ಶುಕ್ರವಾರ, ಅಕ್ಟೋಬರ್ 18, 2019
24 °C

2–3 ತಿಂಗಳಲ್ಲಿ ಆರ್ಥಿಕತೆ ಪುನಶ್ಚೇತನಗೊಳ್ಳಲಿದೆ: ರಾಕೇಶ್‌ ಜುಂಜುನ್‌ವಾಲಾ

Published:
Updated:

ಮುಂಬೈ: ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಬ್ಯಾಂಕಿಂಗ್‌ ಹಾಗೂ ಹೂಡಿಕೆ ಕ್ಷೇತ್ರದಲ್ಲಿ ಸುಧಾರಣೆಯಾಗಲಿದೆ ಎಂದು ಹೂಡಿಕೆ ತಜ್ಞ ರಾಕೇಶ್‌ ಜುಂಜುನ್‌ವಾಲಾ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಳೆದ ಎರಡು ತಿಂಗಳಲ್ಲಿ ನಿಫ್ಟಿ ಸೂಚ್ಯಂಕವು ಕನಿಷ್ಠ 10,750 ರಿಂದ 11,000 ಅಂಶಗಳನ್ನು ಕಾಯ್ದುಕೊಳ್ಳಬೇಕು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿಫ್ಟಿ ಸೂಚ್ಯಂಕವು ಕಳೆದ ಎರಡು ತಿಂಗಳಲ್ಲಿ ಗರಿಷ್ಠ 12 ಸಾವಿರದಿಂದ ಕನಿಷ್ಠ 11 ಸಾವಿರಕ್ಕೆ ಕೊನೆಗೊಂಡಿದೆ ಎಂದು ತಿಳಿಸಿದ್ದಾರೆ.

2019ರ ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ಗಳಿಕೆ ಹಿಂದಿನದಕ್ಕಿಂತ ಉತ್ತಮವಾಗಿದೆ. ಕಳೆದ ಎರಡು ತಿಂಗಳಲ್ಲಿ ನಿಫ್ಟಿ ಸೂಚ್ಯಂಕವು ಶೇ. 14ರಷ್ಟು ಇಳಿಕೆ ಕಂಡಿದೆ. ಅದೇ ವೇಳೆ, ಮುಂಬೈ ಷೇರು ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಮೇಲಿನ ಹೂಡಿಕೆ ಸೂಚ್ಯಂಕವು ಶೇ. 10ರಷ್ಟು ಕುಸಿದಿದೆ.

ಬ್ಯಾಂಕಿಂಗ್‌ ಕ್ಷೇತ್ರದ ವೈಫಲ್ಯ ಹಾಗೂ ಎನ್‌ಪಿಎ (ವಸೂಲಿಯಾಗದ ಸಾಲದ ಮೊತ್ತ) ಏರಿಕೆಯೇ ನಿಫ್ಟಿ ಸೂಚ್ಯಂಕ ಕುಸಿತಕ್ಕೆ ಪ್ರಮುಖ ಕಾರಣ. ಆರ್ಥಿಕ ಪರಿಸ್ಥಿತಿಗಳು ಹಾಗೂ ಬ್ಯಾಂಕಿಂಗ್‌ಯೇತರ ಕ್ಷೇತ್ರಗಳಲ್ಲಿನ ಬಿಕ್ಕಟ್ಟಿನಿಂದಾಗಿ ಆರ್ಥಿಕತೆಯಲ್ಲಿ ಅಲ್ಪಾವಧಿ ಕುಸಿತ ಉಂಟಾಗಿದೆ. ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಂಡರೆ ಇನ್ನು ಎರಡು ಅಥವಾ ಮೂರು ತಿಂಗಳಲ್ಲಿ ಈ ಸೂಚ್ಯಂಕವು  ಮೇಲೇಳಲಿದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹೂಡಿಕೆಯೂ ಸುಧಾರಣೆಗೊಳ್ಳಲಿದೆ ಎಂದಿದ್ದಾರೆ.

ಆರ್ಥಿಕತೆಯ ‍ಪುನಶ್ಚೇತನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಕಳೆದ ವಾರ ಭರವಸೆ ನೀಡಿತ್ತು. ಅದರ ಭಾಗವಾಗಿ ಆರ್‌ಬಿಐ ಕಾರ್ಯಪ್ರವೃತ್ತವಾಗಿದ್ದು, ರೆಪೋ ದರವನ್ನು 2019ರಿಂದ ಈಚೆಗೆ 110 ಅಂಶಗಳಷ್ಟು ಕಡಿತಗೊಳಿಸಿದೆ ಎಂದು ಹೇಳಿದ್ದಾರೆ.

11043.65 ಅಂಶಗಳೊಂದಿಗೆ ಆರಂಭವಾದ ನಿಫ್ಟಿ ಸೂಚ್ಯಂಕ 11029.40 ಅಂಶಕ್ಕೆ ಕುಸಿದಿತ್ತು. ಮಧ್ಯಾಹ್ನ 3.21ರ ವೇಳೆಗೆ 13.20 ಅಂಶಗಳ (ಶೇ.0.12 ) ಏರಿಕೆಯೊಂದಿಗೆ 11042.60ಕ್ಕೆ ತಲುಪಿದೆ. 37383.00 ಅಂಶಗಳಿಂದ ಆರಂಭವಾದ ಸೆನ್ಸೆಕ್ಸ್‌ ದರ 37,311.53ಕ್ಕೆ ಕುಸಿದಿತ್ತು. ಮತ್ತೆ ಚೇತರಿಸಿಕೊಂಡು ಇದೀಗ ಶೇ.0.08 ರಷ್ಟು (30.51 ಅಂಶಗಳ) ಏರಿಕೆಯೊಂದಿಗೆ 37,342.04ಕ್ಕೆ ತಲುಪಿದೆ. ವಹಿವಾಟಿನಲ್ಲಿ ಏರಿಳಿತ  ನಿರಂತರವಾಗಿ ಮುಂದುವರಿದಿದೆ.

Post Comments (+)