ಭಾನುವಾರ, ನವೆಂಬರ್ 17, 2019
24 °C

6300 ನಾಣ್ಯಗಳನ್ನು ನೀಡಿ ನಾಮಪತ್ರ ಸಲ್ಲಿಸಿದ ಶಿವಸೇನಾ ಅಭ್ಯರ್ಥಿ

Published:
Updated:
coins to buy nomination papers

ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಶಿವಸೇನಾ ಅಭ್ಯರ್ಥಿ ಮನಿಶ್ ಕುಮಾರ್ ಗುಪ್ತಾ ಭದ್ರತಾ ಠೇವಣಿಯಾಗಿ ₹ 6300 ಮೊತ್ತದ ನಾಣ್ಯಗಳನ್ನು ನೀಡುವ ಮೂಲಕ ಗರ್ವಾ ಜಿಲ್ಲೆಯ ಚುನಾವಣಾ ಅಧಿಕಾರಿಯನ್ನೇ ದಂಗಾಗುವಂತೆ ಮಾಡಿದ್ದಾರೆ.

6,300 ರೂಪಾಯಿ ಮೊತ್ತದ ಒಂದು ರೂಪಾಯಿ ನಾಣ್ಯಗಳನ್ನು ಸ್ವೀಕರಿಸಲು ಅಧಿಕಾರಿಗಳು  ಹಿಂಜರಿದರಾದರೂ ಬಳಿಕ ಅವುಗಳನ್ನು ಎಣಿಸಲು ಮೂವರು ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ನಾಣ್ಯಗಳ ಎಣಿಕೆಯು ಎರಡು ಗಂಟೆಗೂ ಅಧಿಕ ಕಾಲ ನಡೆದಿದೆ.

ನಾನು 6,300 ರೂಪಾಯಿ ನಾಣ್ಯಗಳನ್ನು ಜಮಾ ಮಾಡಿದ್ದೇನೆ, ಉಳಿದ ಮೊತ್ತವನ್ನು ನೋಟುಗಳಲ್ಲಿ ಪಾವತಿಸಿದ್ದೇನೆ. ಬ್ಯಾಂಕುಗಳು ಮತ್ತು ಗ್ರಾಹಕರು ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುವುದರಿಂದಾಗಿ ವ್ಯಾಪಾರಿಗಳು ಎದುರಿಸುವ ಸಮಸ್ಯೆಯನ್ನು ಎತ್ತಿ ತೋರಿಸುವ ಉದ್ದೇಶ ನನ್ನದಾಗಿತ್ತು ಎಂದು ಹೇಳುತ್ತಾರೆ ಗರ್ವಾದಲ್ಲಿ ಕಟ್ಟಡ ನಿರ್ಮಾಣ ವಸ್ತುಗಳ ಅಂಗಡಿ ಹೊಂದಿರುವ ಗುಪ್ತಾ.

ಚುನಾವಣೆ ಆಯೋಗವು ಸಾಮಾನ್ಯ ವರ್ಗಕ್ಕೆ 10 ಸಾವಿರ ಮತ್ತು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ 5 ಸಾವಿರ ರೂಪಾಯಿಗಳನ್ನು ಭದ್ರತಾ ಠೇವಣಿಯನ್ನಾಗಿ ನಿಗಧಿಗೊಳಿಸಿದ್ದು, ಹಣವನ್ನು ನಾಮಪತ್ರ ಖರೀದಿಸುವ ಅಥವಾ ಸಲ್ಲಿಸುವ ವೇಳೆಯಲ್ಲಿ ಠೇವಣಿ ಇಡಬೇಕಾಗಿರುತ್ತದೆ.

ಗುಪ್ತಾ ಮಾತನಾಡಿ, ನೋಟು ರದ್ಧತಿಯ ಬಳಿಕ ಮಾರುಕಟ್ಟೆಯಲ್ಲಿ ನಾಣ್ಯಗಳ ಹರಿವು ಜಾಸ್ತಿಯಾಗಿದೆ. ವ್ಯಾಪಾರದ ದೃಷ್ಟಿಯಿಂದಾಗಿ ಗ್ರಾಹಕರು ನಾಣ್ಯಗಳನ್ನು ನೀಡಿದಾಗ ನಿರಾಕರಿಸಲು ಆಗುವುದಿಲ್ಲ. ನಾಣ್ಯಗಳನ್ನು ಜಮೆ ಮಾಡಲು ಬ್ಯಾಂಕಿಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ ಆದರೆ ಎಷ್ಟೇ ಮನವಿ ಮಾಡಿದರು ಅವರು 100ಕ್ಕಿಂತ ಹೆಚ್ಚಿನ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ. ಹಾಗಾಗಿ ನಾಮಪತ್ರ ಪಡೆಯುವ ವೇಳೆ ಎಲ್ಲ ನಾಣ್ಯಗಳನ್ನು ಸಲ್ಲಿಸಲು ತೀರ್ಮಾನಿಸಿದೆ ಎನ್ನುತ್ತಾರೆ. 

ಗರ್ವಾದ ಉಪ ವಿಭಾಗಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಅಭ್ಯರ್ಥಿಯು ನಾಮಪತ್ರ ಕೊಂಡುಕೊಳ್ಳಲು ಕೇವಲ ನಾಣ್ಯಗಳನ್ನೇ ನೀಡುತ್ತೇನೆ ಎಂದಾಗ ನಾವು ಅದನ್ನು ನಿರಾಕರಿಸಲಿಲ್ಲ. ಬದಲಿಗೆ ನಾಣ್ಯಗಳನ್ನು ಎಣಿಸಲು ಮೂವರು ಅಧಿಕಾರಿಗಳನ್ನು ನಿಯೋಜಿಸಿದೆವು. ಇದು ಸುಮಾರು ಎರಡು ಗಂಟೆ ತೆಗೆದುಕೊಂಡಿತು ಎಂದು ತಿಳಿಸಿದರು. 

26 ವರ್ಷದವರಿದ್ದಾಗ ಗುಪ್ತಾ ಅವರು 2014ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗರ್ವಾ ಕ್ಷೇತ್ರದಿಂದ ಸ್ಪರ್ಧಿಸಿ 1595 ಮತಗಳನ್ನು ಪಡೆದಿದ್ದರು. ಆಗ ಬಿಜೆಪಿಯ ಸತ್ಯೇಂದ್ರನಾಥ್ ತಿವಾರಿ 76,638 ಮತಗಳನ್ನು ಪಡೆದು ಜಯ ಸಾಧಿಸಿದ್ದರು. 

ಜಾರ್ಖಂಡ್‌ನಲ್ಲಿ ನವೆಂಬರ್ 30ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 13 ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದೆ.

ಪ್ರತಿಕ್ರಿಯಿಸಿ (+)