ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: ಮತಗಣಿತ ಮೈತ್ರಿಕೂಟಕ್ಕೆ ಪೂರಕ

ಆಡಳಿತ ವಿರೋಧಿ ಅಲೆಯ ನಡುವೆಯೂ ಗೆಲ್ಲುವ ನೆಚ್ಚಿನ ಪಕ್ಷ ಬಿಜೆಪಿ
Last Updated 10 ಮೇ 2019, 20:30 IST
ಅಕ್ಷರ ಗಾತ್ರ

ನವದೆಹಲಿ: ಬುಡಕಟ್ಟು ಜನರ ಪ್ರಾಬಲ್ಯದ ಜಾರ್ಖಂಡ್‌ನಲ್ಲಿ ನಾಲ್ಕು ಮತ್ತು ಐದನೇ ಹಂತಗಳಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕು ಕ್ಷೇತ್ರಗಳಲ್ಲಿ ಮತದಾನ ಆಗಿದೆ. ಉಳಿದ ಏಳು ಕ್ಷೇತ್ರಗಳಿಗೆ ಕೊನೆಯ ಎರಡು ಹಂತಗಳಲ್ಲಿ ಮತದಾನ ಆಗಲಿದೆ.

2014ಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿಗೆ ಅತಿದೊಡ್ಡ ಗೆಲುವು ಲಭಿಸಿತ್ತು. 14 ಕ್ಷೇತ್ರಗಳ ಪೈಕಿ 12 ಬಿಜೆಪಿ ಬುಟ್ಟಿಗೆ ಬಿದ್ದವು. ಹಾಗಿದ್ದರೂ, ಅದೇ ವರ್ಷ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಆಲ್‌ ಜಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌ ಪಾರ್ಟಿ (ಎಜೆಎಸ್‌ಯುಪಿ) ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡದ್ದು ವಿಶೇಷ. ಅದು ಬಿಜೆಪಿಗೆ ಫಲ ನೀಡಿತು. ವಿಧಾನಸಭೆ ಚುನಾವಣೆಯಲ್ಲಿ 81 ಕ್ಷೇತ್ರಗಳಲ್ಲಿ 42ರಲ್ಲಿ ಈ ಮೈತ್ರಿಕೂಟ ಗೆದ್ದು ಅಲ್ಲಿ ಸರ್ಕಾರ ರಚಿಸಿತು.

ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಪಡೆದ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಮಾಡಿಕೊಂಡರೆ, ಸೋತ ಕಾಂಗ್ರೆಸ್‌, ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪ್ರತ್ಯೇಕವಾಗಿಯೇ ಸ್ಪರ್ಧಿಸಿದವು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಪ್ರಮಾಣ ಶೇ 40.7ರಷ್ಟಿತ್ತು. ಇದು ಕಾಂಗ್ರೆಸ್‌, ಜೆಎಂಎಂ, ಆರ್‌ಜೆಡಿ ಪಡೆದ ಒಟ್ಟು ಮತಗಳಿಗಿಂತ ಶೇ 16ರಷ್ಟು ಹೆಚ್ಚು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮತಪ್ರಮಾಣ ಶೇ 35.5ಕ್ಕೆ ಇಳಿಯಿತು. ಈ ಮೂರು ಪಕ್ಷಗಳು ಪಡೆದ ಮತ ಪ್ರಮಾಣ ಶೇ 34.6ರಷ್ಟು. ಈ ಮತ ಪ್ರಮಾಣ ಎನ್‌ಡಿಎಗೆ ಬಹಳ ಹತ್ತಿರದಲ್ಲಿಯೇ ಇದೆ.

2014ರ ಈ ಎರಡು ಚುನಾವಣೆಗಳಿಂದ ಕಾಂಗ್ರೆಸ್‌, ಜೆಎಂಎಂ ಮತ್ತು ಆರ್‌ಜೆಡಿ ಪಾಠ ಕಲಿತಂತೆ ಕಾಣಿಸುತ್ತಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ಗಟ್ಟಿಯಾದ ಮೈತ್ರಿಕೂಟ ಇಲ್ಲಿ ರೂಪುಗೊಂಡಿದೆ. ಕಾಂಗ್ರೆಸ್‌, ಜೆಎಂಎಂ ಮತ್ತು ಆರ್‌ಜೆಡಿ ಮತ್ತೆ ಕೈಜೋಡಿಸಿವೆ. ಜಾರ್ಖಂಡ್‌ ವಿಕಾಸ್‌ ಮೋರ್ಚಾವನ್ನೂ ಜತೆಗೆ ಸೇರಿಸಿಕೊಳ್ಳಲಾಗಿದೆ. 2014 ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ನಾಲ್ಕು ಪಕ್ಷಗಳು ಪಡೆದ ಮತಪ್ರಮಾಣ ಶೇ 44.8ರಷ್ಟು. ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪಕ್ಷಗಳು ಪಡೆದ ಮತ ಲೆಕ್ಕ ಹಾಕಿದರೆ, 11 ಲೋಕಸಭಾ ಕ್ಷೇತ್ರಗಳಲ್ಲಿ ಈ ಮೈತ್ರಿಕೂಟದಲ್ಲಿ ಈಗ ಇರುವ ಪಕ್ಷಗಳು ಎನ್‌ಡಿಎಗಿಂತ ಹೆಚ್ಚಿನ ಮತಗಳನ್ನು ಪಡೆದಿವೆ.

ಒಟ್ಟಾಗಿರುವ ಎಲ್ಲ ಪಕ್ಷಗಳ ಮತಗಳು ಮೈತ್ರಿಕೂಟದ ಅಭ್ಯರ್ಥಿಗೇ ವರ್ಗಾವಣೆ ಆಗುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಹಾಗೆಯೇ, ನರೇಂದ್ರ ಮೋದಿ ಅಲೆಯಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಈ ಬಾರಿ ಅವನ್ನು ಉಳಿಸಿಕೊಳ್ಳುತ್ತದೆ ಎಂದೂ ಹೇಳುವಂತಿಲ್ಲ. ರಘುಬರ್‌ ದಾಸ್‌ ಅವರನ್ನು ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಬಿಜೆಪಿ ನೇಮಿಸಿದೆ. ಅವರು ಬುಡಕಟ್ಟುಯೇತರ ಸಮುದಾಯದಿಂದ ಬಂದ ಈ ರಾಜ್ಯದ ಮೊದಲ ಮುಖ್ಯಮಂತ್ರಿ. ಇದರಿಂದಾಗಿ ರಾಜ್ಯ ಸರ್ಕಾರದ ಬಗ್ಗೆ ಬುಡಕಟ್ಟು ಸಮುದಾಯಗಳಲ್ಲಿ ಭಾರಿ ಅತೃಪ್ತಿ ಇದೆ ಎನ್ನಲಾಗುತ್ತಿದೆ. ಹಾಗಾಗಿ ಈ ಬಾರಿ, ನಷ್ಟ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬ ಕಡೆಗೆ ಬಿಜೆಪಿ ಹೆಚ್ಚು ಗಮನ ಕೊಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT