ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಎನ್‌ಕೌಂಟರ್‌ ಪ್ರಕರಣ: ’ಸುಪ್ರೀಂ‘ಗೆ ಏಕಪಕ್ಷೀಯ ವರದಿ

Last Updated 12 ಡಿಸೆಂಬರ್ 2018, 13:51 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನಲ್ಲಿ ನಡೆದ 24 ಎನ್‌ಕೌಂಟರ್‌ಗಳ ಕುರಿತು ತನಿಖೆ ನಡೆಸಲು ರಚಿಸಿದ್ದ ಪರಿವೀಕ್ಷಣಾ ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌. ಬೇಡಿ ಅವರು ಅಂತಿಮ ವರದಿಯನ್ನು ಏಕಪಕ್ಷೀಯವಾಗಿ ಸಲ್ಲಿಸಿದ್ದಾರೆ ಎಂದು ಗುಜರಾತ್‌ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಬೇಡಿ ಅವರು ಅಂತಿಮ ವರದಿ ಸಲ್ಲಿಸುವ ಮೊದಲು ಸಮಿತಿಯ ಇತರ ಸದಸ್ಯರೊಂದಿಗೆ ಚರ್ಚಿಸಿಲ್ಲ ಎಂದೂ ಹೇಳಿದೆ.

2002 ಮತ್ತು 2006ರ ನಡುವೆ ನಡೆದಿರುವ ನಕಲಿ ಎನ್ನಲಾದ ಎನ್‌ಕೌಂಟರ್‌ಗಳ ತನಿಖೆಗಾಗಿ ಸಮಿತಿ ರಚಿಸಲಾಗಿತ್ತು.

ಕಳೆದ ಫೆಬ್ರುವರಿ 26ರಂದು ಸಮಿತಿಯು ಅಂತಿಮ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಈ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠವು, ’ಅಂತಿಮ ವರದಿಯ ಬಗ್ಗೆ ಇತರ ಸದಸ್ಯರ ಜೊತೆ ಚರ್ಚಿಸಿದ್ದೀರಾ?‘ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲು ಬೇಡಿ ಅವರಿಗೆ ಸೂಚಿಸಿದೆ.

ವರದಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಬೇಕೆನ್ನುವ ವಾದಕ್ಕೆ ಗುಜರಾತ್‌ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷರ್‌ ಮೆಹ್ತಾ ಆಕ್ಷೇಪ ‍ವ್ಯಕ್ತಪಡಿಸಿದ್ದಾರೆ.

’ವರದಿಯ ಕುರಿತು ಇತರ ಸದಸ್ಯರ ಬಳಿಯೂ ಚರ್ಚಿಸಿದ್ದೇನೆ ಎಂದು ಬೇಡಿ ಅವರು ತಿಳಿಸಿದರೆ ವಿಷಯ ಅಲ್ಲಿಗೆ ಮುಗಿಯುತ್ತದೆ‘ ಎಂದೂ ನ್ಯಾಯಪೀಠ ಹೇಳಿಸಿದೆ.

ಎನ್‌ಕೌಂಟರ್‌ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಪತ್ರಕರ್ತ ಬಿ.ಜಿ. ವರ್ಗೀಸ್‌ ಮತ್ತು ಗೀತರಚನೆಕಾರ ಜಾವಿದ್‌ ಅಖ್ತರ್ ಅವರು 2007ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವರ್ಗೀಸ್‌ ಅವರು 2014 ಡಿಸೆಂಬರ್‌ 30ರಂದು ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT