ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷಾಧಿಕಾರ ರದ್ದತಿಗೆ ಕಾಶ್ಮೀರಿಗಳ ಬೆಂಬಲ: ಡೊಭಾಲ್

ಹಂತ ಹಂತವಾಗಿ ನಿರ್ಬಂಧ ಸಡಿಲಿಸುವ ಭರವಸೆ
Last Updated 7 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸಿದ್ದಕ್ಕೆ ಕಾಶ್ಮೀರದ ಬಹುತೇಕ ಜನರು ಬೆಂಬಲ ಸೂಚಿಸಿದ್ದಾರೆ ಎಂಬುದು ತಮಗೆ ಮನವರಿಕೆಯಾಗಿದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹೇಳಿದ್ದಾರೆ.

‘ಪಾಕಿಸ್ತಾನ ಪ್ರಚೋದಿತ ಕೃತ್ಯಗಳಿಂದ ಕಾಶ್ಮೀರದ ಜನರನ್ನು ರಕ್ಷಿಸುವ ದೃಷ್ಟಿಯಿಂದ ಕಣಿವೆ ರಾಜ್ಯದಲ್ಲಿ ನಿರ್ಬಂಧ ಮುಂದುವರಿಸಲಾಗಿದೆ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಭಾರತ ಹಾಗೂ ವಿದೇಶದ ಆಯ್ದ ಪತ್ರಕರ್ತರ ಜೊತೆ ಶನಿವಾರ ಸುದೀರ್ಘವಾಗಿ ಮಾತನಾಡನಾಡಿದ ಡೊಭಾಲ್, ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲಾಗುವುದು ಎಂದರು. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಪ್ರಾಂತ್ಯದ 199ರ ಪೈಕಿ 10 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾತ್ರ ನಿರ್ಬಂಧ ಮುಂದುವರಿದಿದ್ದು, ಸ್ಥಿರ ದೂರವಾಣಿಗಳು ಶೇ 100ರಷ್ಟು ಚಾಲನೆಗೊಂಡಿವೆ ಎಂದು ಹೇಳಿದರು.

ರಾಜಕೀಯ ನಾಯಕರ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆಯಾಲಗಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ಕಾನೂನು ಮೀರಿ ನಡೆದುಕೊಂಡಲ್ಲಿ, ನ್ಯಾಯಾಲಯದಲ್ಲಿ ಸರ್ಕಾರ ಭಾರಿ ದಂಡ ತೆರಬೇಕಾಗುತ್ತದೆ’ ಎಂದರು.

ಮತ್ತೆ ಕದನ ವಿರಾಮ ಉಲ್ಲಂಘನೆ

(ಜಮ್ಮು ವರದಿ): ಪೂಂಛ್ ವಲಯದ ಗ್ರಾಮಗಳ ಗಡಿ ಠಾಣೆಗಳನ್ನು ಗುರಿಯಾಗಿಸಿ ಪಾಕಿಸ್ತಾನದ ಸೇನಾಪಡೆಗಳು ಶನಿವಾರ ಷೆಲ್ ದಾಳಿ ನಡೆಸಿವೆ.

ಬೆಳಿಗ್ಗೆ 7.45ರ ವೇಳೆ ಕೃಷ್ಣಾ ಘಾಟಿ ಸೆಕ್ಟರ್‌ನಿಂದ ಆರಂಭವಾಗಿ, ಗಡಿಯುದ್ದಕ್ಕೂ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಷೆಲ್‌ಗಳಿಂದ ದಾಳಿ ನಡೆದಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ. ಇದಕ್ಕೆ ಭಾರತ ತಕ್ಕ ಪ್ರತಿರೋಧ ತೋರಿದೆ. ಗುಂಡಿನ ಚಕಮಕಿಯಲ್ಲಿ ಭಾರತದ ಕಡೆ ಯಾವುದೇ ಅವಘಡ ಸಂಭವಿಸಿಲ್ಲ.

ಸೆ.1ರಂದು ಶಾಹಪುರ–ಕರ್ನಿ ಸೆಕ್ಟರ್‌ನ ಗ್ರಾಮಗಳು ಹಾಗೂ ಗಡಿಠಾಣೆ ಗುರಿಯಾಗಿಸಿ ಪಾಕ್ ನಡೆಸಿದ್ದ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದ.

ಬಳೆ ಕಳುಹಿಸಬೇಕೇ: ಉಗ್ರರಿಗೆ ಗೋಪ್ಯ ಸಂದೇಶ

(ರಾಯಿಟರ್ಸ್ ವರದಿ): ಕಾಶ್ಮೀರ ಕಣಿವೆಗೆ ಒಳನುಸುಳಲು ಪಾಕಿಸ್ತಾನದ 230 ಉಗ್ರರು ಹವಣಿಸುತ್ತಿದ್ದಾರೆ ಎಂದು ಡೊಭಾಲ್ ಹೇಳಿದರು. ಗುಪ್ತಚರ ಮಾಹಿತಿ ಆಧರಿಸಿ ಈ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಕೆಲವು ಉಗ್ರರು ಈಗಾಗಲೇ ಭದ್ರತಾಪಡೆಗಳಿಗೆ ಸಿಕ್ಕಿಬಿದ್ದಿದ್ದಾರೆ.

‘ಕಣಿವೆಯಲ್ಲಿ ಬಿಕ್ಕಟ್ಟು ಸೃಷ್ಟಿಸುವಂತೆ ಕಾಶ್ಮೀರದ ಜನರನ್ನು ಪ್ರಚೋದಿಸಲಾಗುತ್ತಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗಿದೆ. ಗಡಿನಿಯಂತ್ರಣ ರೇಖೆಯಲ್ಲಿ 20 ಕಿಲೋಮೀಟರ್ ಉದ್ದಕ್ಕೂ ಪಾಕ್‌ನ ಸಂವಹನ ಟವರ್‌ಗಳಿದ್ದು, ಸಂದೇಶ ಕಳುಹಿಸಲು ಅವು ಯತ್ನಿಸುತ್ತಿವೆ. ಉಗ್ರ ಸಂಘಟನೆಗಳು ತಮ್ಮ ಸದಸ್ಯರಿಗೆ ಬೆದರಿಕೆಯ ಸಂದೇಶಗಳನ್ನು ಕಳುಹಿಸಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಡೊಭಾಲ್ ಹೇಳಿದರು.

‘ಕಾಶ್ಮೀರದಲ್ಲಿ ಸೇಬು ಹಣ್ಣುಗಳನ್ನು ತುಂಬಿದ ಸುಮಾರು 700 ಲಾರಿಗಳು ಓಡಾಡುತ್ತಿವೆ. ಅವುಗಳನ್ನು ತಡೆಯಲು ನಿಮ್ಮಿಂದ ಆಗದೇ? ಶಸ್ತ್ರಾಸ್ತ್ರಗಳ ಬದಲು ನಿಮಗೆ ಬಳೆಗಳನ್ನು ಕಳುಹಿಸಿಕೊಡಲೇ’ ಎಂಬ ಸಂದೇಶವು ಗೌಪ್ಯ ಭಾಷೆಯಲ್ಲಿ ರವಾನೆ ಆಗಿರುವುದನ್ನು ಡೊಭಾಲ್ ಉಲ್ಲೇಖಿಸಿದರು.

‘ಜನರ ಪ್ರಾಣವನ್ನು ಬಲಿಕೊಟ್ಟು ಸಂಪರ್ಕ ಸೇವೆ ಕಲ್ಪಿಸಲು ಸರ್ಕಾರ ಸಿದ್ಧವಿಲ್ಲ. ಸದ್ಯಕ್ಕೆ ಇಂಟರ್ನೆಟ್ ಸೇವೆಯನ್ನು ಆರಂಭಿಸಲು ಸಾಧ್ಯವಿಲ್ಲ. ಏಕೆಂದರೆ ಉಗ್ರರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಪಾಕಿಸ್ತಾನ ಹೇಗೆ ವರ್ತಿಸುತ್ತದೆ ಎಂಬುದರ ಆಧಾರದ ಮೇಲೆ ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧವನ್ನು ಸಡಿಲಿಸಲಾಗುವುದು. ಇದು ಪ್ರಚೋದನೆ ಮತ್ತು ಪ್ರತಿಕ್ರಿಯೆಗೆ ಸಂಬಂಧಿಸಿದ್ದು. ಪಾಕ್ ಸಕಾರಾತ್ಮಕವಾಗಿ ವರ್ತಿಸಲು ಶುರು ಮಾಡಿದರೆ, ಬೆದರಿಕೆ ಒಡ್ಡಲು ಹಾಗೂ ಒಳನುಸುಳಲು ಉಗ್ರರಿಗೆ ಸಾಧ್ಯವಾಗುವುದಿಲ್ಲ. ತನ್ನ ಮೊಬೈಲ್ ಟವರ್‌ಗಳ ಮೂಲಕ ಉಗ್ರರಿಗೆ ಸಂಕೇತ ಕಳುಹಿಸುವುದುನ್ನು ಪಾಕಿಸ್ತಾನವು ಸ್ಥಗಿತಗೊಳಿಸಿದರೆ, ನಾವು ಕಾಶ್ಮೀರದಲ್ಲಿ ನಿರ್ಬಂಧ ಹಿಂಪಡೆಯುತ್ತೇವೆ’ ಎಂದರು.

ಬಾರಾಮುಲ್ಲಾದಲ್ಲಿ ಉಗ್ರರ ದಾಳಿ

(ಶ್ರೀನಗರ ವರದಿ): ಬಾರಾಮುಲ್ಲಾದ ಮನೆಯೊಂದರ ಮೇಲೆ ಉಗ್ರರು ಶುಕ್ರವಾರ ರಾತ್ರಿ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಎರಡೂವರೆ ವರ್ಷದ ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

‘ಡಂಗೆರಪುರ ಗ್ರಾಮದ ಮನೆಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡು ಹಾರಿಸಿದರು. ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಶೋಧ ನಡೆದಿದೆ’ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

ಗಾಯಾಳುಗಳಾದ ಮೊಹಮ್ಮದ್ ಅಶ್ರಫ್ ದಾರ್, ಮೊಹಮ್ಮದ್ ರಂಜಾನ್ ದಾರ್, ಅರ್ಶಿದ್ ಹುಸೇನ್ ಮತ್ತು ಬಾಲಕಿ ಉಸ್ಮಾ ಜಾನ್ ಅವರನ್ನುಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

ಇದು ಭಯೋತ್ಪಾದನೆಯ ಹೀನ ಕೃತ್ಯ ಎಂದು ಪೊಲೀಸ್ ಇಲಾಖೆ ವಕ್ತಾರರು ಘಟನೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT