ಕಾಶ್ಮೀರ; ಸೇನೆಯ ಗುಂಡಿಗೆ ಮೂವರ ಬಲಿ

7
ಕಲ್ಲುತೂರಾಟಗಾರರು–ಸೈನಿಕರ ಮಧ್ಯೆ ಮತ್ತೆ ಸಂಘರ್ಷ * ಅಂತರ್ಜಾಲ ಸ್ಥಗಿತ

ಕಾಶ್ಮೀರ; ಸೇನೆಯ ಗುಂಡಿಗೆ ಮೂವರ ಬಲಿ

Published:
Updated:
ಮೃತರ ಸಂಬಂಧಿಗಳ ರೋದನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಕಲ್ಲುತೂರಾಟಗಾರರು ಮತ್ತು ಸೈನಿಕರ ಮಧ್ಯೆ ಸಂಘರ್ಷ ನಡೆದಿದೆ.

ತಮ್ಮ ಮೇಲೆ ನಡೆಸಿದ ಕಲ್ಲುತೂರಾಟದಿಂದ ತಪ್ಪಿಸಿಕೊಳ್ಳಲು ಸೈನಿಕರು ನಡೆಸಿದ ಗುಂಡಿನ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಯುವಕರು ಮತ್ತು ಒಬ್ಬ ಬಾಲಕಿ ಸೇರಿದ್ದಾರೆ.

ಕುಲಗಾಮ್‌ನ ಹವೋರಾ ಮಿಶಿಪೋರಾ ಪ್ರದೇಶವನ್ನು ಹಾದುಹೋಗುವಾಗ ಜೀಪಿನ ಮೇಲೆ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದರು. ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಗುಂಡು ಹಾರಿಸಬೇಕಾಯಿತು ಎಂದು ಸೇನೆ ಹೇಳಿದೆ.

ಸೈನಿಕರ ಗುಂಡಿನ ದಾಳಿಯಲ್ಲಿ ಐವರು ನಾಗರಿಕರು ಗಾಯಗೊಂಡಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಂತರ್ಜಾಲ ಸ್ಥಗಿತ: ಸೈನಿಕರ ಗುಂಡಿನ ದಾಳಿಯಿಂದ ನಾಗರಿಕರು ಮೃತಪಟ್ಟಿರುವ ಸುದ್ದಿ ಹರಡಿ, ಮತ್ತಷ್ಟು ಹಿಂಸಾಚಾರ ನಡೆಯದಿರಲಿ ಎಂದು ರಾಜ್ಯದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ.

ವಾನಿ ಹತ್ಯೆ ವಾರ್ಷಿಕೋತ್ಸವಕ್ಕೆ ಮಿಶ್ರ ಪ್ರತಿಕ್ರಿಯೆ: ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್‌ನ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಾಗಿ ಜುಲೈ 8ಕ್ಕೆ ಎರಡು ವರ್ಷವಾಗಲಿದೆ. ವಾನಿ ಹತ್ಯೆಯ ವಾರ್ಷಿಕೋತ್ಸವದ ಅಂಗವಾಗಿ ಕಾಶ್ಮೀರ ಪ್ರತ್ಯೇಕತಾವಾದಿಗಳು ಶನಿವಾರದಿಂದಲೇ  ಬಂದ್‌ಗೆ ಕರೆ ನೀಡಿದ್ದರು.

ಆದರೆ, ಬಂದ್‌ಗೆ ಕಾಶ್ಮೀರ ಕಣಿವೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದನ್ನು ಬಿಟ್ಟರೆ, ಜನರ ಓಡಾಟ ಸಾಮಾನ್ಯವಾಗಿತ್ತು.

ಹಿಂಸಾಚಾರ ನಡೆಯುವ ಬಗ್ಗೆ ಮಾಹಿತಿ ಇದ್ದ ಕಾರಣ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಟ್ಟಣ, ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಅನಿರ್ದಿಷ್ಟಾವಧಿಯವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

2016ರಲ್ಲಿ ವಾನಿಯ ಹತ್ಯೆ ನಡೆದ ನಂತರ ಕಾಶ್ಮೀರ ಕಣಿವೆಯಲ್ಲಿ ಸತತ ನಾಲ್ಕು ತಿಂಗಳು ಪ್ರತಿಭಟನೆ–ಹಿಂಸಾಚಾರಗಳು ನಡೆದಿದ್ದವು. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದಿದ್ದ ಸಂಘರ್ಷದಲ್ಲಿ 85 ಮಂದಿ ಮೃತಪಟ್ಟಿದ್ದರು. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !