ಭಾನುವಾರ, ಮಾರ್ಚ್ 7, 2021
20 °C
ಮುಂಬೈ ಪಂಚತಾರಾ ಹೋಟೆಲ್‌ ಪ್ರವೇಶಿಸಲು ಸಾಧ್ಯವಾಗದೆ ವಾಪಸಾದ ಶಿವಕುಮಾರ್

ಶಾಸಕರ ಭೇಟಿಗೆ ಡಿಕೆಶಿ ಪಟ್ಟು: ಪೊಲೀಸರ ತಡೆ; ಬರಿಗೈಲಿ ಬಂದ ‘ಟ್ರಬಲ್‌ ಶೂಟರ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕರ್ನಾಟಕದ ಮೈತ್ರಿ ಸರ್ಕಾರದ ರಾಜಕೀಯ ಬಿಕ್ಕಟ್ಟು ಮುಂಬೈನ ರಿನೈಸಾನ್ಸ್‌ ಪಂಚತಾರಾ ಹೋಟೆಲ್‌ ಮುಂದೆ ಬುಧವಾರ ಬೀದಿ ನಾಟಕದ ಸ್ವರೂಪ ಪಡೆದುಕೊಂಡಿತು.

ಕಾಂಗ್ರೆಸ್‌ನ ‘ಟ್ರಬಲ್‌ ಶೂಟರ್‌’ ಎಂದೇ ಖ್ಯಾತರಾಗಿರುವ, ಕರ್ನಾಟಕದ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ರಿನೈಸಾನ್ಸ್‌ ಹೋಟೆಲ್‌ ಹೊರಭಾಗದಿಂದ ಮುಂಬೈ ಪೊಲೀಸರು ಮಧ್ಯಾಹ್ನ 2.30ಕ್ಕೆ ವಶಕ್ಕೆ ಪಡೆದರು.

ಕರ್ನಾಟಕದ ರಾಜೀನಾಮೆ ನೀಡಿರುವ ಶಾಸಕರು ತಂಗಿರುವ ಹೋಟೆಲ್‌ನೊಳಗೆ ಪ್ರವೇಶಿಸಲು ಶಿವಕುಮಾರ್‌ ಪ್ರಯತ್ನಿಸಿದರು. ಅವರನ್ನು ಪೊಲೀಸರು ತಡೆದರು. ಸುಮಾರು ಆರು ತಾಸು, ಸುರಿಯುವ ಮಳೆಯಲ್ಲಿಯೇ ಹೋಟೆಲ್‌ನ ಹೊರಗೆ ನಿಂತಿದ್ದ ಅವರನ್ನು ಪೊಲೀಸರು ವಶಕ್ಕೆತೆಗೆದುಕೊಂಡರು. ಅವರನ್ನು ಭೇಟಿಯಾಗಲು ಬಂದ ಕಾಂಗ್ರೆಸ್‌ ಮುಖಂಡರಾದ ಮಿಲಿಂದ್‌ ದೇವ್ರಾ ಮತ್ತು ನಸೀಮ್‌ ಖಾನ್‌ ಅವರನ್ನೂ ವಶಕ್ಕೆ ಪಡೆಯಲಾಯಿತು. 

ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗಲೇ ಶಿವಕುಮಾರ್‌ ಅವರನ್ನು ಪೊಲೀಸರು ಎಳೆದೊಯ್ದರು. ಮೂವರು ಮುಖಂಡರನ್ನು ಬಿ.ಕೆ.ಸಿ ಪೊಲೀಸ್‌ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. 

ಇದಕ್ಕೂ ಮೊದಲು ಹೋಟೆಲ್‌ನ ಮುಂದೆ ಬೃಹತ್‌ ನಾಟಕವೇ ನಡೆಯಿತು. ಬುಧವಾರ ನಸುಕಿನಲ್ಲಿಯೇ ಮುಂಬೈ ತಲುಪಿದ್ದ ಶಿವಕುಮಾರ್‌ ಅವರು 8.20ರ ಹೊತ್ತಿಗೆ ರಿನೈಸಾನ್ಸ್‌ ಹೋಟೆಲ್‌ನ ಹೊರಭಾಗ ತಲುಪಿದ್ದರು. ಗೇಟಿನಲ್ಲಿಯೇ ಅವರನ್ನು ಪೊಲೀಸರು ತಡೆದರು. ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ ಎಂದು ಅವರು ಹೇಳಿದರೂ ಪೊಲೀಸರು ಅದಕ್ಕೆ ಕಿವಿಗೆ ಹಾಕಿಕೊಳ್ಳಲಿಲ್ಲ. 

ಶಿವಕುಮಾರ್‌ ಅವರು ಹೋಟೆಲ್‌ಗೆ ಬಂದರೆ ತಮಗೆ ಜೀವಬೆದರಿಕೆ ಇದೆ ಎಂದು ಅಲ್ಲಿ ತಂಗಿರುವ ಕಾಂಗ್ರೆಸ್‌–ಜೆಡಿಎಸ್‌ನ ಹತ್ತು ಶಾಸಕರು ದೂರು ಕೊಟ್ಟಿದ್ದಾರೆ. ಹಾಗಾಗಿ ಹೋಟೆಲ್‌ನ ಒಳಗೆ ಹೋಗಲು ಅವಕಾಶ ನೀಡಲಾಗದು ಎಂದು ಅವರಿಗೆ ಪೊಲೀಸರು ತಿಳಿಸಿದರು. 

‘ಎಲ್ಲವೂ ಸಾಧ್ಯವಾಗುವ ಕಲೆಯೇ ರಾಜಕಾರಣ’ ಎಂದ ಶಿವಕುಮಾರ್‌, ತಮ್ಮನ್ನು ಒಳಗೆ ಬಿಡುವಂತೆ ಪೊಲೀಸರ ಮನವೊಲಿಸಲು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ಹಾಗಾಗಿ, ಪೋವೈನಲ್ಲಿರುವ ಹೋಟೆಲ್‌ನ ಹೊರಭಾಗದಲ್ಲಿಯೇ
ಅವರು ಠಿಕಾಣಿ ಹೂಡಿದರು. ರಿನೈಸಾನ್ಸ್‌ ಹೋಟೆಲ್‌ ಈಗ ಕರ್ನಾಟಕ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಕೇಂದ್ರ ಸ್ಥಾನವಾಗಿ ಬದಲಾಗಿದೆ. 

ತಾವು ಶಾಂತಿಯ ಉದ್ದೇಶದಿಂದ ಬಂದಿರುವುದಾಗಿಯೂ ತಮ್ಮಿಂದ ಬಂಡಾಯ ಶಾಸಕರಿಗೆ ಯಾವುದೇ ಬೆದರಿಕೆ ಇಲ್ಲ. ಹಾಗಿದ್ದರೂ ತಮ್ಮಿಂದ ಭದ್ರತೆಗೆ ಬೆದರಿಕೆ ಇದೆ ಎಂದು ಹೋಟೆಲ್‌ನ ಆಡಳಿತ ಹೇಳುತ್ತಿರುವುದಾಗಿಯೂ ಶಿವಕುಮಾರ್‌ ಹೇಳಿದರು.

‘ನಾನು ಯಾವುದೇ ಆಯುಧ ತಂದಿಲ್ಲ ಅಥವಾ ಜತೆಗೆ ಭದ್ರತಾ ಸಿಬ್ಬಂದಿಯೂ ಇಲ್ಲ. ಜತೆಗಿರುವುದು ಹೃದಯ ಮಾತ್ರ. ನನಗೆ ಗೆಳೆಯರನ್ನು ಭೇಟಿಯಾಗಿ ಅವರ ಜತೆಗೆ ಕಾಫಿ ಕುಡಿಯಬೇಕಿದೆ. ಇಡೀ ಬಿಕ್ಕಟ್ಟಿನ ಹಿಂದೆ ಬಿಜೆಪಿ ಇಲ್ಲ ಎಂದಾದರೆ ನಾವು ಒಳಗೆ ಹೋಗುವುದನ್ನು ತಡೆಯುತ್ತಿರುವುದು ಯಾಕೆ’ ಎಂದು ಅವರು ಪ್ರಶ್ನಿಸಿದರು. 

ಅವರಿಗೆ ಪೊಲೀಸರೇ ಕಾಫಿ ತರಿಸಿಕೊಟ್ಟರು. 

ಕ್ಷಣದಿಂದ ಕ್ಷಣಕ್ಕೆ ಹೋಟೆಲ್‌ ಹೊರಭಾಗದಲ್ಲಿ ನಡೆಯುತ್ತಿದ್ದ ವಿದ್ಯಮಾನ ಕಳೆಗಟ್ಟುತ್ತಲೇ ಹೋಯಿತು. ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರು ಅಲ್ಲಿ ಜಮಾಯಿಸಿದರು. ‘ಶಿವಕುಮಾರ್‌ ವಾಪಸ್‌ ಹೋಗಿ’ ಎಂದು ಒಂದು ಗುಂಪು ಘೋಷಣೆ ಕೂಗಿದರೆ ಅದಕ್ಕೆ ಪ್ರತಿ ಘೋಷಣೆಯೂ ಕೇಳಿ ಬಂತು. 

ಹೋಟೆಲ್‌ನಲ್ಲಿ ತಂಗಿರುವ ಶಾಸಕರನ್ನು ಭೇಟಿಯಾಗದೆ ವಾಪಸಾಗುವ ಪ್ರಶ್ನೆಯೇ ಇಲ್ಲ ಎಂದು ಶಿವಕುಮಾರ್‌ ಪಟ್ಟು ಹಿಡಿದು ಕೂತರು. ಅಷ್ಟು ಹೊತ್ತಿಗೆ ಮಿಲಿಂದ್‌ ಮತ್ತು ನಸೀಮ್‌ ಅವರೂ ಅಲ್ಲಿಗೆ ಬಂದರು. 

