ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸಗಾರರಿಂದ ಪಾಠ ಕಲಿಯಬೇಕಿಲ್ಲ: ಈಶ್ವರ ಖಂಡ್ರೆ

Last Updated 4 ಏಪ್ರಿಲ್ 2018, 10:47 IST
ಅಕ್ಷರ ಗಾತ್ರ

ಬೀದರ್: ‘ವಂಚನೆ ಮಾಡುವಲ್ಲಿ ನಿಸ್ಸೀಮರಾಗಿರುವ ಸಂಸದ ಭಗವಂತ ಖೂಬಾ ಮತ್ತು ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಂದ ಯಾವುದೇ ಪಾಠ ಕಲಿಯಬೇಕಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.‘ನಾಲ್ಕು ವರ್ಷಗಳ ಹಿಂದೆ ಅಷ್ಟೇ ಸಂಸದರಾಗಿರುವ ಭಗವಂತ ಖೂಬಾ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಭಾಲ್ಕಿ ತಾಲ್ಲೂಕಿನಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಬಡವರಿಗೆ ನಿಯಮಾನುಸಾರ ಮನೆ ಮಂಜೂರು ಮಾಡಲಾಗಿದೆ. ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳುವ ಮೊದಲೇ ಮನೆ ಮಂಜೂರಾತಿ ಪತ್ರವನ್ನು ಕೊಡಲಾಗಿದೆ. ಸುಳ್ಳು ಆರೋಪ ಮಾಡಿದರೆ ಸಂಸದರ ವಿರುದ್ಧವೇ ವಂಚನೆ ಆರೋಪ ಅಡಿ ಪ್ರಕರಣ ದಾಖಲು ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಭಗವಂತ ಖೂಬಾ, ನಗರದ ಉದ್ಯಾನಗಳಲ್ಲಿ ಸಂಸದರ ನಿಧಿಯಿಂದ ಬೆಂಚ್‌ಗಳನ್ನು ಅಳವಡಿಸಿದರೂ ಅದರ ಮೇಲೆ ತಮ್ಮ ವೈಯಕ್ತಿಕ ಹೆಸರು ಹಾಕಿಸಿಕೊಂಡಿದ್ದಾರೆ. ಜನಪ್ರತಿನಿಧಿ ಅಲ್ಲದಿದ್ದರೂ ಪ್ರಕಾಶ ಖಂಡ್ರೆ ಅವರು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಒಲೆ ಹಾಗೂ ಸಿಲಿಂಡರ್ ಹಂಚಿಕೆ ಮಾಡಿದ್ದಾರೆ. ಹತಾಶ ಭಾವನೆಯಿಂದ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಜಿಲ್ಲೆಯಲ್ಲಿ 45 ಸಾವಿರ ಅನಿಲ ರಹಿತ ಫಲಾನುಭವಿಗಳನ್ನು ಗುರುತಿಸಲಾಗಿದೆ. ಅವರಿಗೆ ಒಲೆಗಳು ಮತ್ತು ಅಡುಗೆ ಅನಿಲ ವಿತರಣೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ರಾಜ್ಯ ಸರ್ಕಾರ ಅದಕ್ಕೆ ಹಣವನ್ನೂ ಬಿಡುಗಡೆ ಮಾಡಿದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ತೈಲ ಕಂಪನಿಗಳ ಮೇಲೆ ಒತ್ತಡ ಹಾಕಿ ಸಿಲಿಂಡರ್ ವಿತರಣೆ ಪ್ರಕ್ರಿಯೆ ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಭಾಲ್ಕಿ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಖೂಬಾ ಹಾಗೂ ಪ್ರಕಾಶ ಖಂಡ್ರೆ ಆರೋಪಿಸಿದ್ದಾರೆ. ಈ ಇಬ್ಬರೂ ಮೂಲತಃ ಗುತ್ತಿಗೆದಾರರಾಗಿದ್ದಾರೆ. ಅವರಿಗೆ ಗುತ್ತಿಗೆ ಕೆಲಸದಲ್ಲೇ ಹೆಚ್ಚಿನ ಆಸಕ್ತಿ ಇದೆ. ಜನಪ್ರತಿನಿಧಿಗಳಾಗಿ ಗುರುತಿಸಿ ಕೊಂಡರೂ ಗುತ್ತಿಗೆದಾರರ ಚಾಳಿ ಹೋಗಿಲ್ಲ’ ಎಂದು ಟೀಕಿಸಿದ್ದಾರೆ.

‘ಭಾಲ್ಕಿ ಲೆಕ್ಚರರ್ ಕಾಲೊನಿ- ತಳವಾಡ(ಕೆ) ರಸ್ತೆ ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಈ ರಸ್ತೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.ಒಂದು ನಯಾಪೈಸೆ ಖರ್ಚಾಗಿಲ್ಲ. ನನ್ನ ವಿರುದ್ಧ ಸುಳ್ಳು ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT