ರಾಜಸ್ಥಾನ: ‘ಕೈ’ ಹಿಡಿದ ಬಿಜೆಪಿ ಸಂಸದ ಮೀನಾ

7

ರಾಜಸ್ಥಾನ: ‘ಕೈ’ ಹಿಡಿದ ಬಿಜೆಪಿ ಸಂಸದ ಮೀನಾ

Published:
Updated:

ನವದೆಹಲಿ: ಡಿಸೆಂಬರ್‌ ಏಳರಂದು ವಿಧಾನಸಭೆಗೆ ಮತದಾನ ನಡೆಯಲಿರುವ ರಾಜಸ್ಥಾನದ ಬಿಜೆಪಿ ಸಂಸದ ಹರೀಶ್‌ ಚಂದ್ರ ಮೀನಾ ಅವರು ಕಾಂಗ್ರೆಸ್‌ ಸೇರಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಅವರ ಸಮ್ಮುಖದಲ್ಲಿ ಹರೀಶ್‌ ಅವರು ಪಕ್ಷಕ್ಕೆ ಸೇರ್ಪಡೆಯಾದರು. ಐಪಿಎಸ್‌ ಅಧಿಕಾರಿಯಾಗಿದ್ದ ಅವರು ರಾಜಸ್ಥಾನದ ಡಿಜಿಪಿ ಆಗಿದ್ದರು. ಅವರು ಡಿಜಿಪಿ ಆಗಿದ್ದ ಸಂದರ್ಭದಲ್ಲಿ ಗೆಹ್ಲೋಟ್‌ ಮುಖ್ಯಮಂತ್ರಿಯಾಗಿದ್ದರು.

ನಿವೃತ್ತಿಯ ನಂತರ ಬಿಜೆಪಿ ಸೇರಿದ್ದ ಹರೀಶ್‌, 2014ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ದೌಸಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ನ್ಯಾಷನಲಿಸ್ಟ್‌ ಪೀಪಲ್ಸ್‌ ಪಾರ್ಟಿಯ ಕಿರೋರಿ ಲಾಲ್ ಮೀನಾ ಅವರನ್ನು ಸೋಲಿಸಿದ್ದರು. ಈಗ ಕಿರೋರಿ ಲಾಲ್‌ ಅವರು ಬಿಜೆಪಿಯಲ್ಲಿದ್ದಾರೆ. 

ಕಿರೋರಿ ಲಾಲ್‌ ಅವರು ಬಿಜೆಪಿ ಸೇರಿದ್ದು ಹರೀಶ್‌ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹರೀಶ್‌ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ ನಮೋ ನಾರಾಯಣ ಮೀನಾ ಅವರ ಸಹೋದರ. 

ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮೀನಾ ಅವರ ಕಾಂಗ್ರೆಸ್‌ ಸೇರ್ಪಡೆ ತೋರಿಸುತ್ತದೆ ಎಂದು ಪೈಲಟ್‌ ಹೇಳಿದ್ದಾರೆ. 

‘ಬಿಜೆಪಿ ಮುಖಂಡರಲ್ಲಿರುವ ಅತೃಪ್ತಿ ಎದ್ದು ಕಾಣಿಸುತ್ತಿದೆ. ವಸುಂಧರಾ ರಾಜೇ ಅವರ ಐದು ವರ್ಷಗಳ ಆಳ್ವಿಕೆಯಲ್ಲಿ ಹಿರಿಯ ಮುಖಂಡರನ್ನು ನಿರ್ಲಕ್ಷಿಸಲಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ರಾಜಸ್ಥಾನದಲ್ಲಿ ಎಷ್ಟೇ ಸಮಾವೇಶಗಳನ್ನು ಮಾಡಿದರೂ ರಾಜೇ ಅವರ ಆಡಳಿತವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಬಿಜೆಪಿಯ ಸ್ಥಾಪಕರಲ್ಲಿ ಒಬ್ಬರಾದ ಜಸ್ವಂತ್‌ ಸಿಂಗ್‌ ಅವರ ಮಗ ಶಿವ ಮಾನವೇಂದ್ರ ಸಿಂಗ್‌ ಅವರು ಕಳೆದ ತಿಂಗಳು ಕಾಂಗ್ರೆಸ್‌ ಸೇರಿದ್ದರು. ಅವರು ಬಿಜೆಪಿ ಶಾಸಕರಾಗಿದ್ದರು. ನಾಗೌರ್‌ನ ಬಿಜೆಪಿ ಶಾಸಕ ಹಬೀಬ್‌ ಉರ್‌ ರಹಮಾನ್‌ ಅವರೂ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದಾರೆ. 

ಕಣಕ್ಕಿಳಿಯಲು ಸಜ್ಜಾದ ಗೆಹ್ಲೋಟ್‌, ಪೈಲಟ್‌ 
ಜೈಪುರ:
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಅಲ್ಲಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್‌ ಪೈಲಟ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ ಹಿರಿಯ ಮುಖಂಡರು ಸ್ಪರ್ಧಿಸುವುದಿಲ್ಲ ಎಂಬ ವದಂತಿಗಳಿಗೆ ಇದರಿಂದ ತೆರೆ ಬಿದ್ದಿದೆ. 

ಗೆಹ್ಲೋಟ್‌ ಮತ್ತು ಪೈಲಟ್‌ ಅವರೇ ಈ ವಿಚಾರವನ್ನು ಪ್ರಕಟಿಸಿದ್ದಾರೆ. 

‘ಪಕ್ಷದ ಹೈಕಮಾಂಡ್‌ ಮತ್ತು ಗೆಹ್ಲೋಟ್‌ ಅವರ ಕೋರಿಕೆಯಂತೆ ವಿಧಾನಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ಪೈಲಟ್‌ ತಿಳಿಸಿದರು. 

ಗೆಹ್ಲೋಟ್‌ ಅವರು ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಅವರು ಈಗ ಪ್ರತಿನಿಧಿಸುತ್ತಿರುವ ಸರ್ದಾರ್‌ಪುರ ಕ್ಷೇತ್ರದಿಂದಲೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಪೈಲಟ್‌ ಅವರು ಅಜ್ಮೀರ್‌ ಅಥವಾ ದೌಸಾ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆ ಇದೆ. ಈ ಎರಡೂ ಪೈಲಟ್‌ ಪ್ರಭಾವ ಇರುವ ಕ್ಷೇತ್ರಗಳಾಗಿವೆ. 

ರಾಜಸ್ಥಾನದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಪಕ್ಷ ಇನ್ನೂ ಅಂತಿಮಗೊಳಿಸಿಲ್ಲ. ಸೀಟು ಹಂಚಿಕೆ ವಿಚಾರದಲ್ಲಿ ಹಿರಿಯ ಮುಖಂಡರ ನಡುವೆ ಭಿನ್ನಾಭಿಪ್ರಾಯ ಇರುವ ಕಾರಣ ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಗೆಹ್ಲೋಟ್‌ ಮತ್ತು ಪೈಲಟ್‌ ಬಣಗಳ ನಡುವೆ ತೀವ್ರ ಅಭಿಪ್ರಾಯ ಭೇದ ಇದೆ ಎನ್ನಲಾಗಿದೆ. 

ಗೆಹ್ಲೋಟ್‌, ಪೈಲಟ್‌ ಮತ್ತು ಸಿ.ಪಿ. ಜೋಶಿ ಅವರಂತಹ ಹಿರಿಯ ಮುಖಂಡರು ಸ್ಪರ್ಧಿಸಬೇಕೇ ಬೇಡವೇ ಎಂಬ ಬಗ್ಗೆ ಪಕ್ಷದಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಅಭ್ಯರ್ಥಿ ಪಟ್ಟಿ ವಿಳಂಬವಾಗಲು ಇದೂ ಒಂದು ಕಾರಣ ಎಂದು ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !