ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ನಾಶ: ಮುಂಚೂಣಿಯಲ್ಲಿ ಕರ್ನಾಟಕ

ನಾಸಾ ಚಿತ್ರ ಆಧರಿಸಿ ಗ್ಲೋಬಲ್‌ ಫಾರೆಸ್ಟ್‌ ವಾಚ್‌ ವರದಿ
Last Updated 8 ಮೇ 2019, 20:01 IST
ಅಕ್ಷರ ಗಾತ್ರ

ನವದೆಹಲಿ: 2016ರಿಂದ 2018ರವರೆಗಿನ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರತಿ ವರ್ಷ ಸರಾಸರಿ ಮೂರು ಸಾವಿರ ಹೆಕ್ಟೇರ್‌ನಷ್ಟು ಅರಣ್ಯ ನಾಶವಾಗಿದೆ.

ನಾಸಾದವರು ಉಪಗ್ರಹದ ಸಹಾಯದಿಂದ ತೆಗೆದ ಚಿತ್ರಗಳ ಆಧಾರದಲ್ಲಿಅಮೆರಿಕದ ಸರ್ಕಾರೇತರ ಸಂಸ್ಥೆ ‘ವರ್ಲ್ಡ್‌ ರಿಸೋರ್ಸಸ್‌ ಇನ್‌ಸ್ಟಿಟ್ಯೂಟ್‌’ನ (ಡಬ್ಲ್ಯುಆರ್‌ಐ) ಅಂಗ ಸಂಸ್ಥೆ ‘ಗ್ಲೋಬಲ್‌ ಫಾರೆಸ್ಟ್‌ ವಾಚ್‌’ ವಿಶ್ಲೇಷಣೆ ನಡೆಸಿ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

2001ರಿಂದ ಈವರೆಗಿನ (2007ನೇ ವರ್ಷವನ್ನು ಬಿಟ್ಟು) ಸರಾಸರಿ ಅರಣ್ಯ ನಾಶಕ್ಕೆ ಹೋಲಿಸಿದರೆ ಈ ಮೂರು ವರ್ಷಗಳಲ್ಲಿ ಆಗಿರುವ ಹಾನಿಯು ಅತಿ ಹೆಚ್ಚಿನದ್ದಾಗಿದೆ.

ರಾಜ್ಯದಲ್ಲಿ 2018ರಲ್ಲಿ 3,537 ಹೆಕ್ಟೇರ್‌, 2017ರಲ್ಲಿ 3,060 ಹೆಕ್ಟೇರ್‌ ಹಾಗೂ 2016ರಲ್ಲಿ 3,310 ಹೆಕ್ಟೇರ್‌ನಷ್ಟು ಅರಣ್ಯ ನಾಶವಾಗಿದೆ. 2007ನೇ ವರ್ಷ ಬಿಟ್ಟರೆ, 2001ರಿಂದೀಚೆಗೆ ಯಾವತ್ತೂ ಒಂದೇ ವರ್ಷದಲ್ಲಿ 3000 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ನಾಶವಾದ ಉದಾಹರಣೆ ಇಲ್ಲ. 2007ರಲ್ಲಿ 4,145 ಹೆಕ್ಟೇರ್ ಅರಣ್ಯ ನಾಶವಾಗಿತ್ತು.

ಅಂಕಿಅಂಶಗಳ ಪ್ರಕಾರ ಈ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯನಾಶವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2016ರಿಂದ 18ರ ಅವಧಿಯಲ್ಲಿ ಕ್ರಮವಾಗಿ 1,109 ಹೆಕ್ಟೇರ್‌, 955 ಹೆಕ್ಟೇರ್‌ ಹಾಗೂ 1,072 ಹೆಕ್ಟೇರ್‌ ಅರಣ್ಯ ನಾಶವಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಈ ಪ್ರಮಾಣ ಕ್ರಮವಾಗಿ 740 ಹೆಕ್ಟೇರ್‌, 857 ಹೆಕ್ಟೇರ್‌ ಹಾಗೂ 665 ಹೆಕ್ಟೇರ್‌ ಆಗಿದೆ. ಅರಣ್ಯ ನಾಶಕ್ಕೆ ಕಾರಣಗಳೇನು ಎಂಬ ಬಗ್ಗೆ ಡಬ್ಲ್ಯುಆರ್‌ಐನವರು ಯಾವುದೇ ವಿವರಣೆ ನೀಡಿಲ್ಲ. ಆ ಅಂಕಿ ಅಂಶಗಳ ವಿಶ್ಲೇಷಣೆಗೆ ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕವೊಂದೇ ಅಲ್ಲ, ಈ ಅವಧಿಯಲ್ಲಿ ನೆರೆಯ ಕೇರಳದಲ್ಲೂ ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ಕೇರಳದಲ್ಲಿ ಈ ಮೂರು ವರ್ಷಗಳಲ್ಲಿ ಕ್ರಮವಾಗಿ 7,187 ಹೆಕ್ಟೇರ್‌, 9,722 ಹೆಕ್ಟೇರ್‌ ಹಾಗೂ 6,273 ಹೆಕ್ಟೇರ್‌ ಅರಣ್ಯ ನಾಶವಾಗಿದೆ. ಈ ರಾಜ್ಯದಲ್ಲಿ 2001ರಿಂದೀಚೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ನಡೆದಿರಲಿಲ್ಲ.

ಕಳೆದ ಮೂರು ವರ್ಷಗಳಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆಯಾಗಿ 30 ಸಾವಿರ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ನಾಶವಾಗಿದೆ. ಈ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಆಗಿರುವ ನಾಶದ ಪ್ರಮಾಣ ಕಡಿಮೆ.

ಅರಣ್ಯ ನಾಶಕ್ಕೆ ಮರಗಳನ್ನು ಕಡಿದಿರುವುದೊಂದೇ ಕಾರಣವಲ್ಲ. ಕಾಳ್ಗಿಚ್ಚು, ರೋಗ, ಚಂಡಮಾರುತದಿಂದಾದ ಹಾನಿ ಮುಂತಾದ ಕಾರಣಗಳೂ ಇರಬಹುದು ಎಂದು ಡಬ್ಲ್ಯುಆರ್‌ಐ ವಿಶ್ಲೇಷಿಸಿದೆ. ಆದರೆ ಗಣಿಗಾರಿಕೆಯು ಅರಣ್ಯ ನಾಶಕ್ಕೆ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದೂ ಹೇಳಿದೆ. ಅತ್ಯಂತ ಹಸಿರಾದ ಪ್ರದೇಶವಾಗಿದ್ದ ಭಾರತದ ಈಶಾನ್ಯ ಭಾಗವು ಸತತ ಗಣಿಗಾರಿಕೆಯಿಂದಾಗಿ ತನ್ನ ಹಸಿರನ್ನು ಕಳೆದುಕೊಳ್ಳುತ್ತಿದೆ.

ಕಳೆದ 18 ವರ್ಷಗಳಲ್ಲಿ ಈ ಭಾಗದಲ್ಲಿ ಭಾರಿ ಪ್ರಮಾಣಗಳಲ್ಲಿ ಮರಗಳನ್ನು ಕಡಿಯಲಾಗಿದೆ. ಈಚಿನ ಐದು ವರ್ಷಗಳಲ್ಲಿ ಹಾನಿಯ ಪ್ರಮಾಣವು ದ್ವಿಗುಣಗೊಂಡಿದೆ ಎಂದು ವರದಿ ಹೇಳಿದೆ. ಈಶಾನ್ಯ ಭಾಗದಲ್ಲಿ ಅತಿ ವೇಗದಲ್ಲಿ ಅರಣ್ಯ ನಾಶವಾಗುತ್ತಿದೆ. ಇತರ ರಾಜ್ಯಗಳು ಪ್ರತಿ ವರ್ಷ 15 ಸಾವಿರದಿಂದ 30 ಸಾವಿರ ಹೆಕ್ಟೇರ್‌ನಷ್ಟು ಅರಣ್ಯವನ್ನು ಕಳೆದುಕೊಳ್ಳುತ್ತಿದ್ದರೆ, 2017ರಲ್ಲಿ ಮಿಜೋರಾಂ ರಾಜ್ಯವೊಂದರಲ್ಲೇ 41,000 ಹೆಕ್ಟೇರ್‌ ಅರಣ್ಯ ನಾಶವಾಗಿದೆ. ಭಾರತದಲ್ಲಿ ಒಟ್ಟಾರೆಯಾಗಿ ಕಳೆದ ಐದು ವರ್ಷಗಳಲ್ಲಿ 1.20 ಲಕ್ಷ ಹೆಕ್ಟೇರ್‌ನಷ್ಟು ಅರಣ್ಯ ನಾಶವಾಗಿದೆ. 2009ರಿಂದ 2013ರ ಅವಧಿಗೆ ಹೋಲಿಸಿದರೆ ಈ ಪ್ರಮಾಣವು ಶೇ 36ರಷ್ಟು ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT