ಬುಧವಾರ, ಜೂನ್ 23, 2021
30 °C

ಜೆಡಿಎಸ್‌ಗೆ ಮರುಜೀವ: ಪ್ರಶಾಂತ್ ಕಿಶೋರ್‌ ಸಲಹೆ ಕೇಳಿದ ಎಚ್‌ಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಮರಳಲು ನೆರವಾದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್ ಅವರ ಜೊತೆಗೆ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಮಾತುಕತೆ ನಡೆಸಿದರು.

‘ಪಕ್ಷವನ್ನು ಕರ್ನಾಟಕದಲ್ಲಿ ಪುನರ್‌ ಸಂಘಟಿಸುವ ಸಾಧ್ಯತೆಗಳ ಬಗ್ಗೆ ನಾನು ಪ್ರಶಾಂತ್ ಅವರೊಂದಿಗೆ ಸಮಾಲೋಚನೆ ಮಾಡಿದ್ದೇನೆ. ಇದಿನ್ನೂ ಮೊದಲ ಸುತ್ತಿನ ಮಾತುಕತೆ. ಮುಂದಿನ ಬೆಳವಣಿಗೆಗಳ ಬಗ್ಗೆ ಶೀಘ್ರ ತಿಳಿಸುತ್ತೇನೆ’ ಎಂದು ಕುಮಾರಸ್ವಾಮಿ ವರದಿಗಾರರಿಗೆ ತಿಳಿಸಿದರು.

ಹಲವು ಚುನಾವಣೆಗಳಲ್ಲಿ ಸರಣಿ ಸೋಲುಂಡ ಬಳಿಕ ಪಕ್ಷಕ್ಕೆ ಮರುಜೀವ ನೀಡಲು ಪ್ರಶಾಂತ್ ಕಿಶೋರ್ ಸಲಹೆ ಪಡೆಯಲು ನಾಯಕರು ಒಲವು ತೋರಿದ್ದಾರೆ ಎಂದು ಈಚೆಗಷ್ಟೇ ಪಕ್ಷದ ಮೂಲಗಳು ಹೇಳಿದ್ದವು.

2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 225 ಸ್ಥಾನಗಳ ಪೈಕಿ ಜೆಡಿಎಸ್‌ 37 ಸ್ಥಾನ ಪಡೆದಿತ್ತು. ಕಾಂಗ್ರೆಸ್‌ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಒಂದು ಸ್ಥಾನ ಗೆಲ್ಲುವಲ್ಲಿ ಮಾತ್ರವೇ ಸಾಧ್ಯವಾಯಿತು.

ಪಕ್ಷದ ಹಿರಿಯ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸಹ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. 2019ರಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿಯೂ ಜೆಡಿಎಸ್‌ಗೆ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ.

ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (ಐ–ಪ್ಯಾಕ್) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಗೆಲುವಿಗೆ ಪೂರಕ ಸಲಹೆಗಳನ್ನು ನೀಡಿತ್ತು. 2014ರಲ್ಲಿ ಬಿಜೆಪಿ ಗೆಲುವಿಗೆ ಸಹ ಐ–ಪ್ಯಾಕ್ ಪೂರಕವಾಗಿ ಕೆಲಸ ಮಾಡಿತ್ತು. ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗೆ ಅಧಿಕಾರ ತಂದುಕೊಟ್ಟ 2015ರ ವಿಧಾನಸಭಾ ಚುನಾವಣೆಯಲ್ಲಿ ಐ–ಪ್ಯಾಕ್ ಜೆಡಿಯು ಪರ ಕೆಲಸ ಮಾಡಿತ್ತು. ಆಂಧ್ರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ಗೂ ಐ–ಪ್ಯಾಕ್ ನೆರವು ಸಿಕ್ಕಿತ್ತು.

ಬಿಹಾರದ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಐ–ಪ್ಯಾಕ್‌ನ ಪ್ರಶಾಂತ್ ಕಿಶೋರ್ ಈಚೆಗೆ ಪರಸ್ಪರ ದೂರವಾಗಿದ್ದಾರೆ. ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಪ್ರಶಾಂತ್ ಕಿಶೋರ್ ಅವರನ್ನು ಈಚೆಗಷ್ಟೇ ನಿತೀಶ್ ಕುಮಾರ್ ಪಕ್ಷದಿಮದ ಹೊರಹಾಕಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು