ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಿಗಳ ಅಸ್ಮಿತೆಗೆ ಧಕ್ಕೆಯಿಲ್ಲ: ಮಲಿಕ್

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿದ ರಾಜ್ಯಪಾಲ l ಬಿಗಿ ಬಂದೋಬಸ್ತ್, ಸಮಾರಂಭದಲ್ಲಿ ಜನರ ಕೊರತೆ
Last Updated 15 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಶ್ರೀನಗರ (ರಾಯಿಟರ್ಸ್/ಪಿಟಿಐ): ವಿಶೇಷಾಧಿಕಾರ ರದ್ದುಗೊಂಡಿದ್ದರಿಂದ ಜಮ್ಮು ಮತ್ತು ಕಾಶ್ಮೀರ ಜನರ ಅಸ್ಮಿತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಐತಿಹಾಸಿಕ ಬದಲಾವಣೆಗಳು ಅಭಿವೃದ್ಧಿಯ ಹೊಸ ಬಾಗಿಲನ್ನು ತೆರೆಯಲಿವೆ ಎಂದು ಹೇಳಿದರು.

‘ಶಿಕ್ಷಣ ಹಾಗೂ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ನೀವು ರಾಜಕೀಯ ಪ್ರವೇಶಿಸಿ ಹೊಸ ಕಾಶ್ಮೀರ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು’ ಎಂದು ಅವರು ಯುವಜನರಿಗೆ ಕರೆ ನೀಡಿದರು.

‘ಕಾಶ್ಮೀರಿ, ಡೊಗ್ರಿ, ಗೊರ್ಜಿ, ಪಹಾರಿ, ಬಾಲ್ಟಿ, ಶೀನಾ ಮೊದಲಾದ ಭಾಷೆಗಳು ಇನ್ನಷ್ಟು ಬೆಳಕು ಕಾಣಲಿವೆ. ಪ್ರಾತಿನಿಧ್ಯದಿಂದ ಹೊರಗಿರುವ ಬುಡಕಟ್ಟು ಜನರಿಗೂಹೊಸ ವ್ಯವಸ್ಥೆಯಲ್ಲಿ ಅವಕಾಶಗಳಿವೆ. ಕಾಶ್ಮೀರಿ ಪಂಡಿತರ ಸುರಕ್ಷಿತ ವಾಪಸಾತಿಗೆ ಸರ್ಕಾರ ಬದ್ಧವಾಗಿದೆ’ ಎಂದು ಸತ್ಯಪಾಲ್ ಹೇಳಿದರು.

ಭಯೋತ್ಪಾದನೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂದ ಅವರು, ಶುಕ್ರವಾರದ ಪ್ರಾರ್ಥನೆ ಬಳಿಕ ಕಂಡುಬರುತ್ತಿದ್ದ ಕಲ್ಲುತೂರಾಟ, ಭಯೋತ್ಪಾದನಾ ಸಂಘಟನೆಗಳಿಗೆ ನೇಮಕಾತಿಗಳು ಬಹುತೇಕ ನಿಂತಿವೆ ಎಂದು ಹೇಳಿದರು.

‘ದಾರಿತಪ್ಪಿದ್ದ ಯುವಕರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಗಡಿಯುದ್ದಕ್ಕೂ ಒಳನುಸುಳುವಿಕೆ ತಡೆಯಲು ಬಹುಮುಖಿ ನೀತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯವನ್ನು ಆರ್ಥಿಕವಾಗಿ ಸದೃಢಗೊಳಿಸಲು ಇದೇ ವರ್ಷಾಂತ್ಯದಲ್ಲಿ ಬಂಡವಾಳ ಹೂಡಿಕೆ ಶೃಂಗಸಭೆ ಹಮ್ಮಿಕೊಳ್ಳುವ ಪ್ರಸ್ತಾವವಿದೆ’ ಎಂದು ಮಲಿಕ್ ಹೇಳಿದರು.

ಸಮಾರಂಭದಲ್ಲಿ ಪಾಲ್ಗೊಳ್ಳದ ಜನ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಗುರುವಾರ ಬಿಗಿ ಬಂದೋಬಸ್ತ್ ಇತ್ತು. ಸರ್ಕಾರಿ ಅಧಿಕಾರಿಗಳು, ಭದ್ರತಾ ಪಡೆಗಳು ಹಾಗೂ ಕೆಲವೇ ಸ್ಥಳೀಯರು ಪಥಸಂಚಲನದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮ ನಡೆದ ಶೇರ್–ಎ–ಕಾಶ್ಮೀರ್ ಕ್ರಿಕೆಟ್ ಮೈದಾನದ ಹೊರಗಡೆಯ ರಸ್ತೆ ಖಾಲಿಯಿತ್ತು. ಬಹುತೇಕ ನಾಗರಿಕರು ಮನೆಯಲ್ಲೇ ಉಳಿದಿದ್ದರು.

ಜಮ್ಮುವಿನಿಂದ 50 ಯುವಕ, ಯುವತಿಯರ ತಂಡವನ್ನು ಶ್ರೀನಗರಕ್ಕೆ ಕರೆಸಲಾಗಿತ್ತು. ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಅವರು ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ನ ಸಾಂಪ್ರದಾಯಿಕ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು. ಮೈದಾನದಲ್ಲಿ ಸುಮಾರು 500 ಮಂದಿ ಸೇರಿದ್ದರು. ಇವರಲ್ಲಿ ಬಹುತೇಕರು ಭದ್ರತಾಪಡೆ ಹಾಗೂ ಸರ್ಕಾರದ ಅಧಿಕಾರಿಗಳು.

-----

ಕಾಶ್ಮೀರದಲ್ಲಿ ಗುರುವಾರ ಏನೇನಾಯ್ತು?

ಮುಖ್ಯವಾಹಿನಿಯ ಯಾವ ನಾಯಕರೂ ಕಾರ್ಯಕ್ರಮದಲ್ಲಿ ಇರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಲಾಗಿದೆ

ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ಬಾರಿ ಶಾಲಾ ಮಕ್ಕಳು ಭಾಗಿಯಾಗಿರಲಿಲ್ಲ

ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗುಂಪುಗಳು ‘ವಂದೇ ಮಾತರಂ’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗಿದವು

ಲಡಾಖ್‌ನ ಏಕೈಕ ಸಂಸದ ಜಮ್‌ಯಾಂಗ್ ನಮ್‌ಯಾಂಗ್ ಅವರ ಜೊತೆ ಜನರು ಸಂಭ್ರಮದಿಂದ ನೃತ್ಯ ಮಾಡಿದರು.

-----

ಕರಾಳ ಸಮಯ ಎಂದ ಕಾಶ್ಮೀರಿಗರು

ಭಾರತದ ಸ್ವಾತಂತ್ರ್ಯೋತ್ಸವ ತಮ್ಮ ಪಾಲಿಗೆ ಕರಾಳ ಸಮಯ ಎಂದು ಬಹುತೇಕ ಕಾಶ್ಮೀರಿಗಳು ಅಭಿಪ್ರಾಯಪಟ್ಟರು.

‘ಭಾರತೀಯರು ಸ್ವತಂತ್ರರಾಗಿದ್ದಾರೆ. ಆದರೆ ನಾವು ಕಾಶ್ಮೀರಿಗಳಿಗೆ ಇನ್ನೂ ಸ್ವಾತಂತ್ರ್ಯ ಸಿಗಬೇಕಿದೆ’ ಎಂದು ಶ್ರೀನಗರದ ನಿವಾಸಿ ಬಿಲಾಲ್ ಅಹಮದ್ ಹೇಳಿದ್ದಾರೆ. ‘ನಾವು ಸ್ವತಂತ್ರರಾಗಿದ್ದಿದ್ದರೆ, ಈ ರೀತಿ ಪಂಜರದಲ್ಲಿರುವ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದಿದ್ದಾರೆ.

‘ಕಳೆದ 10 ದಿನಗಳಿಂದ ಕೆಲಸವಿಲ್ಲ. ನನಗೆ ಆರೋಗ್ಯ ಸರಿಯಿಲ್ಲ, ಆದರೆ ಔಷಧಿ ಕೊಳ್ಳಲು ಹಣವಿಲ್ಲ’ ಎನ್ನುತ್ತಾರೆ ಗುಲಾಮ್ ಅಹಮದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT