ಲೋಕಸಭೆ ಚುನಾವಣೆ: ಬಿಹಾರದ ಬೇಗೂಸರಾಯ್‌ ಕ್ಷೇತ್ರದಿಂದ ಕನ್ಹಯ್ಯಾ ಸ್ಪರ್ಧೆ

7

ಲೋಕಸಭೆ ಚುನಾವಣೆ: ಬಿಹಾರದ ಬೇಗೂಸರಾಯ್‌ ಕ್ಷೇತ್ರದಿಂದ ಕನ್ಹಯ್ಯಾ ಸ್ಪರ್ಧೆ

Published:
Updated:

ಪಟ್ನಾ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಬೇಗೂಸರಾಯ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಆರ್‌ಜೆಡಿ, ಕಾಂಗ್ರೆಸ್, ಎಡಪಕ್ಷಗಳು, ಎನ್‌ಸಿಪಿ ಮತ್ತಿತರ ಪಕ್ಷಗಳ ಮಹಾಮೈತ್ರಿಕೂಟದ ಸಾಮಾನ್ಯ ಅಭ್ಯರ್ಥಿಯಾಗಿ ಅವರು ಚುನಾವಣೆ ಸ್ಪರ್ಧಿಸಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕನ್ಹಯ್ಯಾ ಅವರಿಗೆ ಬೇಗೂಸರಾಯ್ ಕ್ಷೇತ್ರವನ್ನು ಬಿಟ್ಟುಕೊಡಲು ಮಹಾಮೈತ್ರಿಯ ನೇತೃತ್ವ ವಹಿಸಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಅವರ ಪುತ್ರ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್‌ ನಾಯಕರು ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ. ಸಿಪಿಎಂ ಅಧಿಕೃತ ಅಭ್ಯರ್ಥಿಯಾಗಿ ಕನ್ಹಯ್ಯಾ ಕಣಕ್ಕಿಳಿಯಲಿದ್ದು, ಮಹಾಮೈತ್ರಿಕೂಟದ ಸಾಮಾನ್ಯ ಅಭ್ಯರ್ಥಿಯಾಗಿರಲಿದ್ದಾರೆ. ಎನ್‌ಡಿಎಗೆ ಕಠಿಣ ಸಂದೇಶ ನೀಡುವುದು ಇದರ ಉದ್ದೇಶ ಎಂದು ಲಾಲೂ ಕುಟುಂದ ಆಪ್ತ ಮೂಲಗಳು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕನ್ಹಯ್ಯಾ ಅವರು ಬೇಗೂಸರಾಯ್ ಜಿಲ್ಲೆಯ ಬಿಹಾತ್ ಪಂಚಾಯಿತಿ ಮೂಲದವರಾಗಿದ್ದಾರೆ. ಅವರ ತಾಯಿ ಮೀನಾ ದೇವಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ತಂದೆ ಜಯಶಂಕರ್ ಸಿಂಗ್ ಸಣ್ಣ ರೈತರಾಗಿದ್ದಾರೆ.

ಸದ್ಯ, ಬೇಗೂಸರಾಯ್‌ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಭೋಲಾ ಸಿಂಗ್ ಸಂಸದರಾಗಿದ್ದಾರೆ. 2014ರಲ್ಲಿ ಮೊತ್ತಮೊದಲ ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆರ್‌ಜೆಡಿ ಅಭ್ಯರ್ಥಿ ತನ್ವೀರ್ ಹಸನ್ ಅವರ ವಿರುದ್ಧ 58 ಸಾವಿರ ಮತಗಳ ಅಂತರದಿಂದ ಸಿಂಗ್ ಜಯ ಸಾಧಿಸಿದ್ದರು. ಅವರು ಒಟ್ಟು 4,28,227 ಮತಗಳನ್ನು ಪಡೆದಿದ್ದು, ತನ್ವೀರ್‌ 3,69,892 ಮತಗಳನ್ನು ಗಳಿಸಿದ್ದರು. 1,92,639 ಮತಗಳನ್ನು ಗಳಿಸುವ ಮೂಲಕ ಸಿಪಿಎಂನ ರಾಜೇಂದ್ರ ಪ್ರಸಾದ್ ಸಿಂಗ್ ಮೂರನೇ ಸ್ಥಾನ ಗಳಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !