ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್‌ ವಿಜಯ್‌: ಕಾರ್ಗಿಲ್‌ ಕಲಿಗಳಿಗೆ ದೇಶದ ನಮನ

ಪಾಕಿಸ್ತಾನ ಆಕ್ರಮಿಸಿದ ಪ್ರದೇಶಗಳನ್ನು ವಶಪಡಿಸಿಕೊಂಡ ಕಾರ್ಯಾಚರಣೆಗೆ 20 ವರ್ಷ
Last Updated 26 ಜುಲೈ 2019, 19:50 IST
ಅಕ್ಷರ ಗಾತ್ರ

ನವದೆಹಲಿ: ನೆರೆ ದೇಶ ಪಾಕಿಸ್ತಾನದ ವಿರುದ್ಧ ಕಾರ್ಗಿಲ್‌ ಸಂಘರ್ಷದಲ್ಲಿ ಜಯ ಪಡೆದ 20ನೇ ವರ್ಷವನ್ನು ದೇಶದಾದ್ಯಂತ ಶುಕ್ರವಾರ ಸಂಭ್ರಮದಿಂದ ಆಚರಿಸಲಾಗಿದೆ. ಕಾಶ್ಮೀರದ ಹಲವು ಪರ್ವತಗಳನ್ನು ಕೈವಶ ಮಾಡಿಕೊಂಡ ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡಿದ ಯೋಧರ ತ್ಯಾಗ–ಬಲಿದಾನ ಮತ್ತು ಕೆಚ್ಚೆದೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

1999ರ ಜುಲೈ 26ರಂದು ಕಾರ್ಗಿಲ್‌ ಸಂಘರ್ಷ ‘ಆಪರೇಷನ್‌ ವಿಜಯ’ದ ಸಮಾಪ್ತಿಯನ್ನು ಘೋಷಿಸಲಾಗಿತ್ತು. ಕಾರ್ಗಿಲ್‌ನ ಮಂಜುಗಡ್ಡೆ ಶಿಖರಗಳ ಮೇಲೆ ಮೂರು ತಿಂಗಳು ನಡೆದ ಸಂಘರ್ಷದಲ್ಲಿ ಭಾರತದ 500ಕ್ಕೂ ಹೆಚ್ಚು ಸೈನಿಕರು ಜೀವ ತೆತ್ತಿದ್ದರು.

ಕಾರ್ಗಿಲ್‌ ಹುತಾತ್ಮರಿಗೆ ನಮನ ಸಲ್ಲಿಸುವ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವ ವಹಿಸಿದರು. ಸೈನಿಕರ ಧೈರ್ಯ, ಬದ್ಧತೆಯನ್ನು ನಾಯಕರು ಕೊಂಡಾಡಿದರು.

ಯೋಧರ ತ್ಯಾಗ ಮತ್ತು ದಿಟ್ಟತನವು ದೇಶದ ಗಡಿಗಳನ್ನು ಕಾಪಾಡಿದೆ ಎಂದು ರಾಜನಾಥ್ ಹೇಳಿದ್ದಾರೆ.ಭಾರತದ ಜತೆಗೆ ಪಾಕಿಸ್ತಾನವು ಪೂರ್ಣ ಪ್ರಮಾಣದ ಅಥವಾ ಸೀಮಿತವಾದ ಯಾವುದೇ ರೀತಿಯ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಹಾಗಾಗಿ ಪರೋಕ್ಷ ಯುದ್ಧ ಮಾಡುತ್ತಿದೆ ಎಂದು ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್‌ ಹೇಳಿದ್ದಾರೆ.

ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ವಾಯುಪಡೆ ಮುಖ್ಯಸ್ಥ ಬಿ.ಎಸ್‌. ಧನೋಆ, ನೌಕಾಪಡೆ ಮು‌ಖ್ಯಸ್ಥ ಕರಮ್‌ವೀರ್‌ ಸಿಂಗ್‌ ಅವರು ಜಮ್ಮು ಮತ್ತು ಕಾಶ್ಮೀರದ ದ್ರಾಸ್‌ನಲ್ಲಿನ ಕಾರ್ಗಿಲ್‌ ಯುದ್ಧ ಸ್ಮಾರದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ರಾಷ್ಟ್ರಪತಿ ಕೋವಿಂದ್‌ ಅವರು ದ್ರಾಸ್‌ನಲ್ಲಿನ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಅವರು ಅಲ್ಲಿಗೆ ತಲುಪುವುದು ಸಾಧ್ಯವಾಗಲಿಲ್ಲ. ಹಾಗಾಗಿ, ಕಾಶ್ಮೀರದ ಬಾದಾಮಿ ಬಾಗ್‌ನಲ್ಲಿರುವ ಸೇನೆಯ 15ನೇ ಕೋರ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪಾಕಿಸ್ತಾನದ ಅತಿಕ್ರಮಣಕ್ಕೆ ಭಾರತದ ಸೇನೆಯು ‘ಆಪರೇಷನ್‌ ವಿಜಯ್‌’ ಮೂಲಕ ಪ್ರತಿಕ್ರಿಯೆ ನೀಡಿತ್ತು. ಅತ್ಯಂತ ದುರ್ಗಮ ಮತ್ತು ಎತ್ತರದ ಪ್ರದೇಶದಲ್ಲಿ ನಡೆದ ಯುದ್ಧ ಇದಾಗಿತ್ತು.

ಭಾರತದ ವಾಯುಪಡೆಯು ‘ಆಪರೇಷನ್‌ ಸಫೇದ್‌ ಸಾಗರ್‌’ ಹೆಸರಿನಲ್ಲಿ ಕಾರ್ಯಾಚರಣೆಗೆ ಹೆಗಲುಕೊಟ್ಟಿತು. ಅದೇ ಮೊದಲ ಬಾರಿಗೆ ಶತ್ರು ಬಂಕರ್‌ಗಳ ಮೇಲೆ ನಿಖರ ಗುರಿಯ ಬಾಂಬ್‌ಗಳನ್ನು ಬಳಸಲಾಯಿತು.ಮಿರಾಜ್‌–2000 ಯುದ್ಧ ವಿಮಾನಗಳು ನಿರ್ಣಾಯಕ ಪಾತ್ರ ವಹಿಸಿದವು. ಟೈಗರ್‌ ಹಿಲ್‌ನಲ್ಲಿದ್ದ ವೈರಿ ಬಂಕರ್‌ಗಳ ಮೇಲೆ ದಾಳಿ ನಡೆಸಿದವು.

‘ಮಿರಾಜ್‌ 2000 ವಿಮಾನಗಳು ಸಂಘರ್ಷದ ಗತಿಯನ್ನೇ ಬದಲಿಸಿದವು’ ಎಂದು ವಾಯುಪಡೆಯ ಅಧಿಕಾರಿ ಗ್ರೂಪ್‌ ಕ್ಯಾಪ್ಟನ್‌ ಅನುಪಮ್‌ ಬ್ಯಾನರ್ಜಿ ಹೇಳಿದ್ದಾರೆ. ಕಾರ್ಗಿಲ್‌ ಸಂಘರ್ಷದಲ್ಲಿ ಇವರು ಹಲವು ದಾಳಿ ನಡೆಸಿದ್ದರು.

ಧನೋಆ ಅವರು ಕಾರ್ಗಿಲ್‌ ಸಂಘರ್ಷದ ಸಂದರ್ಭದಲ್ಲಿ 17 ಸ್ಕ್ವಾಡ್ರನ್‌ನ ಮುಖ್ಯಸ್ಥರಾಗಿದ್ದರು. ಮಿರಾಜ್‌–2000
ಯುದ್ಧ ವಿಮಾನಗಳನ್ನು ಬಳಸುವ ನಿರ್ಧಾರವು ಇಡೀ ಚಿತ್ರಣವನ್ನು ಭಾರತದ ಪರವಾಗಿ ತಿರುಗಿಸಿತು ಎಂದು ಅವರು ಹೇಳಿದ್ದಾರೆ.

ಸೇನೆಯ ಹೇಳಿಕೆ

ಜುಲೈ 26 ಕಾರ್ಗಿಲ್‌ ವಿಜಯ ದಿನದ ಹೆಸರಿನಲ್ಲಿ ಅಮರವಾಗಿದೆ. ಇದು, 1999ರ ಮೇ–ಜುಲೈಯಲ್ಲಿ ನಡೆದ ಕಾರ್ಗಿಲ್‌ ಸಂಘರ್ಷದಲ್ಲಿ ದೇಶದ ಭವ್ಯ ಗೆಲುವಿನ ಸಂಕೇತವಾಗಿದೆ. ದ್ರಾಸ್‌, ಕಕ್ಸರ್‌, ಬಟಾಲಿಕ್‌ ಮತ್ತು ಟುರ್ಟಕ್‌ ವಲಯಗಳಲ್ಲಿ ಭಾರತೀಯ ಸೇನೆಯ ಯೋಧರು ದಿಟ್ಟತನದಿಂದ ಹೋರಾಡಿದ್ದರು. ನಮ್ಮ ಸೈನಿಕರ ಕೆಚ್ಚು ಮತ್ತು ದಿಟ್ಟತನ ಹಾಗೂ ಹುತಾತ್ಮರ ಬಲಿದಾನವನ್ನು ಸ್ಮರಿಸುತ್ತೇವೆ

ಯೋಧನಿಗೆ ಡಬಲ್‌ ಪ್ರಮೋಷನ್‌

ಚಂಡಿಗಡ: ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡು ‘ವೀರಚಕ್ರ’ ಪಡೆದಿದ್ದ, ಸತ್ಪಾಲ್‌ ಸಿಂಗ್‌ ಅವರಿಗೆ ‘ಡಬಲ್‌ ಪ್ರಮೋಷನ್‌’ ನೀಡಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಸತ್ಪಾಲ್‌ ಸಿಂಗ್‌ ಅವರು ಪ್ರಸಕ್ತ ಪಂಜಾಬ್‌ನಲ್ಲಿ ಪೊಲೀಸ್‌ ಇಲಾಖೆಯ ಸಂಚಾರ ವಿಭಾಗದಲ್ಲಿ ಹಿರಿಯ ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡುತ್ತಿದ್ದಾರೆ.

‘ಸೇನೆಯಿಂದ ನಿವೃತ್ತರಾದ ಬಳಿಕ, 2010ರಲ್ಲಿ ಸತ್ಪಾಲ್‌ ಅವರು ಪಂಜಾಬ್‌ ಪೊಲೀಸ್‌ ಇಲಾಖೆಗೆ ಸೇರಿದ್ದರು. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಅವರು ತೋರಿದ ಸಾಹಸವನ್ನು ಮನಗಂಡು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಸತ್ಪಾಲ್‌ ಅವರಿಗೆ ಎರಡು ಬಡ್ತಿಗಳನ್ನು ನೀಡಲು ಸೂಚಿಸಿದರು. ಈಗ ಅವರಿಗೆ ‘ಸಹಾಯಕ ಸಬ್‌ಇನ್‌ಸ್ಪೆಕ್ಟರ್‌’ ಹುದ್ದೆ ನೀಡಲಾಗಿದೆ’ ಎಂದು ಇಲಾಖೆಯ ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ.

ಸತ್ಪಾಲ್‌ ಅವರನ್ನು ಪೊಲೀಸ್‌ ಇಲಾಖೆಗೆ ನೇಮಕ ಮಾಡುವಾಗ ಅಂದಿನ ಎಸ್‌ಎಡಿ–ಬಿಜೆಪಿ ಮೈತ್ರಿ ಸರ್ಕಾರವು ಅವರ ಸೇವೆಗೆ ಸರಿಯಾದ ಗೌರವ ನೀಡಿರಲಿಲ್ಲ ಎಂದು ಅಮರಿಂದರ್‌ ಸಿಂಗ್‌ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT