ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಗಾಂಧಿ ‘ಮೂರನೇ ಪುತ್ರ‘ ಕಮಲ ನಾಥ್‌

Last Updated 17 ಡಿಸೆಂಬರ್ 2018, 9:46 IST
ಅಕ್ಷರ ಗಾತ್ರ

'ಕಾಂಗ್ರೆಸ್‌ ಮುಖಂಡ ಕಮಲ ನಾಥ್‌ಗೆ ನೀವು ಮತ ನೀಡಬೇಕೆಂದು ಕೇಳುತ್ತಿಲ್ಲ. ನನ್ನ ಮೂರನೇ ಮಗ ಕಮಲ ನಾಥ್‌ಗೆ ನಿಮ್ಮ ಮತ ನೀಡಿ ಎಂದು ಕೇಳುತ್ತಿದ್ದೇನೆ'– 1980ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇಳಿದ್ದ ಮಾತುಗಳಿವು.

ಛಿಂದವಾಲಾಡಾ ಕ್ಷೇತ್ರದಿಂದ ಕಮಲ ನಾಥ್ ಅವರನ್ನು ಇಂದಿರಾ ಗಾಂಧಿ ಕಣಕ್ಕಿಳಿಸಿ ಪ್ರಚಾರ ನಡೆಸಿದ್ದರು. ನೆಹರೂ ಕುಟುಂಬಕ್ಕೆ ಆಪ್ತರಾಗಿದ್ದ ಕಮಲ್, 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ದೆಹಲಿಯಲ್ಲಿ ಸಿಖ್ಖರ ಮೇಲೆ ನಡೆದ ದಾಳಿಯ ಹಿಂದೆ ಕಮಲ ನಾಥ್‌ ಅವರ ಕೈವಾಡ ಇತ್ತು ಎಂಬ ಆರೋಪವನ್ನು ಹೊತ್ತಿದ್ದಾರೆ. ಇಂದಿರಾಗಾಂಧಿ ಅವರ ಮೊಮ್ಮಗ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ಕಮಲ ನಾಥ್‌ಗೆ ನೀಡಿದ್ದಾರೆ.

72 ವರ್ಷ ವಯಸ್ಸಿನ ಕಮಲ ನಾಥ್‌ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ ಅವರು, ಉತ್ತರಖಾಂಡದ ಡೆಹರಾಡೂನ್‌ನಪ್ರತಿಷ್ಠಿತ ಡೂನ್‌ ಸ್ಕೂಲ್‌ನ ಹಳೆಯ ವಿದ್ಯಾರ್ಥಿ. ಕೋಲ್ಕತ್ತದ ಸಂತ ಕ್ಸೇವಿಯರ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.ಮಧ್ಯಪ್ರದೇಶದ ಛಿಂದವಾಡ ಲೋಕಸಭಾ ಕ್ಷೇತ್ರದಿಂದ ಕಮಲನಾಥ್‌ ಒಂಬತ್ತು ಬಾರಿ ಆಯ್ಕೆಯಾಗಿದ್ದಾರೆ.

2014ರಲ್ಲಿ 16ನೇ ಲೋಕಸಭೆಗೆ ಹಂಗಾಮಿ ಸ್ಪೀಕರ್‌ ಆಗಿ ಸೇವೆ ಸಲ್ಲಿಸಿದ್ದರು. ಅತ್ಯಂತ ಹಿರಿಯ ಸಂಸದ, ಮುಖಂಡರಾಗಿರುವ ಅವರು ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮ, ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಈ ವರ್ಷ ಮೇನಲ್ಲಿ ಮಧ್ಯಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ವಿಧಾನಸಭಾ ಚುನಾವಣೆಯ ನೇತೃತ್ವ ವಹಿಸಿದ್ದರು. 15 ವರ್ಷಗಳಿಂದ ಅಧಿಕಾರದಿಂದ ವಂಚಿತವಾಗಿದ್ದ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದರು. ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಮಲನಾಥ್ ಅವರನ್ನು ನೇಮಿಸಿದಾಗ ಪಕ್ಷವು ಗುಂಪುಗಾರಿಕೆಯಿಂದ ನಲುಗಿತ್ತು.

ಸದ್ದು ಮಾಡುತ್ತಿದೆ ಸಿಖ್‌ ವಿರೋಧಿ ದಂಗೆ

1984ರ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಸಜ್ಜನ್‌ ಕುಮಾರ್‌ಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ಸೋಮವಾರ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಕೈವಾಡವಿರುವ ಆರೋಪ ಹೊತ್ತಿರುವ ಕಮಲ ನಾಥ್‌ ಸಿಎಂ ಸ್ಥಾನಕ್ಕೇರುತ್ತಿರುವುದರ ವಿರುದ್ಧ ವಿರೋಧ ಪಕ್ಷದ ಮುಖಂಡರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಸಿಖ್‌ ವಿರೋಧಿ ಗಲಭೆಯ ಸಂಚುಕೋರರನ್ನು ಕಾಂಗ್ರೆಸ್‌ ಪಕ್ಷವು ರಕ್ಷಿಸುತ್ತಿದೆ ಎಂದು ಶಿರೋಮಣಿ ಅಕಾಲಿ ದಳದ ಮುಖಂಡರು ಆರೋಪಿಸಿದ್ದಾರೆ.ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿ ಕಮಲನಾಥ್‌ ವಿರುದ್ಧ ಬಲವಾದ ಸಾಕ್ಷ್ಯ ಇದೆ ಎಂದು ಎಎಪಿ ಮುಖಂಡ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಎಸ್‌. ಫೂಲ್ಕ ಈ ಹಿಂದೆ ಹೇಳಿದ್ದರು.ಫೂಲ್ಕ ಅವರು ಸಿಖ್‌ ವಿರೋಧಿ ಗಲಭೆ ಸಂತ್ರಸ್ತರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT