ಸೋಮವಾರ, ಸೆಪ್ಟೆಂಬರ್ 16, 2019
27 °C

ಸ್ವವಿವರ ಸಲ್ಲಿಸಿ: ರೊಮಿಲಾಗೆ ಜೆಎನ್‌ಯು ಸೂಚನೆ

Published:
Updated:
Prajavani

ನವದೆಹಲಿ: ‘ಸಂದರ್ಶಕ ಪ್ರಾಧ್ಯಾಪಕರಾಗಿ ನಿಮ್ಮನ್ನು ಉಳಿಸಿಕೊಳ್ಳಬೇಕೇ ಬೇಡವೇ ಎಂದು ನಿರ್ಧರಿಸುವುದಕ್ಕಾಗಿ ಸ್ವವಿವರ ಸಲ್ಲಿಸಿ’ ಎಂದು ಖ್ಯಾತ ಇತಿಹಾಸಕಾರ್ತಿ ರೊಮಿಲಾ ಥಾಪರ್‌ ಅವರಿಗೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತೀವ್ರ ಟೀಕಾಕಾರರು ಎಂದು ರೊಮಿಲಾ ಗುರುತಿಸಿಕೊಂಡಿದ್ದಾರೆ. ಅವರಿಗೆ ಈ ರೀತಿಯ ಸೂಚನೆ ನೀಡಿರುವುದರ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ನೀವು ಮಾಡಿರುವ ಕೆಲಸಗಳ ಬಗೆಗಿನ ಮಾಹಿತಿ ಕೊಡಿ. ವಿ.ವಿಯು ರೂಪಿಸಿರುವ ಸಮಿತಿಯು ಅದನ್ನು ನೋಡಿಕೊಂಡು ನಿಮ್ಮ ಸಾಧನೆಯನ್ನು ಮೌಲ್ಯಮಾಪನ ಮಾಡಿ, ಸಂದರ್ಶಕ ಪ್ರಾಧ್ಯಾಪಕರಾಗಿ ಉಳಿಸಿಕೊಳ್ಳಬಹುದೇ ಎಂಬುದನ್ನು ನಿರ್ಧರಿಸಲಿದೆ’ ಎಂದು 87 ವರ್ಷದ ರೊಮಿಲಾ ಅವರಿಗೆ ಜೆಎನ್‌ಯು ರಿಜಿಸ್ಟ್ರಾರ್‌ ಪ್ರಮೋದ್‌ ಕುಮಾರ್‌ ಜುಲೈನಲ್ಲಿ ಪತ್ರ ಬರೆದಿದ್ದರು. 

ಜೆಎನ್‌ಯು ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ವಿಶ್ವವಿದ್ಯಾಲಯವು 25 ಸಂದರ್ಶಕ ಪ್ರಾಧ್ಯಾಪಕರನ್ನು ಹೊಂದಿದೆ. ರಾಜಕೀಯಶಾಸ್ತ್ರಜ್ಞೆ ಜೋಯಾ ಹಸನ್‌, ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರಭಾತ್‌ ಪಟ್ನಾಯಕ್‌ ಇವರಲ್ಲಿ ಸೇರಿದ್ದಾರೆ. ಈ ಹುದ್ದೆಗೆ ಯಾವುದೇ ಆರ್ಥಿಕ ಪ್ರತಿಫಲ ಇಲ್ಲ.  

ಜೆಎನ್‌ಯು ನಡೆಯನ್ನು ಹಲವು ಖ್ಯಾತನಾಮರು ಪ್ರಶ್ನಿಸಿದ್ದಾರೆ. 

ಸಂದರ್ಶಕ ಪ್ರಾಧ್ಯಾಪಕ ಎಂಬ ಗೌರವದ ಅರ್ಥವಾದರೂ ಏನು ಎಂಬುದು ಜೆಎನ್‌ಯು ಕಾರ್ಯಕಾರಿ ಮಂಡಳಿಗೆ ತಿಳಿದಿದೆಯೇ ಎಂದು ಪ್ರಭಾತ್‌ ಅವರು ಪ್ರಶ್ನಿಸಿದ್ದಾರೆ. ಇದು ರೊಮಿಲಾ ಅವರಿಗೆ ಮಾಡಿದ ಅವಮಾನ. ರಾಜಕೀಯಪ್ರೇರಿತ ನಡೆ ಎಂದು ಜೆಎನ್‌ಯು ಶಿಕ್ಷಕರ ಸಂಘ ಹೇಳಿದೆ.

Post Comments (+)