ಈ ಮುಖಾಮುಖಿಯ ನಡುವೆಯೇ, ಶಿವಕುಮಾರ್‌ ಅವರಿಗೆ ಕಾಯ್ದಿರಿಸಿದ್ದ ಕೊಠಡಿಯನ್ನು ರದ್ದು ಮಾಡಲಾಗಿದೆ ಎಂಬ ಇ–ಮೇಲ್ ಸಂದೇಶ ಹೋಟೆಲ್‌ನಿಂದ ಕೊಠಡಿ ಕಾಯ್ದಿರಿಸಿದ್ದ ಸಂಸ್ಥೆಗೆ ಹೋಯಿತು. ‘ತುರ್ತು ಸ್ಥಿತಿ’ಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸಮಜಾಯಿಷಿ ನೀಡಲಾಗಿತ್ತು. 

‘ನನ್ನ ವಿರುದ್ಧದ ಘೋಷಣೆಗೆ ಬೆದರುವುದಿಲ್ಲ... ಭದ್ರತೆಗೆ ಬೆದರಿಕೆ ಎಂಬ ಕಾರಣ ಕೊಟ್ಟು ಹೋಟೆಲ್‌ಗೆ ಹೋಗಲು ಬಿಡುತ್ತಿಲ್ಲ. ಮಹಾರಾಷ್ಟ್ರ ಸರ್ಕಾರದ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ನನ್ನಲ್ಲಿ ಯಾವುದೇ ಆಯುಧ ಇಲ್ಲ’ ಎಂದು ಶಿವಕುಮಾರ್‌ ಮತ್ತೊಮ್ಮೆ ಹೇಳಿದರು. 

‘ಮುಂಬೈಯಲ್ಲಿ ಒಳ್ಳೆಯ ಸರ್ಕಾರ ಇದೆ. ಮುಖ್ಯಮಂತ್ರಿ (ದೇವೇಂದ್ರ ಫಡಣವೀಸ್‌) ನನ್ನ ಒಳ್ಳೆಯ ಗೆಳೆಯ. ನಾನು ಇಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ. ನನ್ನ ಗೆಳೆಯರು ಇಲ್ಲಿದ್ದಾರೆ. ಕೆಲವು ಸಮಸ್ಯೆಗಳು ಇವೆ. ಇಲ್ಲಿ ಇರುವ ನನ್ನ ಗೆಳೆಯರನ್ನು ಬಿಜೆಪಿ ನಾಯಕರು ಭೇಟಿಯಾಗಬಹುದು ಎಂದಾದದರೆ ನಾನು ಯಾಕೆ ಭೇಟಿ ಮಾಡಬಾರದು’ ಎಂದು ಅವರು ಪ್ರಶ್ನಿಸಿದರು. 

ವಿಲಾಸರಾವ್‌ ದೇಶಮುಖ್‌ ಮುಖ್ಯ ಮಂತ್ರಿಯಾಗಿದ್ದಾಗ ಮಹಾರಾಷ್ಟ್ರದ 120 ಶಾಸಕರನ್ನು ಕರೆಸಿ ಇರಿಸಿಕೊಂಡಿದ್ದೆ’ ಎಂದೂ ಅವರು ಹೇಳಿದರು. 

‘ಮುಂಬೈ ಪೊಲೀಸ್‌ ಅಥವಾ ಬೇರೆ ಯಾವುದೇ ಭದ್ರತಾ ಪಡೆಯನ್ನು ನಿಯೋಜಿಸಲಿ. ನಾವು ಗೆಳೆಯರನ್ನು ಭೇಟಿ ಮಾಡಿಯೇ ಹೋಗುತ್ತೇವೆ’ ಎಂದು ಮುಂಬೈಗೆ ತಲುಪಿದ ಕೂಡಲೇ ಅವರು ಹೇಳಿದ್ದರು. 

ಅವರ ಜತೆಗೆ, ಸಚಿವ ಜಿ.ಟಿ. ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ ಮತ್ತು ಸಿ.ಎನ್‌. ಬಾಲಕೃಷ್ಣ ಇದ್ದರು.

* ಮುಂಬೈ ಪೊಲೀಸರು ನನ್ನನ್ನು ವಾಪಸ್‌ ಕಳುಹಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲು ನನಗೆ ಇಷ್ಟವಿಲ್ಲ. ನನ್ನನ್ನು ಗಡಿಪಾರು ಮಾಡಿದ್ದಾರೆ. ಇರಲಿ...

ಡಿ.ಕೆ. ಶಿವಕುಮಾರ್‌, ಸಚಿವ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು