ಉದ್ಯೋಗ ಸೃಷ್ಟಿ: ಅಗ್ರ ಮೂರರಲ್ಲಿ ಕರ್ನಾಟಕ

7

ಉದ್ಯೋಗ ಸೃಷ್ಟಿ: ಅಗ್ರ ಮೂರರಲ್ಲಿ ಕರ್ನಾಟಕ

Published:
Updated:

ನವದೆಹಲಿ: ‘2017ರ ಸೆಪ್ಟೆಂಬರ್‌ನಿಂದ ಒಂದು ವರ್ಷದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸಿದ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಉದ್ಯೋಗ ಸೃಷ್ಟಿಸಿಲ್ಲ ಎಂಬ ಆರೋಪಗಳ ನಡುವೆಯೇ ಇತ್ತೀಚೆಗೆ ಬಿಡುಗಡೆಯಾದ ಅಧಿಕೃತ ದತ್ತಾಂಶ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. 

ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ‘ಉದ್ಯೋಗ ಮುನ್ನೋಟ ವರದಿ’ ಬಿಡುಗಡೆ ಮಾಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ದತ್ತಾಂಶವನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಅದರ ಪ್ರಕಾರ, ಈ ಅವಧಿಯಲ್ಲಿ 1.57 ಕೋಟಿ ಹೊಸ ಉದ್ಯೋಗಿಗಳು ಇಪಿಎಫ್‌ಗೆ ಸೇರ್ಪಡೆಯಾಗಿದ್ದಾರೆ. 

ಇಪಿಎಫ್‌ಗೆ ಹೊಸದಾಗಿ ಸೇರ್ಪಡೆ ಆದವರಲ್ಲಿ ಶೇ 25ರಷ್ಟು ಮಹಾರಾಷ್ಟ್ರದವರಾದರೆ, ಶೇ 45ರಷ್ಟು ಮಂದಿ ಕರ್ನಾಟಕ ಮತ್ತು ತಮಿಳುನಾಡಿನವರು. 

ಭಾರತದಲ್ಲಿ ಉದ್ಯೋಗ ಸೃಷ್ಟಿಯ ಅಧಿಕೃತ ಮಾಹಿತಿ ವ್ಯವಸ್ಥೆ ಇಲ್ಲ. ಹಾಗಾಗಿ, ಉದ್ಯೋಗ ದತ್ತಾಂಶವನ್ನು ಸುಧಾರಿಸಲು ನೀತಿ ಆಯೋಗದ ಉಪಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯಪಡೆಯನ್ನು ಕಳೆದ ವರ್ಷ ರಚಿಸಲಾಗಿತ್ತು. 

ಇಪಿಎಫ್‌ಒ, ಉದ್ಯೋಗಿಗಳ ರಾಜ್ಯ ವಿಮೆ ನಿಗಮ (ಇಎಸ್‌ಐಸಿ) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ಹೊಸದಾಗಿ ಸೇರ್ಪಡೆಯಾಗುವ ಉದ್ಯೋಗಿಗಳ ಮಾಹಿತಿ ಸಂಗ್ರಹಿಸಿ ಉದ್ಯೋಗ ಸೃಷ್ಟಿ ದತ್ತಾಂಶವನ್ನು ಪಡೆಯಬೇಕು ಎಂದು ಕಾರ್ಯಪಡೆಯು ಸಲಹೆ ಮಾಡಿತ್ತು. ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಈ ಕೆಲಸ ಮಾಡಬೇಕು ಎಂದು ಶಿಫಾರಸು ಮಾಡಿತ್ತು. 

ದತ್ತಾಂಶ ಸಂಗ್ರಹ ಆರಂಭಿಸಿದ ಕಳೆದ 13 ತಿಂಗಳ ಅವಧಿಯಲ್ಲಿ 1.02 ಕೋಟಿ ಉದ್ಯೋಗಿಗಳು ಇಪಿಎಫ್‌ ಮತ್ತು ಇಎಸ್‌ಐಸಿಯಿಂದ ಬಿಟ್ಟು ಹೋಗಿದ್ದಾರೆ. ಹೀಗೆ ಬಿಟ್ಟು ಹೋದವರು ಮತ್ತು ಮರಳಿ ಸೇರ್ಪಡೆ ಆದವರನ್ನೂ ಗುರುತಿಸಲಾಗಿದೆ. ಹೀಗೆ ಬಿಟ್ಟು ಹೋದವರಲ್ಲಿ ಶೇ 80ರಷ್ಟು ಮಂದಿ ಮರಳಿ ಸೇರ್ಪಡೆಯಾಗಿದ್ದಾರೆ. ಸೇರ್ಪಡೆ ಆದವರಲ್ಲಿ ಶೇ 80ರಷ್ಟು ಮಂದಿ 35 ವರ್ಷದ ಒಳಗಿನವರು. 

* 72% ಉದ್ಯೋಗಗಳು ಪರಿಣತ ಸೇವೆ, ನಿರ್ಮಾಣ ಕಾಮಗಾರಿ, ಎಂಜಿನಿಯರಿಂಗ್‌ ಮತ್ತು ಗುತ್ತಿಗೆಯಲ್ಲಿ ಸೃಷ್ಟಿಯಾಗಿವೆ

* 82% ಹೊಸದಾಗಿ ಕೆಲಸಕ್ಕೆ ಸೇರಿದವರಲ್ಲಿ 35 ವರ್ಷದೊಳಗಿನವರ ಪ್ರಮಾಣ

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !