ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪಾತಿ-ಉಪ್ಪು: ಪತ್ರಕರ್ತನ ವಿರುದ್ಧ ಎಫ್‌ಐಆರ್‌ ದಾಖಲು

ಜಿಲ್ಲಾಧಿಕಾರಿ ಆರೋಪ; ಪತ್ರಕರ್ತನ ವಿರುದ್ಧ ಎಫ್‌ಐಆರ್‌
Last Updated 3 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಲಖನೌ: ಮಧ್ಯಾಹ್ನದ ಬಿಸಿಯೂಟದಲ್ಲಿ ವಿದ್ಯಾರ್ಥಿಗಳಿಗೆ ಚಪಾತಿ ಹಾಗೂ ಉಪ್ಪನ್ನು ನೀಡಿರುವುದನ್ನು ವಿಡಿಯೊ ಮಾಡಿದ್ದ ಪತ್ರಕರ್ತನ ವಿರುದ್ಧ ಮಿರ್ಜಾಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಸರ್ಕಾರದ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಸಂಚು ರೂಪಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ಮಿರ್ಜಾಪುರದ ಶಾಲೆಯೊಂದರಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಉಪ್ಪನ್ನು ನೆಂಜಿಕೊಂಡು ಚಪಾತಿ ತಿನ್ನುತ್ತಿದ್ದುದನ್ನು ಸ್ಥಳೀಯ ಪತ್ರಿಕೆಯ ಪ್ರತಿನಿಧಿ ಪವನ್‌ ಜೈಸ್ವಾಲ್‌ ಎಂಬುವರು ಚಿತ್ರೀಕರಿಸಿದ್ದರು. ಆ ವಿಡಿಯೊ ವೈರಲ್‌ ಆಗಿತ್ತು.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಅನುರಾಗ್‌ ಪಟೇಲ್‌, ‘ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಅಪಮಾನಿಸುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ. ಗ್ರಾಮ ಪಂಚಾಯಿತಿ ಮುಖ್ಯಸ್ಥರು ಸಂಚು ರೂಪಿಸಿದ್ದು, ಅವರ ಪ್ರತಿನಿಧಿಯೊಬ್ಬರೂ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಮಕ್ಕಳು ಊಟ ಮಾಡುತ್ತಿರುವುದನ್ನು ಚಿತ್ರೀಕರಿಸಿ ಅದನ್ನು ವೈರಲ್‌ ಮಾಡುವ ಉದ್ದೇಶದಿಂದ ಗ್ರಾಮದ ಮುಖ್ಯಸ್ಥರ ಪ್ರತಿನಿಧಿಯೇ ವರದಿಗಾರನನ್ನು ಶಾಲೆಗೆ ಆಹ್ವಾನಿದ್ದರು. ಅವರ ಮಾತುಕತೆಯ ಧ್ವನಿಮುದ್ರಣ ನಮ್ಮ ಬಳಿ ಇದೆ. ಹೀಗೆ ಮಾಡುವ ಬದಲು ಅವರು ಮಕ್ಕಳ ಬಿಸಿಯೂಟಕ್ಕೆ ತರಕಾರಿಯನ್ನು ಒದಗಿಸಬೇಕಾಗಿತ್ತು’ ಎಂದರು.

‘ಇದೊಂದು ಸಂಚು ಎಂದು ತಿಳಿದಿ ದ್ದರೂ ಜೈಸ್ವಾಲ್‌ ಅವರು ಚಿತ್ರೀಕರಣ ಮಾಡಿ ಅದನ್ನು ವೈರಲ್‌ ಮಾಡಲು ಒಪ್ಪಿಕೊಂಡಿದ್ದರು. ಅವರು ಮುದ್ರಣ ಮಾಧ್ಯಮದ ಪ್ರತಿನಿಧಿಯಾಗಿದ್ದರಿಂದ ಚಿತ್ರ ತೆಗೆದು ಪತ್ರಿಕೆಯಲ್ಲಿ ಮುದ್ರಿಸಬಹುದಾಗಿತ್ತು. ಅದನ್ನು ಅವರು ಮಾಡಿಲ್ಲ. ಬದಲಿಗೆ ವಿಡಿಯೊ ಚಿತ್ರೀ ಕರಿಸಿ ವೈರಲ್‌ ಮಾಡಿದರು’ ಎಂದರು.

ಸರ್ಕಾರದ ವಿರುದ್ಧ ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ ಅವರೂ ಧ್ವನಿಗೂಡಿಸಿದ್ದಾರೆ. ‘ಗ್ರಾಮದ ಮುಖ್ಯಸ್ಥರ ಪ್ರತಿನಿಧಿಯೋ ಅಥವಾ ಇನ್ಯಾರೋ... ಒಟ್ಟಿನಲ್ಲಿ ಸಂಚು ನಡೆದಿರುವಂತೆ ಕಾಣಿಸುತ್ತದೆ. ಸರ್ಕಾರ ಯಾರ ವಿರುದ್ಧವೂ ಪೂರ್ವಗ್ರಹ ಹೊಂದಿಲ್ಲ. ಸರ್ಕಾರವನ್ನು ಅಪಮಾನಿಸಲು ಮುಂದಾದರೆ ಅಂಥವರ ವಿರುದ್ಧ ಕ್ರಮ ನಡೆಯುತ್ತದೆ. ನಿರಪರಾಧಿಗೆ ಶಿಕ್ಷೆ ಆಗುವುದಿಲ್ಲ’ ಎಂದರು.

ಸಂಪಾದಕರ ಕೂಟ ಖಂಡನೆ

ಪತ್ರಕರ್ತನ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದನ್ನು ಖಂಡಿಸಿರುವ ಸಂಪಾದಕರ ಕೂಟವು, ‘ಎಚ್ಚರಿಕೆ ನೀಡಿದವರನ್ನೇ ಬಲಿಪಶು ಮಾಡುವುದಕ್ಕೆ ಇದು ಅತ್ಯುತ್ತಮ ಉದಾಹರಣೆ. ದೂರನ್ನು ಕೂಡಲೇ ಹಿಂಪಡೆಯಬೇಕು’ ಎಂದು ಉತ್ತರಪ್ರದೇಶ ಸರ್ಕಾರವನ್ನು ಒತ್ತಾಯಿಸಿದೆ.ಪತ್ರಕರ್ತನ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದನ್ನು ಖಂಡಿಸಿ ವಿವಿಧ ಪತ್ರಿಕೆಗಳ ನೂರಕ್ಕೂ ಹೆಚ್ಚು ಪತ್ರಕರ್ತರು ಮಂಗಳವಾರ ಮಿರ್ಜಾಪುರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ‘ಸತ್ಯವನ್ನು ಬಹಿರಂಗಪಡಿಸುವುದರಲ್ಲಿ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದರು.

‘ಮಿರ್ಜಾಪುರದ ಶಾಲೆಯಲ್ಲಿ ಮಕ್ಕಳಿಗೆ ಚಪಾತಿ ಜೊತೆಗೆ ಉಪ್ಪು ನೀಡಲಾಗುತ್ತದೆ ಎಂಬ ಮಾಹಿತಿ ನನಗೆ ಮೊದಲೇ ಲಭಿಸಿತ್ತು. ಅದನ್ನು ನಾನು ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಸತ್ಯವನ್ನು ತಿಳಿಯಲು ನಾನು ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ಉಪ್ಪಿನ ಜೊತೆಗೆ ಚಪಾತಿ ಸೇವಿಸುತ್ತಿದ್ದರು. ನಾನು ಅದನ್ನು ಚಿತ್ರೀಕರಿಸಿದ್ದೆ. ಪತ್ರಕರ್ತನೊಬ್ಬ ಏನನ್ನು ಮಾಡಬೇಕೋ ಅದನ್ನೇ ನಾನು ಮಾಡಿದ್ದೇನೆ’ ಎಂದು ಜೈಸ್ವಾಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT