ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉದ್ಯಮಿಗಳ ಆರ್ಥಿಕ ನೆರವಿಗೆ ‘ಕಾಯಕ’

₹10 ಲಕ್ಷದವರೆಗೆ ಬಡ್ಡಿ ರಹಿತ ಸಾಲದ ಯೋಜನೆ
Last Updated 23 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಸಹಾಯ ಗುಂಪುಗಳ ಮೂಲಕ ಸಣ್ಣ ಉದ್ಯಮಗಳನ್ನು ಆರಂಭಿಸುವವರಿಗೆ ₹10 ಲಕ್ಷದವರೆಗೆ ಸಾಲ ನೀಡುವ ‘ಕಾಯಕ’ ಯೋಜನೆಗೆ ರಾಜ್ಯ ಸರ್ಕಾರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಿದೆ.

ಸ್ವಸಹಾಯ ಸಂಘಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಿಸಿದ್ದರು. ಯೋಜನೆ ಅನುಷ್ಠಾನದ ಹೊಣೆಯನ್ನು ಸಹಕಾರ ಇಲಾಖೆಗೆ ವಹಿಸಲಾಗಿದೆ.

‘ಆಹಾರ ಉತ್ಪನ್ನಗಳ ತಯಾರಿಕೆ, ಮಡಕೆ ಮತ್ತು ಅದರ ಉಪ ಉತ್ಪನ್ನಗಳು, ಗಾರ್ಮೆಂಟ್ಸ್‌, ಅಡಿಕೆ ಹಾಳೆಯ ವಿವಿಧ ಉತ್ಪನ್ನಗಳ ತಯಾರಿಕೆ ಸೇರಿ ಹಲವು ಬಗೆಯ ಸಣ್ಣ ಉದ್ಯಮಗಳನ್ನು ಆರಂಭಿಸಲು ಸಾಲ ನೀಡಲಾಗುತ್ತದೆ. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಬಹುದು’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಉತ್ಪನ್ನಗಳ ಬ್ರ್ಯಾಂಡಿಂಗ್‌ಗೆ ಸಮಿತಿ

ಯೋಜನೆಯನ್ನು ಜಾರಿಗೊಳಿಸಲು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಸಂಘಗಳ ಆಯ್ಕೆ, ಯೋಜನಾ ಚಟುವಟಿಕೆ ಹಾಗೂ ಉತ್ಪನ್ನಗಳನ್ನು ಗುರುತಿಸುವುದು, ಫಲಾನುಭವಿಗಳ ಕೌಶಲ ವೃದ್ಧಿಸಿ ಉದ್ಯಮಶೀಲತೆ ಹೆಚ್ಚಿಸಲು ತರಬೇತಿಗೆ ವ್ಯವಸ್ಥೆ ಕಲ್ಪಿಸುವುದು, ಕಾಯಕ ಯೋಜನೆಯಡಿ ತಯಾರಿಸಿದ ಉತ್ಪನ್ನಗಳನ್ನು ಏಕರೂಪದ ಬ್ರ್ಯಾಂಡಿಂಗ್‌ ಮಾಡುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಈ ಸಮಿತಿಗೆ ವಹಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಸ್ವ ಉದ್ಯೋಗ ಕೈಗೊಂಡು ನಿರಂತರ ಆದಾಯ ಗಳಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳನ್ನು ಒಂದುಗೂಡಿಸಿ ಹೊಸ ಸ್ವಸಹಾಯ ಗುಂಪುಗಳನ್ನು ರಚಿಸಬೇಕು.

ಸಾಲಕ್ಕೆ ಮಾನದಂಡ

10ಕ್ಕಿಂತ ಹೆಚ್ಚು ಹಾಗೂ 20ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರುವ ಸ್ವಸಹಾಯ ಗುಂಪುಗಳ ಸದಸ್ಯರ ಪೈಕಿ ಶೇ 70ಕ್ಕಿಂತ ಹೆಚ್ಚಿನ ಮಂದಿ ಬಿಪಿಎಲ್‌ ಸದಸ್ಯರಾಗಿರಬೇಕು. ಈ ಯೋಜನೆಯಡಿ ಶೇ 10ರಷ್ಟು ತರಬೇತಿಗೆ, ಶೇ 20ರಷ್ಟು ಮಾರುಕಟ್ಟೆ ವ್ಯವಸ್ಥೆಗೆ ಹಾಗೂ ಶೇ 70ರಷ್ಟನ್ನು ಬಡ್ಡಿ ಸಹಾಯಧನವಾಗಿ ಒದಗಿಸಲಾಗುತ್ತದೆ. ಗುಂಪುಗಳ ಸದಸ್ಯರು ಬ್ಯಾಂಕ್‌ಗಳಿಗೆ ಗುರುತಿನ ಚೀಟಿ, ಆಧಾರ್ ಸಂಖ್ಯೆ ಹಾಗೂ ಯೋಜನಾ ಘಟಕದ ಛಾಯಾಪ್ರತಿಗಳನ್ನು ಸಲ್ಲಿಸಬೇಕು.

***

2018–19ನೇ ಸಾಲಿನಲ್ಲಿ ಪ್ರತಿ ಜಿಲ್ಲೆಗೆ 100 ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತದೆ. ಒಂದು ವೇಳೆ ಅರ್ಜಿಗಳು ಜಾಸ್ತಿ ಬಂದರೆ 120 ಸಂಘಗಳಿಗೆ ವಿತರಿಸಲಾಗುತ್ತದೆ.

-ಎಂ.ಕೆ.ಅಯ್ಯಪ್ಪ, ಸಹಕಾರ ಸಂಘಗಳ ನಿಬಂಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT