ಕರುಣಾನಿಧಿ ಸುದ್ದಿಗೋಷ್ಠಿಯ ಗತ್ತೇ ಬೇರೆ!

7

ಕರುಣಾನಿಧಿ ಸುದ್ದಿಗೋಷ್ಠಿಯ ಗತ್ತೇ ಬೇರೆ!

Published:
Updated:

2004ರ ಲೋಕಸಭಾ ಚುನಾವಣೆ ಫಲಿತಾಂಶ ಬಂದಾಗ ಅತಿ ಹೆಚ್ಚು ಸಂತಸಗೊಂಡ ರಾಜಕಾರಣಿಗಳಲ್ಲೊಬ್ಬರಾಗಿದ್ದರು ಕಲೈಂಗರ್ ಕರುಣಾನಿಧಿ. ಅವರ ನೇತೃತ್ವದ ಡಿಎಂಕೆ ಪಕ್ಷ  40 ಸೀಟುಗಳಲ್ಲಿ ಜಯಭೇರಿ ಬಾರಿಸಿತ್ತು. ಚುನಾವಣಾ ಫಲಿತಾಂಶ ಬಂದ ಆ ದಿನ ಸಂಜೆ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಕರುಣಾನಿಧಿ ಸುದ್ದಿಗೋಷ್ಠಿ ಕರೆದಿದ್ದರು. ಜಯಲಲಿತಾರ ಪಕ್ಷವಾದ ಎಐಎಡಿಎಂಕೆ ವಿರುದ್ಧದ ಆ ಜಯದ ಆಹ್ಲಾದವನ್ನು ಕಲೈಂಗರ್ ಅಲ್ಲಿ ವ್ಯಕ್ತಪಡಿಸಿದ್ದರು.

ಆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರುಣಾನಿಧಿ, ನಾನು ದೆಹಲಿಗೆ ಹೋಗಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡುತ್ತೇನೆ ಎಂದಿದ್ದರು. ಆನಂತರ ನಾವು ಈಗ ಸಚಿವ ಸಂಪುಟ ಸೇರುವುದಿಲ್ಲ. ಕಾದು ನೋಡುತ್ತೇವೆ. ಆಮೇಲೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. We wil wait and see ಎಂದಿದ್ದರು. ಸುದ್ದಿಗೋಷ್ಠಿ ಮುಗಿದು ಕಲೈಂಗರ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಪತ್ರಕರ್ತರೊಬ್ಬರು Is it a strategy to bargain more? (ಚೌಕಾಸಿ ಮಾಡಲಿರುವ ತಂತ್ರವೇ ಇದು?) ಎಂದು ಕೇಳಿದರು. ಈ ಪ್ರಶ್ನೆಗೆ ಅವರು ನೀಡಿದ ಉತ್ತರವೇನು ಗೊತ್ತಾ? ರೊಂಬ ಅಸಿಕಮಾನ ಕೇಳ್ವಿ (ಇದೊಂದು ಕೆಟ್ಟ ಪ್ರಶ್ನೆ) ಎಂದಾಗಿತ್ತು. ನನ್ನ ಬಗ್ಗೆ ಬಲ್ಲವರು ಈ ರೀತಿಯ ಪ್ರಶ್ನೆಯನ್ನು ಕೇಳಲಾರರು. ಅಧಿಕಾರಕ್ಕಾಗಿ ಚೌಕಾಸಿ ನಡೆಸುವ ಬುದ್ದಿ ಡಿಎಂಕೆಗೆ ಇಲ್ಲ ಎಂದು ಹೇಳಿ ಕಲೈಂಗರ್ ಅಲ್ಲಿಂದ ಹೊರಟು ಹೋಗಿದ್ದರು.

ನಂತರದ ದಿನಗಳಲ್ಲಿ ಕರುಣಾನಿಧಿ ಸೋನಿಯಾ ಗಾಂಧಿಯನ್ನು ಭೇಟಿಯಾದರು. ದೆಹಲಿಯಲ್ಲಿ ಕರುಣಾನಿಧಿ ವಾಸವಾಗಿದ್ದ ತಮಿಳ್ನಾಡು ಹೌಸ್‍ಗೆ ಬಂದಿದ್ದರು ಸೋನಿಯಾ. ಅಲ್ಲಿ ಮಾತುಕತೆ ನಡೆಸಿದ ಕರುಣಾನಿಧಿ ದಯಾನಿಧಿ ಮಾರನ್‍ಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವಂತೆ  ಮಾಡಿದ್ದರು.

ಕರುಣಾನಿಧಿಯವರು ಸುದ್ದಿಗೋಷ್ಠಿ ನಡೆಸುವಾಗ ಪತ್ರಕರ್ತರಿಂದ ಬರುವ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದ ರೀತಿಯೇ ಭಿನ್ನವಾಗಿತ್ತು. 2014ರಲ್ಲಿ ನರೇಂದ್ರ ಮೋದಿ ಚುನಾವಣೆ ಪ್ರಚಾರ ನಡೆಸಿ ಮರಳಿದಾಗ ಒಬ್ಬ ಪತ್ರಕರ್ತ, ತಮಿಳ್ನಾಡಿನಲ್ಲಿ ಮೋದಿ ಹವಾ ಇದೆ ಎಂಬ ವರದಿಗಳಿವೆ. ಈ ಬಗ್ಗೆ ನೀವೇನಂತೀರಿ? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಕರುಣಾನಿಧಿ , ವೇದಿಕೆಗಳಲ್ಲಿ ಮೋದಿ ಕೈ ಬೀಸುವುದು (Waving) ಕಂಡೆ, ಬೇರೆ ಯಾವ ವೇವ್ ಕೂಡಾ ನಾನು ನೋಡಿಲ್ಲ ಎಂದಿದ್ದರು.

ರಾಮೇಶ್ವರ ಸಮೀಪ ಶ್ರೀರಾಮ ನಿರ್ಮಿಸಿದ್ದಾನೆ ಎಂಬ ಐತಿಹ್ಯವಿರುವ ರಾಮಸೇತು ಕೆಡವಿ ನೌಕಾ ಮಾರ್ಗ ನಿರ್ಮಾಣಕ್ಕೆ ಅವಕಾಶಕೊಡಬಾರದು ಎಂದು ಬಿಜೆಪಿ ಪಟ್ಟು ಹಿಡಿದಾಗ ಕರುಣಾನಿಧಿ ಹೇಳಿದ ಮಾತು ವಿವಾದಕ್ಕೀಡಾಗಿತ್ತು. 'ಸೇತುವೆ ನಿರ್ಮಿಸಲು ಶ್ರೀರಾಮ ಯಾವ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದ' ಎಂಬ ಅವರ ಪ್ರಶ್ನೆ ಬಿಜೆಪಿ ಬೆಂಬಲಿಗರನ್ನು ಕೆರಳಿಸಿತ್ತು.

ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುತ್ತಿದ್ದ ಕಲೈಂಗರ್ ಯಾರಿಗೂ ಭೇಟಿ ನಿರಾಕರಿಸುತ್ತಿರಲಿಲ್ಲ. ಡಿಎಂಕೆಯ  ಮುಖವಾಣಿಯಾದ ಮುರಶೋಲಿ ಕಚೇರಿಗೆ ಭೇಟಿ ನೀಡುವುದನ್ನು ಅವರು ಯಾವತ್ತೂ  ತಪ್ಪಿಸಿಕೊಂಡಿರಲ್ಲಿಲ್ಲ, ಸದಾ ಸಕ್ರಿಯರಾಗಿರುತ್ತಿದ್ದ ಕರುಣಾನಿಧಿ, ಮುರಶೋಲಿಯಲ್ಲಿ ಪ್ರಕಟವಾಗುವ ತಮ್ಮ ಅಂಕಣದ ಮೂಲಕ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದರು.
***
 

ಇದನ್ನೂ ಓದಿರಿ
ಕರುಣಾನಿಧಿ ಬದುಕಿನ ಹಾದಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ದ್ರಾವಿಡ ಪಕ್ಷಗಳಾಚೆಗಿನ ಆಯ್ಕೆ ತೆರೆದಿಟ್ಟ ಚುನಾವಣೆ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !