ಮಂಗಳವಾರ, ಸೆಪ್ಟೆಂಬರ್ 24, 2019
28 °C
ಭದ್ರತಾಪಡೆ ಕಾವಲು ಮುಂದುವರಿಕೆ; ಸಹಜ ಸ್ಥಿತಿಗೆ ಬಾರದ ಜನಜೀವನ

ಕಾಶ್ಮೀರ: ನಿರ್ಬಂಧ ಬಹುತೇಕ ತೆರವು, ಕಾವಲು ಮುಂದುವರಿಕೆ

Published:
Updated:
Prajavani

ಶ್ರೀನಗರ : ಶ್ರೀನಗರದ ಕೆಲವು ಪ್ರದೇಶಗಳನ್ನು ಬಿಟ್ಟು, ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ನಿರ್ಬಂಧ ತೆರವುಗೊಳಿಸಲಾಗಿದೆ. 

ಪ್ರಮುಖ ವಾಣಿಜ್ಯ ಕೇಂದ್ರ ಲಾಲ್‌ಚೌಕ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರಿಸಿದ್ದ ಬ್ಯಾರಿಕೇಡ್‌ಗಳನ್ನು ಸೋಮವಾರ ತೆರವುಗೊಳಿಸಲಾಗಿದೆ. ಆದರೆ ಇದಕ್ಕೆ ಪೂರ್ವಭಾವಿಯಾಗಿ, ಹೊರಗಿನ ಜನರನ್ನು ನಿಯಂತ್ರಿಸುವ ಉದ್ದೇಶದಿಂದ ಎಲ್ಲ ಪ್ರವೇಶ ದ್ವಾರಗಳನ್ನು ಮುಳ್ಳು ತಂತಿಗಳಿಂದ ಭಾನುವಾರ ಮುಚ್ಚಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭದ್ರತಾಪಡೆ ನಿಯೋಜನೆಯನ್ನು ಮುಂದುರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರಿಸ್ಥಿತಿ ಸುಧಾರಿಸಿದಂತೆಲ್ಲಾ ಹಂತ ಹಂತವಾಗಿ ನಿರ್ಬಂಧ ಸಡಿಲಿಸಲಾಗುತ್ತಿದೆ. ಮೊಹರಂನ ಎಂಟನೇ ದಿನವಾದ ಭಾನುವಾರ ಮತ್ತೆ ನಿರ್ಬಂಧ ಹೇರಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜನರ ಓಡಾಟ ನಿಯಂತ್ರಿಸುವ ಉದ್ದೇಶದಿಂದ ಪ್ರತಿ ವರ್ಷದ ಮೊಹರಂನ ಎಂಟನೇ ಹಾಗೂ ಹತ್ತನೇ ದಿನ ಕಣಿವೆಯ ಕೆಲ ಜಾಗಗಳಲ್ಲಿ ನಿರ್ಬಂಧ ವಿಧಿಸಲಾಗುತ್ತದೆ.

ಜನರು ಸೇರುವ ಮಸೀದಿ ಹಾಗೂ ಇನ್ನಿತರ ಸೂಕ್ಷ್ಮ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ನಡೆಯುವ ಸಾಧ್ಯತೆ ಇರುವುದರಿಂದ ಪ್ರತಿ ಶುಕ್ರವಾರ ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತದೆ. ಕಳೆದ ಒಂದು ತಿಂಗಳಿನಿಂದ ನಗರದ ಯಾವುದೇ ದೊಡ್ಡ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ನೀಡಿಲ್ಲ.

ಸಹಜ ಸ್ಥಿತಿಗೆ ಬಾರದ ಜನಜೀವನ: ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡು ಸೋಮವಾರಕ್ಕೆ 36 ದಿನಗಳಾಗಿವೆ. ತೀವ್ರ ನಿರ್ಬಂಧದಿಂದ ಜನ ಜೀವನದ ಮೇಲೆ ಭಾರಿ ಪರಿಣಾಮ ಉಂಟಾಗಿದೆ. ಮಾರುಕಟ್ಟೆ, ವಾಣಿಜ್ಯ ಕೇಂದ್ರಗಳು ಮುಚ್ಚಿವೆ. ಸಾರ್ವಜನಿಕ ಸಾರಿಗೆ ಸಹಜಸ್ಥಿತಿಗೆ ಬಂದಿಲ್ಲ. ಶಾಲೆ ಪುನರಾರಂಭಕ್ಕೆ ಸರ್ಕಾರ ಮಾಡಿದ್ದ ಯತ್ನ ವಿಫಲವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಸ್ಥಿರ ದೂರವಾಣಿ ಸೇವೆ ರಾಜ್ಯದಾದ್ಯಂತ ಸಹಜ ಸ್ಥಿತಿಗೆ ಬಂದಿದೆ. ಆದರೆ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆ ಶುರುವಾಗಿ‌ಲ್ಲ.

ಏಮ್ಸ್‌ಗೆ ತಾರಿಗಾಮಿ ಸ್ಥಳಾಂತರ

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಎಂ ಮುಖಂಡ ಎಂ.ವೈ.ತಾರಿಗಾಮಿ ಅವರನ್ನು ಸೋಮವಾರ ಇಲ್ಲಿನ ಏಮ್ಸ್‌ಗೆ ಸ್ಥಳಾಂತರ ಮಾಡಲಾಗಿದೆ. ಇವರು ಕಾಶ್ಮೀರದಲ್ಲಿ ಒಂದು ತಿಂಗಳಿನಿಂದ ಗೃಹಬಂಧನದಲ್ಲಿದ್ದರು.

ತಮ್ಮ ಸಂಬಂಧಿ, ಪೊಲೀಸ್ ಅಧಿಕಾರಿ ಹಾಗೂ ವೈದ್ಯರ ಜೊತೆ ಇಲ್ಲಿಗೆ ಬಂದ ತಾರಿಗಾಮಿ ಅವರನ್ನು ತಕ್ಷಣ ದಾಖಲಿಸಿಕೊಳ್ಳಲಾಯಿತು. ಅವರನ್ನು ಏಮ್ಸ್‌ಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಗುರುವಾರ ನಿರ್ದೇಶಿಸಿತ್ತು. 

Post Comments (+)