ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಹಿಷ್ಕಾರದ ನೆರಳಲ್ಲಿ ಮತದಾನ ಆರಂಭ

ಇಂದು ಮೊದಲ ಹಂತದ ಮತದಾನ
Last Updated 8 ಅಕ್ಟೋಬರ್ 2018, 1:48 IST
ಅಕ್ಷರ ಗಾತ್ರ

ಶ್ರೀನಗರ: ಭಾರಿ ಭದ್ರತೆಯ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೊದಲ ಹಂತದ ಚುನಾವಣೆ ಸೋಮವಾರ (ಇಂದು) ಆರಂಭವಾಯಿತು. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ.ಕಣಿವೆ ರಾಜ್ಯದ ಒಟ್ಟು 1,100 ಮುನ್ಸಿಪಲ್ ವಾರ್ಡ್‌ಗಳ ಪೈಕಿ 422 ವಾರ್ಡ್‌ಗಳಿಗೆ ಇಂದು ಮತದಾನ ನಡೆಯಲಿದೆ.

ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್ ಮತ್ತು ಮೆಹಬೂಬ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಪಕ್ಷಗಳು ಚುನಾವಣೆಯಿಂದ ಹೊರ ಉಳಿಯುವುದಾಗಿ ಘೋಷಿಸಿದ್ದವು. ಉಗ್ರರು ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿರುವುದರಿಂದ ಮತದಾನದ ವೇಳೆ ಅಹಿತಕರ ಘಟನೆಗಳು ನಡೆಯಬಹುದು ಎನ್ನುವ ಆತಂಕವೂ ಮೂಡಿದೆ. ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ.

ನಾಲ್ಕು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 2,990 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ಈವರೆಗೆ 240 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಬಹುತೇಕರು ಕಾಶ್ಮೀರ ಕಣಿವೆಗೆ ಸೇರಿದವರು. ಬಿಜೆಪಿಯ 75 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಶ್ಮೀರ ಕಣಿವೆಯ ಏಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಡಿತ ಸಾಧಿಸಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈಚಿನ ದಿನಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಲ್ಲಿ ಭಯ ಆವರಿಸಿತ್ತು. ಯಾರೊಬ್ಬರೂ ಮನಸ್ಸಿಟ್ಟು ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಬಹುತೇಕ ಅಭ್ಯರ್ಥಿಗಳು ಗುಪ್ತಸ್ಥಳಗಳಲ್ಲಿ ಬಚ್ಚಿಟ್ಟುಕೊಂಡಿದ್ದರು. ಚುನಾವಣಾ ಪ್ರಚಾರವೂ ನೀರಸವಾಗಿತ್ತು.

13 ವರ್ಷಗಳ ಹಿಂದೆ, 2005ರಲ್ಲಿ ಕಣಿವೆ ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಆಗ ನ್ಯಾಷನಲ್ ಕಾನ್ಫರೆನ್ಸ್‌ ಬಿಗಿಹಿಡಿತ ಸಾಧಿಸಿತ್ತು.ಸಂವಿಧಾನದ 35ಎ ವಿಧಿಯ ಬಗ್ಗೆ ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಚುನಾವಣೆಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಹೊಳಪು ಕಳೆದುಕೊಂಡಿದೆ. ‘ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಒತ್ತಾಯಪೂರ್ವಕ ಚುನಾವಣೆ ನಡೆಸುತ್ತಿದೆ. ಇದು ಪ್ರಜಾಪ್ರಭುತ್ವದ ಅಣಕ’ ಎಂದು ಪಿಡಿಪಿ ಆಕ್ರೋಶ ವ್ಯಕ್ತಪಡಿಸಿದೆ.

ದೇಶದ ಇತರ ರಾಜ್ಯಗಳಿಗೆ ಸೇರಿದವರು ಕಾಶ್ಮೀರಲ್ಲಿ ಆಸ್ತಿ ಖರೀದಿಸುವುದು ಮತ್ತು ಸರ್ಕಾರಿ ಕೆಲಸಗಳಿಗೆ ಸೇರುವುದನ್ನು ಸಂವಿಧಾನದ 35ಎ ವಿಧಿ ನಿಷೇಧಿಸುತ್ತದೆ. 1954ರಲ್ಲಿ ರಾಷ್ಟ್ರಪತಿ ಆದೇಶದಂತೆ ಜಾರಿಗೆ ಬಂದ ಈ ಸವಲತ್ತನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್‌ ಅರ್ಜಿಯ ವಿಚಾರಣೆ ಆರಂಭಿಸಿತ್ತು. ಸ್ಥಳೀಯ ಸಂಸ್ಥೆಯ ಚುನಾವಣೆ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಬೇಕು ಎನ್ನುವ ಕೇಂದ್ರ ಸರ್ಕಾರದ ಮನವಿಯನ್ನು ಕೋರ್ಟ್ ಮಾನ್ಯ ಮಾಡಿತ್ತು.

ಇಡೀ ಕಾಶ್ಮೀರ ಕಣಿವೆಯಲ್ಲಿ ತಳಮಳದ ವಾತಾವರಣವಿದೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸುವಲ್ಲಿ ಕಾಂಗ್ರೆಸ್ ಸಹ ವಿಫಲವಾಗಿದೆ.ಕೇಂದ್ರ ಸರ್ಕಾರವು ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಪ್ಯಾರಾ ಮಿಲಿಟರಿಯ 40,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶಾಂತಿಯುತ ಚುನಾವಣೆ ನಡೆಸುವ ಹೊಣೆಗಾರಿಕೆಯನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ವಹಿಸಲಾಗಿದೆ.

ಎರಡನೇ ಹಂತದ ಮತದಾನವು ಅ.10, ಮೂರನೇ ಹಂತದ ಮತದಾವು ಅ.13 ಮತ್ತು ಅಂತಿಮ ಹಂತದ ಮತದಾವನು ಅ.16ರಂದು ನಡೆಯಲಿದೆ. ಅ.20ರಂದು ಮತಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT