ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತಾರಪುರ ಕಾರಿಡಾರ್‌ ಕಾಮಗಾರಿಗೆ ಶಿಲಾನ್ಯಾಸ

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ
Last Updated 26 ನವೆಂಬರ್ 2018, 20:19 IST
ಅಕ್ಷರ ಗಾತ್ರ

ಗುರುದಾಸಪುರ, (ಪಂಜಾಬ್‌): ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್‌ ನಿರ್ಮಿಸುವ ಭಾರತದ ಗಡಿಯೊಳಗಿನ ಕಾಮಗಾರಿಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್‌ ಅವರು ತಮ್ಮ ಕೊನೆಯ 18 ವರ್ಷಗಳನ್ನು ಕರ್ತಾರಪುರದಲ್ಲೇ ಕಳೆದಿದ್ದರು. ಧರ್ಮ ಸ್ಥಾಪನೆಗಾಗಿ ಅವರು ಸಿಖ್ಖರನ್ನು ಒಗ್ಗೂಡಿಸಿದ ಸ್ಥಳವೂ ಇದೇ ಆಗಿದೆ. ಭಾರತದ ಪಂಜಾಬ್‌ನ ಗಡಿಯಿಂದ 3 ಕಿ.ಮೀ.ನಷ್ಟು ದೂರದಲ್ಲಿ ರಾವಿ ನದಿಯ ದಡದ ಪಾಕಿಸ್ತಾನದ ನೆಲದಲ್ಲಿ ಈ ಗುರುದ್ವಾರವಿದೆ.‌

‘ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು. ಕೇಂದ್ರ ಸಚಿವರಾದ ಹರ್‌ಸಿಮ್ರತ್‌ ಕೌರ್ ಬಾದಲ್‌, ಹರ್ದೀಪ್‌ ಸಿಂಗ್‌ ಪುರಿ ಮತ್ತು ವಿಜಯ್ ಸಂ‍ಪ್ಲಾ ಇದ್ದರು.ಪಾಕಿಸ್ತಾನದ ಗಡಿಯೊಳಗಿನ ಕಾಮಗಾರಿಗೆ ಇದೇ 28ರಂದು ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಪಾಕ್‌ಗೆ ಅಮರಿಂದರ್‌ ಎಚ್ಚರಿಕೆ
‘‍‍ಪಂಜಾಬ್‌ನಲ್ಲಿನ ಭಯೋತ್ಪಾದನಾ ಚಟುವಟಿಕೆಗಳು ಮತ್ತು ಗಡಿಯಲ್ಲಿ ಭಾರತೀಯ ಸೈನಿಕರ ಹತ್ಯೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರೇ ಕಾರಣ‌’ ಎಂದು ಗುಡುಗಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ‘ಭಾರತ ದೊಡ್ಡ ಸೇನೆಯನ್ನು ಹೊಂದಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ’ ಎಂದು ಎಚ್ಚರಿಕೆ ನೀಡಿದರು.

ಕರ್ತಾರಪುರ ಕಾರಿಡಾರ್‌ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಕೂಡ ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ಸೇನೆಯಲ್ಲಿ ಬಾಜ್ವಾ ನನಗಿಂತ ಅತ್ಯಂತ ಕಿರಿಯರು. ಗಡಿಯಲ್ಲಿ ಸೈನಿಕರನ್ನು ಕೊಲ್ಲುವುದನ್ನು ಸೇನೆ ಕಲಿಸುತ್ತದೆಯೇ? ಆದರೂ, ನೀವು ಮರೆಯಲ್ಲಿ ನಿಂತು ಗುಂಡು ಹಾರಿಸಿ ಸೈನಿಕರನ್ನು ಕೊಂದಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಮೃತಸರದಲ್ಲಿ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ಇತ್ತೀಚೆಗೆ ಗ್ರೆನೇಡ್ದಾಳಿ ನಡೆಸಿ ಮೂವರನ್ನು ಕೊಲ್ಲಲಾಗಿದೆ. ಇದು ಸೇನಾ ನೀತಿಯೇ? ಅಲ್ಲ, ಇದು ಹೇಡಿತನ’ ಎಂದು 76 ವರ್ಷದ ಸಿಂಗ್‌ ಜರಿದರು.

‘ನಾವು ಶಾಂತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಇದರ ನಡುವೆಯೂ ಭಾರತ ದೊಡ್ಡ ಸೇನೆಯನ್ನು ಹೊಂದಿದೆ ಮತ್ತು ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂಬುದನ್ನು ಬಾಜ್ವಾ ಅರ್ಥಮಾಡಿಕೊಳ್ಳಬೇಕು’ ಎಂದು ಪುನರುಚ್ಚರಿಸಿದರು.

ಆಕ್ಷೇಪ: ‘ಕರ್ತಾರಪುರ ಕಾರಿಡಾರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳಲು ಉದ್ದೇಶಿಸಿರುವ ತಮ್ಮ ಸಂಪುಟದ ಸಚಿವ ನವಜೋತ್ ಸಿಂಗ್ ಸಿಧು ನಿರ್ಧಾರಕ್ಕೆ ಅಮರಿಂದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಭದ್ರತಾ ಪಡೆಗಳು ಮುಗ್ಧ ಭಾರತೀಯರನ್ನು ಕೊಲ್ಲುತ್ತಿರುವುದನ್ನು ಸಹಿಸದವರು ಆ ದೇಶಕ್ಕೆ ಭೇಟಿ ನೀಡುವುದಿಲ್ಲ ಎಂದು ಸಿಂಗ್‌ ಹೇಳಿದ್ದಾರೆ.

ಯುದ್ಧ ಕೈದಿಗಳ ಕುಟುಂಬಗಳಲ್ಲಿ ಭರವಸೆ
ಜಮ್ಮು (ಪಿಟಿಐ):
ಪಾಕಿಸ್ತಾನದ ಜೈಲುಗಳಲ್ಲಿ ಯುದ್ಧ ಕೈದಿಗಳಾಗಿರುವವರ ಕುಟುಂಬ ಸದಸ್ಯರಲ್ಲಿ ಕರ್ತಾರಪುರ ಕಾರಿಡಾರ್ ಯೋಜನೆ ಹೊಸ ಭರವಸೆ ಮೂಡಿಸಿದೆ. 1971ರಿಂದ ಪಾಕಿಸ್ತಾನದ ಜೈಲಿನಲ್ಲಿರುವ ತಮ್ಮ ಪತಿ ಸೇರಿದಂತೆ 54 ಭಾರತೀಯರ ಬಿಡುಗಡೆಗಾಗಿ ಹೋರಾಟ ನಡೆಸುತ್ತಿರುವ ನಿರ್ಮಲಾ ಕೌರ್, ‘ತಂದೆಗಾಗಿ ನನ್ನ ಮಕ್ಕಳು 47 ವರ್ಷಗಳಿಂದ ಕಾಯುತ್ತಿದ್ದಾರೆ. ಉಭಯ ದೇಶಗಳ ನಡುವೆ ವಿಶ್ವಾಸಾರ್ಹತೆ ಮೂಡಿಸುವ ನಿಟ್ಟಿನಲ್ಲಿ, ನಮ್ಮೆಲ್ಲರ ನಿರೀಕ್ಷೆಯನ್ನು ಸಾಕಾರಗೊಳಿಸುವುದಕ್ಕಿಂತ ಉತ್ತಮವಾದುದು ಬೇರೇನೂ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT