ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿ ಕಿವಿ ಹಿಂಡಿದ ‘ಸುಪ್ರೀಂ’

ವಿದೇಶಕ್ಕೆ ಹೋಗಲು ಒಪ್ಪಿಗೆ: ₹10 ಕೋಟಿ ಭದ್ರತಾ ಠೇವಣಿಗೆ ಸೂಚನೆ
Last Updated 30 ಜನವರಿ 2019, 18:47 IST
ಅಕ್ಷರ ಗಾತ್ರ

ನವದೆಹಲಿ: ಐಎನ್ಎಕ್ಸ್‌ ಮೀಡಿಯಾ ಮತ್ತು ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣಗಳ ತನಿಖೆಗೆ ಸಹಕರಿಸದ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ವಿದೇಶ ಪ್ರವಾಸಕ್ಕೆ ಷರತ್ತು ಬದ್ಧ ಅನುಮತಿ ನೀಡಿದೆ.

ಟೋಟಸ್‌ ಟೆನಿಸ್‌ ಲಿಮಿಟೆಡ್‌ ಆಯೋಜಿಸಿರುವ ಅಂತರರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮತ್ತು ಸ್ಪೇನ್‌ಗೆ ತೆರಳಲು ಅನುಮತಿ ನೀಡುವಂತೆ ಕಾರ್ತಿ ಮನವಿ ಸಲ್ಲಿಸಿದ್ದರು.

ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ₹10 ಕೋಟಿ ಠೇವಣಿ ಇಡುವಂತೆ ಸೂಚಿಸಿದೆ. ವಿದೇಶದಿಂದ ಮರಳಿದ ಬಳಿಕ ಹಣ ಹಿಂದಿರುಗಿಸುವುದಾಗಿ ಹೇಳಿದೆ.

‘₹10 ಕೋಟಿ ಠೇವಣಿ ಮೊತ್ತ ಬಹಳವಾಯಿತು’ ಎಂದು ಕಾರ್ತಿ ಪರ ವಕೀಲರು ಹೇಳಿದರು. ‘ಹಾಗಾದರೆ, ಅದರ ಮುಂದೆ ಇನ್ನೊಂದು ಸೊನ್ನೆ ಸೇರಿಸಬೇಕೆ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಖಾರವಾಗಿ ಪ್ರಶ್ನಿಸಿದರು.

ಕಾರ್ತಿ ಅವರು ಮಾಜಿ ಟೆನಿಸ್‌ ಆಟಗಾರರಾಗಿದ್ದು, ಸದ್ಯ ಪಂದ್ಯಾವಳಿ ನಿರ್ವಹಣೆ ಹೊಣೆ ಹೊತ್ತಿದ್ದಾರೆ ಎಂದು ವಕೀಲರು ಕೋರ್ಟ್‌ಗೆ ತಿಳಿಸಿದರು.

ತನಿಖೆಗೆ ಸಹಕರಿಸುವಂತೆ ತಾಕೀತು: ಐಎನ್ಎಕ್ಸ್‌ ಮಿಡಿಯಾ ಮತ್ತು ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣಗಳ ತನಿಖೆಗೆ ಸಹಕರಿಸುವಂತೆ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ಕಾರ್ತಿ ಅವರಿಗೆ ತಾಕೀತು ಮಾಡಿದೆ.

ತನಿಖೆಗೆ ಸಹಕರಿಸದ ಕಾರ್ತಿ ಅವರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್, ಕಾನೂನು ಜತೆ ಆಟವಾಡದಂತೆ ಎಚ್ಚರಿಕೆ ನೀಡಿದೆ. ಒಂದು ವೇಳೆ ತನಿಖೆಗೆ ಸಹಕಾರ ನೀಡದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿತು.

**

ತನಿಖೆಗೆ ಸಹಕರಿಸದೆ ಕಾನೂನು ಜತೆ ಆಟವಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಅದು ಏನೆಂದು ಈಗ ಏನನ್ನೂ ಹೇಳುವುದಿಲ್ಲ.

–ರಂಜನ್‌ ಗೊಗೊಯಿ, ಮುಖ್ಯ ನ್ಯಾಯಮೂರ್ತಿ ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT