಗಿಕುಸ್ತಿ

Published:
Updated:
Prajavani

ಐತಿಹಾಸಿಕ ಪ್ರಮಾದಕ್ಕೆ ಇಂದು ಅಂತ್ಯ ಹಾಡಲಾಗಿದೆ. ಸಂವಿಧಾನದ 368ನೇ ವಿಧಿಯನ್ನು ಪಾಲಿಸದೇ ಹಿಂಬಾಗಿಲ ಮೂಲಕ 35ಎ ವಿಧಿ ಜಾರಿಗೆ ಬಂದಿತ್ತು. ಇದೀಗ ಕೊನೆಯಾಗುತ್ತಿದೆ. ಕೇಂದ್ರದ ಈ ನಡೆಯಿಂದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅನುಕೂಲವಾಗಲಿದೆ. ಬಂಡವಾಳ ಹೂಡಿಕೆ, ಉದ್ದಿಮೆ ಸ್ಥಾಪನೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಉದ್ಯೋಗಾವಕಾಶ ಮತ್ತು ಇನ್ನಷ್ಟು ಪ್ರಯೋಜನಗಳು ಸಿಗಲಿವೆ. ಕಾಶ್ಮೀರದ ಪ್ರಾದೇಶಿಕ ನಾಯಕರು ಇನ್ನು ಮುಂದೆ ನಕಲಿ ವಿಷಯಗಳನ್ನು ಇಟ್ಟುಕೊಂಡು ಪ್ರಚೋದಿಸಲು ಸಾಧ್ಯವಿಲ್ಲ.   -

- ಅರುಣ್ ಜೇಟ್ಲಿ, ಬಿಜೆಪಿ ಮುಖಂಡ

**

ಎಂತಹ ಅದ್ಭುತ ದಿನ! ಭಾರತದ ಜತೆ ಜಮ್ಮು ಕಾಶ್ಮೀರವು ಒಂದಾಗಲು ಡಾ. ಶಾಮ್‌ಪ್ರಸಾದ್ ಮುಖರ್ಜಿ ಅವರ ಜತೆ ಹೋರಾಡಿದ ಸಾವಿರಾರು ಜನರ ಬಲಿದಾನಕ್ಕೆ ಗೌರವ ದೊರೆತ ದಿನ. ಕಣಿವೆ ರಾಜ್ಯವು ದೇಶದಲ್ಲಿ ಸಂಪೂರ್ಣ ವಿಲೀನಗೊಳ್ಳುವ ಏಳು ದಶಕಗಳ ಬೇಡಿಕೆಯು ನಮ್ಮ ಜೀವಮಾನದಲ್ಲಿ ನಮ್ಮ ಕಣ್ಣೆದುರೇ ಘಟಿಸಿದೆ. ನಂಬಲೂ ಆಗುತ್ತಿಲ್ಲ

- ರಾಮ್ ಮಾಧವ್, ಬಿಜೆಪಿ ಮುಖಂಡ

**

ಭಾರತೀಯ ಸಾಂವಿಧಾನಿಕ ಇತಿಹಾಸದಲ್ಲಿ ಇದು ಕಪ್ಪುದಿನ. 370ನೇ ವಿಧಿ ಅಸಿಂಧುಗೊಳಿಸಿದ್ದು ಮಹಾದುರಂತ. ಇಂತಹ ಒಂದು ಅನರ್ಥ ಘಟಿಸುತ್ತದೆ ಎಂದು ನಾವು ನಿರೀಕ್ಷೆ ಮಾಡಿದ್ದೆವು. ಆದರೆ ಇಂತಹ ದುರಂತದ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ

- ಪಿ.ಚಿದಂಬರಂ, ಕಾಂಗ್ರೆಸ್ ಮುಖಂಡ

**

370ನೇ ವಿಧಿ ಅಸಿಂಧುಗೊಳಿಸುವ ಮೂಲಕ ಭಾರತದ ಇತರ ಭಾಗಗಳ ಜೊತೆ ಜಮ್ಮು ಕಾಶ್ಮೀರಕ್ಕೆ ಇದ್ದ ಸಾಂವಿಧಾನಿಕ ಹಾಗೂ ಐತಿಹಾಸಿಕ ಸಂಪರ್ಕ ಕೊನೆಗೊಂಡಿದೆ. ಗಡಿಯಾರವನ್ನು ಹಿಂದಕ್ಕೆ ತಿರುಗಿಸುವ ಸರ್ಕಾರದ ಗೀಳು 1940ರ ದಶಕದಲ್ಲಿ ದೇಶದಲ್ಲಿದ್ದ ಪ್ರಕ್ಷುಬ್ಧತೆಯತ್ತ ಮತ್ತೆ ದೂಡಿದೆ. 

- ಸಿಪಿಐ (ಎಂಎಲ್) ಲಿಬರೇಷನ್ ಪಾರ್ಟಿ

**

ಇದು ಸಂವಿಧಾನದ ಮೇಲಿನ ದಾಳಿ, ಪ್ರಜಾಪ್ರಭುತ್ವದ ಕೊಲೆ. ಈ ಕ್ರಮವು ಜಮ್ಮ ಮತ್ತು ಕಾಶ್ಮೀರದ ಜನರನ್ನು ಇನ್ನಷ್ಟು ದೂರ ಮಾಡಲಿದೆ. ಆರ್ಥಿಕ ನೀತಿಗಳನ್ನು ಚರ್ಚಿಸುವ ಬದಲು ರಾಷ್ಟ್ರೀಯತೆ ಹೆಸರಿನಲ್ಲಿ ಜನರ ಗಮನ ಬೇರೆಡೆ ತಿರುಗಿಸಿ ದೇಶದಲ್ಲಿ ಭೀತಿ ಸೃಷ್ಟಿಸಲಾಗುತ್ತಿದೆ. ಆರ್‌ಎಸ್‌ಎಸ್‌ ನಿಯಂತ್ರಿತ ಕೇಂದ್ರ ಸರ್ಕಾರವು ಕಣಿವೆ ರಾಜ್ಯವನ್ನು ತುಂಡುತುಂಡು ಮಾಡುವ ಕಾರ್ಯಸೂಚಿ ಪಾಲಿಸುತ್ತಿದೆ

- ಡಿ.ರಾಜಾ, ಸಿಪಿಐ ಪ್ರಧಾನ ಕಾರ್ಯದರ್ಶಿ

**

ಸರ್ಕಾರದ ದೃಢ ನಿರ್ಧಾರಕ್ಕೆ ತುಂಬು ಹೃದಯದ ಸ್ವಾಗತ. ದೇಶದ ಹಿತಾಸಕ್ತಿಗಾಗಿ ಈ ಕ್ರಮ ಅನಿವಾರ್ಯವಾಗಿತ್ತು. ಎಲ್ಲರೂ ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಹಿತಾಸಕ್ತಿಗಳನ್ನು ಬದಿಗೊತ್ತಿ, ಸರ್ಕಾರದ ಕ್ರಮವನ್ನು ಸ್ವಾಗತಿಸಬೇಕು

ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಹಾಗೂ ಸುರೇಶ್ ಜೋಷಿ ಜಂಟಿ ಹೇಳಿಕೆ

**

ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಿ, ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಭಾರತದ ತೆಕ್ಕೆಗೆ ತರುವುದು ಸರ್ಕಾರದ ಮುಂದಿನ ಅಜೆಂಡಾ ಆಗಬೇಕು. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಈಗ ಟ್ರಂಪ್ ಅಗತ್ಯವಿಲ್ಲ. ಬೇಕಿದ್ದರೆ ಅಕ್ರಮವಾಗಿ ಪಡೆದಿರುವ ಪಿಒಕೆಯನ್ನು ಭಾರತಕ್ಕೆ ನೀಡಿ ಎಂದು ಅವರು ಇಮ್ರಾನ್ ಖಾನ್‌ಗೆ ಹೇಳಲಿ. ಪಿಒಕೆ ಮರಳಿ ಪಡೆಯುವ ನಿರ್ಣಯವನ್ನು ನರಸಿಂಹರಾವ್ ಸರ್ಕಾರದ ಅವಧಿಯಲ್ಲಿ ಸಂಸತ್ ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ 370ನೇ ವಿಧಿ ಜಾರಿಯಲ್ಲಿರುವವರೆಗೂ ಕೆಲವು ಶಕ್ತಿಗಳು ಅದರ ಆಶ್ರಯ ಪಡೆದಿದ್ದವು. ಕಾಂಗ್ರೆಸ್‌ ಪಕ್ಷಕ್ಕೆ ಕಾನೂನಿನ ಅಜ್ಞಾನವಿತ್ತು. ಸಂಸತ್ತಿನಲ್ಲಿ ತಿದ್ದುಪಡಿ ಮಾಡದೆಯೇ ರಾಷ್ಟ್ರಪತಿ ಆದೇಶದ ಮೂಲಕ 370ನೇ ವಿಧಿ ಅಸಿಂಧುಗೊಳಿಸುವ ಅವಕಾಶ ಸಂವಿಧಾನದಲ್ಲಿದೆ. 

- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

**

ಕಾನೂನಿಗೆ ತಿದ್ದುಪಡಿ ತರುವುದನ್ನು ವಿರೋಧಿಸಿದ್ದ ಲೋಕನಾಯಕ ಜಯಪ್ರಕಾಶ ನಾರಾಯಣ್, ರಾಮ್ ಮನೋಹರ ಲೋಹಿಯಾ ಮತ್ತು ಜಾರ್ಜ್ ಫರ್ನಾಂಡಿಸ್ ಅವರ ಸಿದ್ಧಾಂತಗಳನ್ನು ಪಕ್ಷ ಅನುಸರಿಸುತ್ತಿದೆ. 370ನೇ ವಿಧಿ ಅಸಿಂಧುಗೊಳಿಸುವ ಬಿಜೆಪಿ ನಡೆಯನ್ನು ವಿರೋಧಿಸಿ ನಮ್ಮ ಸಂಸದರು ಸಭಾತ್ಯಾಗ ಮಾಡಿದ್ದು ಸರಿಯಾಗಿದೆ. ವಿಧಿ ತೆಗೆದುಹಾಕುವುದು ಬಿಜೆಪಿ ಕಾರ್ಯಸೂಚಿ ಆಗಿತ್ತೇ ಹೊರತು ಎನ್‌ಡಿಎ ಕಾರ್ಯಸೂಚಿ ಅಲ್ಲ.  

- ಕೆ.ಸಿ ತ್ಯಾಗಿ, ಜೆಡಿಯು ಹಿರಿಯ ಮುಖಂಡ

**

ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳುವ ಯತ್ನವಿದು. ಕಾಶ್ಮೀರ ಹಾಗೂ ಲಡಾಕ್‌ಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಒಂದೇ ದೇಶದಲ್ಲಿ ಎರಡು ಕಾನೂನುಗಳು, ಇಬ್ಬರು ಮುಖ್ಯಸ್ಥರು, ಎರಡು ಲಾಂಛನಗಳು ಇರಬಾರದು ಎಂಬ ಕನಸು ಇಂದು ಸಾಕಾರಗೊಂಡಿದೆ. ಗಡಿರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚು ದಿನ ಉಳಿಯುವುದಿಲ್ಲ 

- ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ

**

ಕೇಂದ್ರ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷ ಸ್ವಾಗತಿಸುತ್ತದೆ. ಈ ನಿರ್ಧಾರದಿಂದ ಕಣಿವೆ ರಾಜ್ಯದಲ್ಲಿ ಶಾಂತಿ ಹಾಗೂ ಅಭಿವೃದ್ಧಿ ಮೂಡುವ ವಿಶ್ವಾಸವಿದೆ

- ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

**

ಇದು ಪ್ರಬಲ ಹಾಗೂ ಐತಿಹಾಸಿಕ ನಿರ್ಧಾರ. ಗ್ರೇಟ್ ಇಂಡಿಯಾ–ಒನ್ ಇಂಡಿಯಾಗೆ ನಮ್ಮ ನಮನ

- ಸುಷ್ಮಾ ಸ್ವರಾಜ್, ಬಿಜೆಪಿ ನಾಯಕಿ

***

ಪ್ರಧಾನಿ ನರೇಂದ್ರ ಮೋದಿ ಅವರು ಕಮಾಲ್ ಮಾಡಿದ್ದಾರೆ. ದೇಶದ ನಿರೀಕ್ಷೆ ನಿಜವಾಗಿದೆ. 370ನೇ ವಿಧಿ ವಿಚಾರದಲ್ಲಿ ಕೈಗೊಂಡ ಐತಿಹಾಸಿಕ ನಿರ್ಧಾರಕ್ಕೆ ಮೋದಿ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದಗಳು 

- ಶಾನವಾಜ್ ಹುಸೇನ್, ಬಿಜೆಪಿ ವಕ್ತಾರ

**

ಮತಗಳಿಗಾಗಿ ಬಿಜೆಪಿ ಇಂತಹ ತೀರ್ಮಾನ ತೆಗೆದುಕೊಂಡಿದೆ. ರಾಜ್ಯಗಳ ಏಕತೆ ಮತ್ತು ಸಮಗ್ರತೆ ವಿಚಾರದಲ್ಲಿ ಪಕ್ಷ ಆಟವಾಡುತ್ತಿದೆ 

- ಗುಲಾಂ ನಬಿ ಆಜಾದ್, ಕಾಂಗ್ರೆಸ್ ಮುಖಂಡ

**

ಕಾಶ್ಮೀರವನ್ನು 370ನೇ ವಿಧಿಯ ಸಂಕೋಲೆಯಿಂದ ಮುಕ್ತಗೊಳಿಸಬೇಕಿದೆ ಎಂಬ ಜನಸಂಘದ ಸ್ಥಾಪಕ ಡಾ. ಶಾಮಪ್ರಸಾದ್ ಮುಖರ್ಜಿ ಅವರ ಕನಸು ಈಡೇರಿದೆ. ಕೇಂದ್ರ ಸರ್ಕಾರ ಇತಿಹಾಸ ನಿರ್ಮಿಸಿದೆ-

- ನಿತಿನ್ ಗಡ್ಕರಿ, ಕೇಂದ್ರ ಸಚಿವ

Post Comments (+)