ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ಈಗ ಅಕ್ಷರಶಃ ಅಗ್ನಿಕುಂಡ

ಬೆಳಿಗ್ಗೆಯೇ ಆರಂಭವಾಗುವ ಬೆವರಿನ ಸ್ನಾನ, ತತ್ತರಿದ ಜನರು
Last Updated 28 ಮೇ 2018, 9:14 IST
ಅಕ್ಷರ ಗಾತ್ರ

ಸುರಪುರ: ಬೇಸಿಗೆಯ ಕೊನೆ ದಿನಗಳಲ್ಲಿ ಸೂರ್ಯ ತನ್ನ ಬಿಸಿಲಿನ ಪ್ರಖರತೆಯನ್ನು ನಗರದಲ್ಲಿ ಹೆಚ್ಚಿಸಿದ್ದಾನೆ. ಬೆಳಿಗ್ಗೆಯೇ ಜನರು ಬೆವರಿನ ಸ್ನಾನ ಮಾಡುವಂತಹ ತಾಪವಿದೆ. ದಿನವಿಡೀ ಜನರು ಬಿಸಿಲಿನ ಝಳಕ್ಕೆ ತತ್ತರಿಸುತ್ತಿದ್ದಾರೆ. ಮಧ್ಯಾಹ್ನ ಮಾರುಕಟ್ಟೆ ಪ್ರದೇಶವು ನಿರ್ಜನವಾಗಿರುತ್ತದೆ.

ದೊಡ್ಡ ಮನೆಯಲ್ಲಿ ವಾಸಿಸುವ ಜನರ ಪಾಡು ದೇವರೆ ಬಲ್ಲ. ಬಿಸಿಲಿನ ತಾಪದಿಂದ ಮಹಡಿ ಮೇಲಿರುವ ನೀರಿನ ಟ್ಯಾಂಕ್ ಕಾಯುವುದರಿಂದ ನಲ್ಲಿಯಲ್ಲಿ ಬಿಸಿ ನೀರು ಬರುತ್ತದೆ.

ವೃದ್ಧರು, ಮಹಿಳೆಯರು, ಚಿಕ್ಕ ಮಕ್ಕಳು ಬಿಸಿಲಿನ ಬೇಗೆ ತಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಶುಗಳ ಪಾಡು ಹೇಳತೀರದು. ಪ್ರಾಣಿಗಳು ಸಹ ಬಿಸಿಲಿಗೆ ಒದ್ದಾಡುತ್ತಿವೆ.

ಆಗಾಗ ಅಲ್ಪ ಸ್ವಲ್ಪ ಸುರಿಯುವ ಮಳೆ ಕಾದ ಬಾಣೆಲೆಗೆ ನೀರು ಸುರಿದಂತೆ ಆಗುತ್ತಿದೆ. ಮಳೆ ಬಂದು ನಿಂತ ನಂತರ ಭೂಮಿಯಿಂದ ಬರುವ ಬಿಸಿಲಿನ ಝಳ ಮುಖಕ್ಕೆ ರಾಚುತ್ತದೆ.

ಬಿಸಿಲು ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಮಧ್ಯಾಹ್ನದ ಸಮಯದಲ್ಲಿ ಹಮಾಲರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಜನರು ತಂಪು ಪಾನಿಯಗಳಿಗೆ ಮೊರೆ ಹೋಗಿದ್ದಾರೆ.

ಬಿಸಿಲಿನ ತಾಪಕ್ಕೆ ಹೆದರಿ ಗ್ರಾಮೀಣ ಪ್ರದೇಶದ ಜನರು ಕೂಡ ನಗರಕ್ಕೆ ಬರುತ್ತಿಲ್ಲ. ನಗರದ ಗ್ರಾಹಕರು ಬೆಳಿಗ್ಗೆ ಇಲ್ಲವೇ ಸಂಜೆ ಸಮಯದಲ್ಲಿ ಖರೀದಿ ಮಾಡುತ್ತಾರೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಕ್ಕಮಕ್ಕಳು, ದೊಡ್ಡವರು ಈಜಿನ ಮೊರೆ ಹೋಗುತ್ತಿದ್ದಾರೆ. ಇಲ್ಲಿನ ದೇವರಬಾವಿ, ದೊಡ್ಡಬಾವಿ, ಅಕ್ಕತಂಗಿಯರ ಬಾವಿ ಸೇರಿದಂತೆ ನಗರದ ಹಲವು ಬಾವಿಗಳಲ್ಲಿ ಈಜಾಡುವವರ ಸಂಖ್ಯೆ ಹೆಚ್ಚಾಗಿದೆ. ನಗರ ಏಳು ಸುತ್ತು ಬೆಟ್ಟಗಳಿಂದ ಆವೃತ್ತವಾಗಿದೆ. ಸಂಜೆಯ ತನಕ ಬಿಸಿಲಿನಿಂದ ಕಾಯುವ ಬೆಟ್ಟಗಳು ರಾತ್ರಿಯಿಡೀ ಬಿಸಿ ಗಾಳಿಯನ್ನು ಸೂಸುತ್ತವೆ. ಇದು ಕೂಡ ಸ್ಥಳೀಯರನ್ನು ಹೈರಾಣಾಗಿಸಿದೆ. ರಾತ್ರಿ ಮಹಡಿಯ ಮೇಲೆ ಮಲಗಿದರೂ ತೊಂದರೆ ತಪ್ಪುತ್ತಿಲ್ಲ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಲೇ ಇದೆ. ಹೀಗಾಗಿ ನಗರ ಅಕ್ಷರಶಃ ಅಗ್ನಿಕುಂಡವಾಗುತ್ತಿದೆ.

ಈ ಬಾರಿ ಬಿಸಿಲಿನ ಝಳ ಮತ್ತು ಬಿಸಿ ಗಾಳಿ ಅಧಿಕವಾಗಿದೆ. ನಗರಸಭೆ ಸಿಬ್ಬಂದಿ ದಿನಾಲೂ ಸಂಜೆ ಮುಖ್ಯ ರಸ್ತೆಗಳಲ್ಲಿ ನೀರು ಸಿಂಪಡಿಸಬೇಕು ಎಂದು  ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಒತ್ತಾಯಿಸುತ್ತಾರೆ.

**
ಬಿಸಿಲಿನಲ್ಲಿ ಹೊರಗೆ ತಿರುಗಾಡುವುದು ಅಪಾಯಕಾರಿ. ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆವರೆಗೆ ಮನೆಯಲ್ಲಿ ಇರುವುದು ಒಳ್ಳೆಯದು
- ಡಾ. ರಾಜಾ ವೆಂಕಪ್ಪನಾಯಕ, ತಾಲ್ಲೂಕು ಆರೋಗ್ಯಾಧಿಕಾರಿ

-ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT