ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರವನ್ನು ಅಪ್ಪ ಟೀಕಿಸಿದ್ದಕ್ಕೆ ನನಗೆ ಸಮನ್ಸ್‌: ಕಾರ್ತಿ

Last Updated 9 ಮೇ 2019, 18:31 IST
ಅಕ್ಷರ ಗಾತ್ರ

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. 2014ರಲ್ಲಿ ಇದೇ ಕ್ಷೇತ್ರದಿಂದ ಕಾರ್ತಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಇಲ್ಲಿಂದ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿದ್ದವು. ಆದರೆ ಅವರು ವಯನಾಡ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಇಲ್ಲಿಂದ ಪುನಃ ಕಾರ್ತಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಕ್ಷೇತ್ರ ಹಾಗೂ ಕಾಂಗ್ರೆಸ್‌ ಗೆಲುವಿನ ಸಾಧ್ಯತೆಗಳ ಬಗ್ಗೆ ಕಾರ್ತಿ ಅವರು ‘ಪ್ರಜಾವಾಣಿ’ ಜೊತೆ ಮಾತುಕತೆ ನಡೆಸಿದ್ದಾರೆ.

* ಡಿಎಂಕೆ– ಕಾಂಗ್ರೆಸ್‌ ಮೈತ್ರಿಯಿಂದ ನಿಮ್ಮ ನಿರೀಕ್ಷೆಗಳೇನು?

ಕಾಂಗ್ರೆಸ್‌ ಮತ್ತು ಡಿಎಂಕೆ ಮೈತ್ರಿ ಮಾಡಿಕೊಂಡಾಗಲೆಲ್ಲ ತಮಿಳುನಾಡಿನಲ್ಲಿ ಭಾರಿ ಯಶಸ್ಸು ಸಿಕ್ಕಿದೆ. 1996 ಮತ್ತು 2004ರ ಚುನಾವಣೆಯಲ್ಲಿ ಇದನ್ನು ಕಂಡಿದ್ದೇವೆ. ಶಿವಗಂಗಾ ಕ್ಷೇತ್ರದಲ್ಲಿ ಅದೇ ಪ್ರದರ್ಶನ ಈ ಬಾರಿ ಮರುಕಳಿಸಲಿದೆ.

* ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರ ಮತಗಳ ಧ್ರುವೀಕರಣ ಮಾಡುತ್ತಿದೆಯೇ?

ಧ್ರುವೀಕರಣವನ್ನು ಕಾಂಗ್ರೆಸ್‌ ಮಾಡುತ್ತಿಲ್ಲ. ಬಿಜೆಪಿ ಬಗ್ಗೆ ಅಲ್ಪಸಂಖ್ಯಾತರಲ್ಲಿ ಭಯ ಇರುವುದರಿಂದ ಮತಗಳು ತಾವಾಗಿಯೇ ಧ್ರುವೀಕರಣಗೊಳ್ಳುತ್ತಿವೆ. ದೇಶದ ಏಕೈಕ ಮತ್ತು ನಿಜವಾದ ಜಾತ್ಯತೀತ ಪಕ್ಷದ ಪರವಾಗಿ ಅವರು ಒಗ್ಗಟ್ಟಾಗುತ್ತಿದ್ದಾರೆ.

*ನಿಮ್ಮ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಬಿಜೆಪಿಯ ಎಚ್‌. ರಾಜಾ ಹಾಗೂ ಟಿಟಿವಿ ದಿನಕರನ್‌ ಅವರ ಪಕ್ಷದ ವಿ. ಪಾಂಡಿ ನಡುವೆ ನಿಮ್ಮ ನಿಜವಾದ ಪ್ರತಿಸ್ಪರ್ಧಿ ಯಾರು?

ಇಲ್ಲಿ ವ್ಯಕ್ತಿ ಗೌಣ. ಪಕ್ಷ ಅಥವಾ ಮೈತ್ರಿಯನ್ನು ನೋಡಿಕೊಂಡು ಜನರು ಮತ ಹಾಕುತ್ತಾರೆ. ವಿವಾದಾಸ್ಪದ ವ್ಯಕ್ತಿಯಾಗಿದ್ದರೆ ಆತ ಪಕ್ಷಕ್ಕೆ ಮುಳುವಾಗುತ್ತಾನೆ. ದಲಿತರು ಮತ್ತು ಅಲ್ಪ ಸಂಖ್ಯಾತರು ನಮ್ಮ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ನೋಡಿದರೆ ನಮ್ಮ ಗೆಲುವು ಸ್ಪಷ್ಟ.

* ಈ ಕ್ಷೇತ್ರವನ್ನು ಏಳು ಬಾರಿ ಪ್ರತಿನಿಧಿಸಿದ್ದ ನಿಮ್ಮ ತಂದೆ ಚಿದಂಬರಂ ಇಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂಬ
ಆರೋಪವಿದೆಯಲ್ಲ?

ದೊಡ್ಡ ವ್ಯಕ್ತಿಯಿಂದ ದೊಡ್ಡ ಮಟ್ಟದ ನಿರೀಕ್ಷೆಗಳಿರುತ್ತವೆ. ಅವರು ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ
27 ಪುಟಗಳ ಕಿರು ಪುಸ್ತಕ ಬಿಡುಗಡೆ ಮಾಡಿದ್ದೇವೆ. ಇಲ್ಲಿಗೆ ಬಿಎಚ್‌ಇಎಲ್‌ ಕಾರ್ಖಾನೆ ತಂದಿದ್ದೇವೆ, ಅರೆಸೇನಾ ಪಡೆಯ ತರಬೇತಿ ಕೇಂದ್ರ ಆರಂಭಿಸಿದ್ದೇವೆ. ಇನ್ನೂ ಹಲವು ಕೆಲಸಗಳು ಆಗಿವೆ. ಚುನಾವಣೆಯ ನಂತರ ಇನ್ನೂ ಅನೇಕ ಕೆಲಸ ಮಾಡಲಿದ್ದೇವೆ.

*ನಿಮ್ಮ ವಿರುದ್ಧ ಹಲವು ಪ್ರಕರಣಗಳು ಇವೆ. ಎಐಎಡಿಎಂಕೆ ಹಾಗೂ ಬಿಜೆಪಿ ನಿಮ್ಮನ್ನು ‘ಭ್ರಷ್ಟ’ ಎಂದು ಕರೆಯುತ್ತಿವೆ. ನಿಮ್ಮ ಪ್ರತಿಕ್ರಿಯೆ?

ನನ್ನ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಸಮನ್ಸ್‌ ಕೊಟ್ಟಮಾತ್ರಕ್ಕೆ ಆರೋಪಿ ಅಥವಾ ಅಪರಾಧಿ ಎಂದು ಅರ್ಥವಲ್ಲ. ನನ್ನ ತಂದೆ ಬಿಜೆಪಿಯ ಕಟು ಟೀಕಾಕಾರರಾಗಿದ್ದಾರೆ. ಆದ್ದರಿಂದ ಈ ಸರ್ಕಾರ ತನ್ನ ಅಧಿಕಾರವನ್ನು ಬಳಸಿಕೊಂಡು ನನಗೆ ಎಲ್ಲ ರೀತಿಯ ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ. ನನ್ನ ವಿರುದ್ಧ ಯಾವುದೇ ಕೇಸ್‌ ಇಲ್ಲ ಎಂದು ನಾನು ನಾಮಪತ್ರದ ಜೊತೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿದ್ದೇನೆ.

* ಯಾವುದೇ ಆಧಾರವಿಲ್ಲದೆ ನಿಮಗೆ ಸಮನ್ಸ್‌ ಜಾರಿ ಮಾಡಿದ್ದಾರೆ ಎಂಬುದು ನಿಮ್ಮ ಅಭಿಪ್ರಾಯವೇ?

ನನ್ನ ವಿರುದ್ಧ ಆರೋಪಗಳನ್ನು ಹೊರಿಸಿ, ನಿರಪರಾಧಿ ಎಂದು ಸಾಬೀತುಪಡಿಸಲು ನನಗೆ ಅವಕಾಶ ಕೊಟ್ಟಿದ್ದರೆ ಅದನ್ನು ದೂರು ಎನ್ನಬಹುದು. ದೇಶದ ಯಾವುದೇ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಅಂಥ ದೂರುಗಳಿಲ್ಲ. ವಿರೋಧ ಪಕ್ಷದಲ್ಲಿದ್ದು, ಆಡಳಿತ ಪಕ್ಷದ ವಿರುದ್ಧ ಧ್ವನಿ ಎತ್ತುತ್ತಿದ್ದರೆ, ಧ್ವನಿ ಅಡಗುವವರೆಗೂ ನಮ್ಮ ವಿರುದ್ಧ ತನಿಖೆ ಮಾಡಿಸುತ್ತಲೇ ಇರಬಹುದಾದ ಸ್ಥಿತಿ ದೇಶದಲ್ಲಿದೆ. ನನ್ನ ತಂದೆ ಸರ್ಕಾರದ ವಿರುದ್ಧ ಮಾಡುವ ಪ್ರತಿ ಟ್ವೀಟ್‌ಗೆ ಪ್ರತಿಯಾಗಿ ನನಗೆ ಒಂದು ಸಮನ್ಸ್‌ ಜಾರಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT