ಗುರುವಾರ , ಅಕ್ಟೋಬರ್ 17, 2019
27 °C

ಪ್ರವಾಸಿಗರಿಗೆ ಕಾಶ್ಮೀರ ಇಂದಿನಿಂದ ಮುಕ್ತಮುಕ್ತ

Published:
Updated:
A man stands on a boat under the rain during a lockdown in Srinagar

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಗುರುವಾರದಿಂದ (ಅ.10) ಪ್ರವಾಸಿಗರು ಭೇಟಿ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಆಗಸ್ಟ್‌ 2ರಿಂದಲೇ ಪ್ರವಾಸಿಗರ ಭೇಟಿ ಮತ್ತು ವಾಸ್ತವ್ಯವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು.

ಮುಖ್ಯ ಕಾರ್ಯಕಾರ್ಯದರ್ಶಿ ಮತ್ತು ಇತರ ಉನ್ನತ ಸಲಹೆಗಾರರ ಜೊತೆಗೆ ಸೋಮವಾರ ವಾಸ್ತವ ಸ್ಥಿತಿ ಮತ್ತು ಭದ್ರತಾ ಸ್ಥಿತಿಗತಿ ಪರಿಶೀಲನಾ ಸಭೆ ನಡೆಸಿದ್ದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಪ್ರವಾಸಿಗರಿಗೆ ವಿಧಿಸಿರುವ ನಿರ್ಬಂಧ ರದ್ದುಪಡಿಸುವ ನಿರ್ಧಾರ ಪ್ರಕಟಿಸಿದ್ದರು.

ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತು. ಇದಕ್ಕೆ ಕೇವಲ ಮೂರು ದಿನ ಮೊದಲು ‘ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ’ ಎಂದು ಘೋಷಿಸಿ ಕೇಂದ್ರ ಸರ್ಕಾರವು ಅಮರನಾಥ ಯಾತ್ರೆಯನ್ನು ರದ್ದುಪಡಿಸಿತ್ತು. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ರಾಜ್ಯದಿಂದ ಹೊರಗೆ ಹೋಗುವಂತೆ ಸೂಚಿಸಿತ್ತು.

ಇದನ್ನೂ ಓದಿ: ಸಂವಿಧಾನದ 370ನೇ ವಿಧಿ ತಿದ್ದುಪಡಿ ಬಗ್ಗೆ ರಾಷ್ಟ್ರಪತಿ ಅಧಿಸೂಚನೆ


ಶ್ರೀನಗರದ ಸರ್ ಪ್ರತಾಪ್ ಕಾಲೇಜು

ಶಾಲಾ ಕಾಲೇಜು ಆರಂಭ: ಜಮ್ಮು ಮತ್ತು ಕಾಶ್ಮೀರದ ಎಲ್ಲ ಪ್ರೌಢಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ರಾಜ್ಯ ಸರ್ಕಾರ ಬುಧವಾರದಿಂದ ಪುನರರಾಂಭಿಸಿದೆ.

ಆದರೆ ವಿದ್ಯಾರ್ಥಿಗಳ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಿದೆ. ಶ್ರೀನಗರ ಸರ್‌ ಪ್ರತಾಪ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಬಾಗಿಲಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳ ಗುರುತು ಪತ್ರ ಪರಿಶೀಲಿಸಿಯೇ ಕಾಲೇಜುಗಳ ಒಳಗೆ ಬಿಡಲಾಗುತ್ತಿದೆ. 

‘ನಾನು ನೋಟ್ಸ್‌ ಪಡೆದುಕೊಳ್ಳಲು ಕಾಲೇಜಿಗೆ ಬಂದಿದ್ದೆ. ತರಗತಿಗಳು ಇನ್ನೂ ಆರಂಭವಾಗಿಲ್ಲ. ಪರಿಸ್ಥಿತಿ ತಹಬದಿಗೆ ನಂತರ ತರಗತಿಗಳು ಆರಂಭವಾಗಲಿವೆ ಎಂದು ಉಪನ್ಯಾಸಕರು ಹೇಳುತ್ತಿದ್ದಾರೆ’ ಎನ್ನುವ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬನ ಹೇಳಿಕೆಯನ್ನು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

370ನೇ ವಿಧಿಯ ರದ್ದತಿಯ ನಂತರ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲಾಗುತ್ತಿದೆ. ಆದರೆ ಸರ್ಕಾರದ ವಿರುದ್ಧ ಜನರ ಮುನಿಸು ಮುಂದುವರಿದಿದೆ. ವ್ಯಾಪಾರ ಚಟುವಟಿಕೆಗಳು ಕಾವು ಕಳೆದುಕೊಂಡಿವೆ. ಮೊಬೈಲ್‌ ಮತ್ತು ಇಂಟರ್ನೆಟ್‌ ಸೇವೆಗಳ ನಿರ್ಬಂಧ ಬಹುತೇಕ ಹಾಗೆಯೇ ಇದೆ.

ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಅವರ ಮಗ ಒಮರ್ ಅಬ್ದುಲ್ಲಾ ಅವರಿಗೆ ಪಕ್ಷದ ನಿಯೋಗವನ್ನು ಭೇಟಿ ಮಾಡಲು ಅಕ್ಟೋಬರ್ 6ರಂದು ಅವಕಾಶ ಕಲ್ಪಿಸಲಾಗಿತ್ತು. ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆಗಸ್ಟ್‌ ತಿಂಗಳಿನಿಂದ ಗೃಹಬಂಧನದಲ್ಲಿಯೇ ಇದ್ದಾರೆ.

ಚುನಾವಣೆ: ಅಕ್ಟೋಬರ್ 24ರಂದು ಪ್ರದೇಶಾಭಿವೃದ್ಧಿ ಚುನಾವಣೆಗಳನ್ನು ನಡೆಸಲು ರಾಜ್ಯಪಾಲರ ಆಡಳಿತ ನಿರ್ಧರಿಸಿದೆ. ಆಗಸ್ಟ್‌ 5ರ ನಿರ್ಬಂಧದ ನಂತರ ನಡೆಯುತ್ತಿರುವ ಮೊದಲು ಚುನಾವಣೆ ಇದು. ‘ಪಕ್ಷದ ನಾಯಕರು ಇನ್ನೂ ಬಂಧನದಲ್ಲಿಯೇ ಇದ್ದಾರೆ. ಚುನಾವಣೆ ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧರಿಸಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗುಲಾ ಅಹಮದ್ ಮೀರ್ ಹೇಳಿದ್ದಾರೆ.

Post Comments (+)