ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತೀಕಾರ..ಪ್ರತೀಕಾರ..ಯುದ್ಧ ಎಂದೆಲ್ಲ ಬಡಬಡಿಸುವ ಟಿವಿ ಚಾನೆಲ್‌ ಮುಖಗಳೇ ನಿಲ್ಲಿ!

ಕಾರ್ಗಿಲ್‌ ಸಮರ ವೀರನ ಮಾತು
Last Updated 19 ಫೆಬ್ರುವರಿ 2019, 9:19 IST
ಅಕ್ಷರ ಗಾತ್ರ

ಫೆಬ್ರುವರಿ 14ರಂದು ಪುಲ್ವಾಮಾದ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದರು. ದೇಶದಾದ್ಯಂತ ಹುತಾತ್ಮರನ್ನು ನೆನೆದು ಜನರು ಕಂಬನಿ ಮಿಡಿದರು. ನ್ಯೂಸ್‌ ಚಾನೆಲ್‌ಗಳು, ಪತ್ರಿಕೆಗಳೂ ಸುದ್ದಿ ಪ್ರಕಟಿಸಿದವು, ಅದರೊಂದಿಗೆ ’ಪ್ರತೀಕಾರ’ದ ಹಗೆಯನ್ನು ತುಂಬುವ ಹಾಗೂ ಪ್ರಚೋದಿಸುವಂತ ಮಾತುಗಳೂ ಬಿತ್ತರವಾದವು. ‘ಯುದ್ಧ...ಯುದ್ಧ...ಪ್ರತೀಕಾರ...’ ಎಂದು ನ್ಯೂಸ್‌ ಚಾನೆಲ್‌ಗಳ ಆ್ಯಂಕರ್‌ಗಳು ಕೂಗಿದರು. ಇಂಥ ಕೂಗಾಟ ನಡೆಸಿರುವವರಿಗೆ ಸೇನೆಯ ಹಲವು ವೀರರು ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗ ಪತ್ರ ಬರೆದು– ’ಸೇನೆಗೆ ಯಾವಾಗ ಏನು ಮಾಡಬೇಕೆಂಬುದು ತಿಳಿದಿದೆ’ ಎಂದು ಕಠಿಣವಾಗಿಯೇ ಹೇಳಿದರು. ಇವರಲ್ಲಿ ಕಾರ್ಗಿಲ್‌ ಸಮರ ವೀರ ಮೇಜರ್‌ ದೇವೇಂದರ್‌ ಪಾಲ್‌ ಸಿಂಗ್‌ ಸಹ ಒಬ್ಬರು. ಭದ್ರತಾ ಪಡೆಗಳು ನಡೆಸುವ ಕಾರ್ಯಾಚರಣೆ ವೇಳೆ ಮಾಧ್ಯಮಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ದೇವೇಂದರ್‌ ಪಾಲ್‌ ಸಿಂಗ್‌ ಅವರೊಂದಿಗೆನ್ಯೂಸ್‌ಲಾಂಡ್ರಿ ಮಾತುಕತೆ ನಡೆಸಿದೆ. ಅದರ ಪ್ರಮುಖಾಂಶಗಳು ಇಲ್ಲಿವೆ;

ಮೇಜರ್‌ ದೇವೇಂದರ್‌ ಪಾಲ್‌ ಸಿಂಗ್‌
ಮೇಜರ್‌ ದೇವೇಂದರ್‌ ಪಾಲ್‌ ಸಿಂಗ್‌

* ಫೆ.14ರಂದು ನಡೆದ ಪುಲ್ವಾಮಾ ದಾಳಿಯಂತಹ ಘಟನೆಯ ನಂತರ ಮಾಧ್ಯಮಗಳ ನಡೆ ಹೇಗಿರಬೇಕು?

ಯಾವುದೇ ಜವಾಬ್ದಾರಿಯುತ ಮಾಧ್ಯಮ ಸಂಸ್ಥೆಯು ಮಸಾಲೆ ಬೆರೆಸದೆ ವಾಸ್ತವವನ್ನು ಜನರ ಮುಂದಿಡಬೇಕು. ನಡೆದಿರುವುದನ್ನು ವರದಿ ಮಾಡುವುದು ಮಾಧ್ಯಮಗಳ ಕರ್ತವ್ಯ, ಇಲ್ಲಿ ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಸತ್ಯವನ್ನು ತಿಳಿಸದೆಯೇ ಮಸಾಲೆ ಸೇರಿಸುತ್ತ ಹೋದರೆ, ಅದರಿಂದ ಯಾರೊಬ್ಬರಿಗೂ ಪ್ರಯೋಜನವಾಗುವುದಿಲ್ಲ.

* ಸಮರ ವೀರನಾದ ನಿಮ್ಮ ಪ್ರಕಾರ, ಭದ್ರತಾ ಪಡೆಗಳ ವಿಚಾರದಲ್ಲಿ ಮಾಧ್ಯಮಗಳ ವರದಿ ಹೇಗಿವೆ?

ಭದ್ರತಾ ಪಡೆಗಳ ಬಗ್ಗೆ ಮಾಧ್ಯಮಗಳ ವರದಿಗಳು ಕೆಲವು ಸಲ ಬಾಲಿಶವಾಗಿರುತ್ತವೆ. ಹೆಚ್ಚು ವೀಕ್ಷಕರನ್ನು ತಲುಪ ಬೇಕು, ಟಿಆರ್‌ಪಿ ಹೆಚ್ಚಿಸಿಕೊಳ್ಳಬೇಕು ಹಾಗೂ ಅದಕ್ಕಾಗಿ ನಿಗದಿತ ಕಾರ್ಯವನ್ನು ಬಹುಬೇಗ ಪೂರೈಸುವ ಒತ್ತಡದಲ್ಲಿರುತ್ತಾರೆ. ಇಲ್ಲಿ ನೈತಿಕತೆ ಹೊಂದಿರುವುದು ಬಹುಮುಖ್ಯವಾಗಿ ತೋರುತ್ತದೆ. ನೀವು ದೇಶದ ರಕ್ಷಣಾ ವ್ಯವಸ್ಥೆಯ ಬಗೆಗೆ, ದೇಶದ ಆಂತರಿಕ ಭದ್ರತೆ ವಿಚಾರವಾಗಿ, ಭದ್ರತಾ ಪಡೆಗಳ ಕುರಿತು ವರದಿ ಮಾಡುತ್ತಿರುವಾಗ; ವಿಷಯವನ್ನು ಸಾರ್ವಜನಿಕರಿಗೆ ಮಾತ್ರವೇ ಪ್ರಸ್ತಾರ ಮಾಡುತಿರುವುದಿಲ್ಲ. ಉಗ್ರ ಚಟುವಟಿಕೆಗಳನ್ನು ನಡೆಸಲು ಕಾದಿರುವವರನ್ನೂ ಪರಿಣಾಮಕಾರಿಯಾಗಿ ತಲುಪುತ್ತಿರುತ್ತದೆ. ಇಂಥ ಸಂದರ್ಭಗಳಲ್ಲಿ ಮಾಧ್ಯಮ ಸಂಸ್ಥೆಗಳು ದೇಶದ ಹಿತವನ್ನು ಮುನ್ನೆಲೆಗೆ ತಂದು ಜಾಗೂರಕತೆ ವಹಿಸಬೇಕು. ಎಲ್ಲವನ್ನೂ ಮರೆತು ಟಿಆರ್‌ಪಿಗಾಗಿ ದುಡುಕುತನ ಪ್ರದರ್ಶಿಸಿದರೆ, ಅದರಿಂದ ಎಲ್ಲರಿಗೂ ಹಾನಿಯಾಗುವ ಸಂಭವವೇ ಹೆಚ್ಚಿರುತ್ತದೆ.

* ಪತ್ರಕರ್ತರು ದೇಶದ ರಕ್ಷಣೆ, ಭದ್ರತೆ ಸಂಬಂಧಿತ ವಿಚಾರಗಳಲ್ಲಿ ಯಾವ ರೀತಿ ಎಚ್ಚರಿಕೆವಹಿಸಬೇಕೆಂದು ಸಲಹೆ ನೀಡುತ್ತೀರಿ?

ವಿವೇಚನೆ ಮುಖ್ಯ, ಯಾವುದೇ ವಿಷಯದಲ್ಲಿ ಅನುಮಾನಗಳಿದ್ದರೆ ರಕ್ಷಣಾ ವಕ್ತಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ಭದ್ರತಾ ಪಡೆಗಳು ಹಾಗೂ ಸಾರ್ವಜನಿಕ ಮಾಧ್ಯಮಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ರಕ್ಷಣಾ ವಕ್ತಾರ ಪ್ರಮುಖ ಪಾತ್ರವಹಿಸುತ್ತಾರೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಯಲ್ಲಿ ಅನುಮಾನಗಳಿದ್ದರೆ, ಮಾಹಿತಿ ಅಗತ್ಯವಿದ್ದರೆ ಕೇಳಿ ಪಡೆಯಬಹುದು.

ಕೆಲವು ಸಲ ಜಾಗರೂಕರಾಗಿರುವುದು ಹಾಗೂ ನಿರ್ಬಂಧಿಸಿಕೊಳ್ಳುವುದು ಅತಿರೇಕದ ವರದಿಗಳಿಗಿಂತ ಸೂಕ್ತ. ರಕ್ಷಣಾ ವ್ಯವಸ್ಥೆ ಕುರಿತು ವರದಿ ಮಾಡುವಾಗ ದೇಶವನ್ನು ಪರಮೋಚ್ಛವಾಗಿ ಪರಿಗಣಿಸುವುದು ಉತ್ತಮ. ಇಡೀ ದೇಶಕ್ಕೆ ಒಗ್ಗಟ್ಟಿನ ಅವಶ್ಯಕತೆ ಇರುವಾಗ, ಒಗ್ಗಟ್ಟು ಒಡೆಯುವ ಪ್ರಚೋದಕಾರಿ ಸಂಗತಿಗಳನ್ನು ಅಲಕ್ಷಿಸುವುದು ಹಾನಿಕಾರಕವಲ್ಲ. ಹೆಚ್ಚು ಜನರನ್ನು ಸೆಳೆಯುವ ಸ್ವಹಿತಾಸಕ್ತಿಯಿಂದಾಗಿ ದೇಶದ ಭದ್ರತೆಗೆ ಕೆಡುಕಾಗದಿರಲಿ.

* ನಿಮ್ಮ ಸೇವಾವಧಿಯಲ್ಲಿ ಕಂಡಂತೆ ಮಾಧ್ಯಮಗಳ ವರದಿಗಳು ಬದಲಾವಣೆ ಕಂಡಿದೆಯೇ?

ಕಾಲ ಉರುಳಿದಂತೆ ಮಾಧ್ಯಮಗಳು ಪ್ರಬುದ್ಧತೆ ಹೊಂದಿವೆ. ವರದಿಗಾರಿಕೆಗೆ ಪ್ರವೇಶಿಸುತ್ತಿರುವ ಯುವ ಜನರು ತಪ್ಪುಗಳನ್ನು ಮಾಡುತ್ತಿದ್ದಾರೆ. ಅವರು ಮಾಧ್ಯಮದ ಹೊಸ ಸಾಮರ್ಥ್ಯವನ್ನು ಹೊಂದುವ ಜತೆಗೆ ಸಮಯ ಮಿತಿಯ ಒತ್ತಡದಲ್ಲಿ ಸಿಲುಕಿರುತ್ತಾರೆ. ನಿಮ್ಮ ಸಾಮರ್ಥ್ಯದಿಂದಾಗಿ ಆಂತರಿಕ ಶಾಂತಿ ಮತ್ತು ರಾಷ್ಟ್ರ ರಕ್ಷಣೆಯಲ್ಲಿರುವ ಯೋಧರಿಗೆ ಹಾನಿ ಉಂಟಾಗಬಹುದು ಎಂಬುದನ್ನು ಮರೆಯುತ್ತಿದ್ದೀರಿ.

ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ನಂತರದಲ್ಲಿ ದೇಶದಲ್ಲಿ ಕೇಳಿಬರುತ್ತಿರುವ ’ಯುದ್ಧ’, ’ಪ್ರತೀಕಾರ’ದ ಮಾತಿಗಳನ್ನು ಖಂಡಿಸುತ್ತ ಫೇಸ್‌ಬುಕ್‌ನಲ್ಲಿಫೆಬ್ರುವರಿ 15ರಂದು ಸಿಂಗ್‌ ಅಭಿಪ್ರಾಯ ಪ್ರಕಟಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳು, ಮಾಧ್ಯಮ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಯುದ್ಧ ತೆರುವ ಬೆಲೆಯ ಅಂದಾಜಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT