ಭಾನುವಾರ, ಜನವರಿ 26, 2020
18 °C
ಜೆಎನ್‌ಯು ಸುತ್ತ 700 ಪೊಲೀಸರ ಕಾವಲು

ಹೀಗಿತ್ತು ಜೆಎನ್‌ಯು: ಹಲ್ಲೆಯ ಮರುದಿನ ನೀರವ ಮೌನ, ಮುಂದುವರಿದ ಭೀತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಭಾನುವಾರ ರಾತ್ರಿ ನಡೆದ ದಾಳಿಯ ಬಳಿಕ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕ್ಯಾಂಪಸ್‌ನಲ್ಲಿ ಸೋಮವಾರ ಮೌನ ಮನೆಮಾಡಿತ್ತು.

‘ಭದ್ರತೆಗಾಗಿ ಜೆಎನ್‌ಯು ಆವರಣದಲ್ಲಿ 700 ಪೊಲೀಸರನ್ನು ನಿಯೋಜಿಸಲಾಗಿದೆ. ಗುರುತುಪತ್ರ ಇರುವವರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ದಾಳಿಯ ನಂತರ, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು ಅಭದ್ರತೆಯ ಭಾವವನ್ನು ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಕೊಠಡಿಯಿಂದ ಆಚೆ ಬರಬೇಡಿ ಎಂದು ನಮಗೆ ಬೆದರಿಕೆಯ ಕರೆಗಳು ಬರುತ್ತಿವೆ’ ಎಂದು ಕೆಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ‘ವಿಶ್ವವಿದ್ಯಾಲಯದ ಆಡಳಿತವು ವಿದ್ಯಾರ್ಥಿಗಳ ಜೊತೆಗಿದೆ. ಅವರ ಶೈಕ್ಷಣಿಕ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯತೆಯಾಗಿದೆ. ಯಾರೂ ಕ್ಯಾಂಪಸ್‌ ಬಿಟ್ಟು ಹೋಗಬೇಕಾಗಿಲ್ಲ’ ಎಂದು ವಿಶ್ವವಿದ್ಯಾಲಯದ ಶಿಸ್ತುಪಾಲನಾಧಿಕಾರಿ ಧನಂಜಯ್‌ ಸಿಂಗ್‌ ಹೇಳಿದ್ದಾರೆ.

ಅಧಿಕಾರಿಗಳ ಸಭೆ: ಘಟನೆಯ ಬಗ್ಗೆ ಮಾಹಿತಿ ಪಡೆಯಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅಮಿತ್‌ ಖೇರ್‌ ಅವರು ಸೋಮವಾರ ವಿಶ್ವವಿದ್ಯಾಲಯದ ಅಧಿಕಾರಿಗಳ ಜತೆ ಸಭೆ ನಡೆಸಿದರು. ಕುಲಪತಿ ಜಗದೀಶ್‌ ಕುಮಾರ್‌ ಸಭೆಗೆ ಹಾಜರಾಗಲಿಲ್ಲ.

‘ಸಭೆಯಲ್ಲಿ ಹಾಜರಿದ್ದ ರಿಜಿಸ್ಟ್ರಾರ್‌ ಹಾಗೂ ಇತರ ಅಧಿಕಾರಿಗಳು ಭಾನುವಾರ ರಾತ್ರಿಯ ಘಟನೆಯ ಬಗ್ಗೆ ಸಚಿವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾವಳಿಗಳ ಬಗ್ಗೆ ವಿಸ್ತೃತವಾದ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ವಾರ್ಡನ್‌ ರಾಜೀನಾಮೆ: ಜೆಎನ್‌ಯು ಆವರಣದಲ್ಲಿರುವ ಸಾಬರಮತಿ ಹಾಸ್ಟೆಲ್‌ನ ಇಬ್ಬರು ವಾರ್ಡನ್‌ಗಳು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಲು ವಿಫಲರಾಗಿರುವುದಕ್ಕೆ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡುತ್ತಿದ್ದೇವೆ’ ಎಂದು ವಾರ್ಡನ್‌ಗಳಾದ ಮೀನಾ ಹಾಗೂ ಪ್ರಕಾಶ್‌ಚಂದ್ರ ಸಾಹು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಆದರೆ, ‘ರಕ್ಷಣೆ ನೀಡಲು ವಿಫಲವಾಗಿದ್ದಕ್ಕೆ ಕೆಲವು ವಿದ್ಯಾರ್ಥಿಗಳು ವಾರ್ಡನ್‌ ಅವರನ್ನು ನಿಂದಿಸಿದ್ದಾರೆ ಮತ್ತು ರಾಜೀನಾಮೆ ಪತ್ರಕ್ಕೆ ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿದ್ದಾರೆ’ ಎಂಬ ಆರೋಪಗಳೂ ಬಂದಿವೆ.

ಗಲಭೆಕೋರರ ಸುಳಿವು: ಜೆಎನ್‌ಯು ಹಲ್ಲೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಅಪರಾಧ ತನಿಖಾ ವಿಭಾಗಕ್ಕೆ ವಹಿಸಲಾಗಿದೆ. ‘ದಾಳಿಕೋರರ ಕೆಲವು ಪ್ರಮುಖ ಸುಳಿವು ಲಭ್ಯವಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಇಲಾಖೆಯ ವಕ್ತಾರ ಮನ್‌ದೀಪ್‌ಸಿಂಗ್‌ ರಾಂಧವ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು